ಜಿಲ್ಲೆ

ಕೆ.ವಿಕ್ರಮ್‌ರಾವ್ ನಿಧನಕ್ಕೆ ಭಾವಪೂರ್ಣ ಶ್ರದ್ಧಾಂಜಲಿ

ಹಾಸನ: ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ರಾಷ್ಟ್ರೀಯ ಅಧ್ಯಕ್ಷ ಕೆ.ವಿಕ್ರಮ್‌ರಾವ್ ಅವರ ನಿಧನದ ಹಿನ್ನೆಲೆ ನಗರದ ಜಿಲ್ಲಾ ಪತ್ರಕರ್ತರ ಸಂಘದಿಂದ ಬುಧವಾರ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಅಗಲಿದ ಹಿರಿಯ ಜೀವನಕ್ಕೆ ಒಂದು ನಿಮಿಷ ಮೌನ ಆಚರಿಸಲಾಯಿತು.

ಈ ವೇಳೆ ಮಾತನಾಡಿದ ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ಅಪರ ಪ್ರಧಾನ ಕಾರ್ಯದರ್ಶಿ ಎಚ್.ಬಿ.ಮದನಗೌಡ, ವಿಕ್ರಮ್‌ರಾವ್ ಅವರು 3 ದಶಕಗಳ ಕಾಲ ಸಂಘದ ರಾಷ್ಟ್ರೀಯ ಅಧ್ಯಕ್ಷರಾಗಿ ಗ್ರಾಮೀಣ ಪತ್ರಕರ್ತರಿಗೆ ಹೆಚ್ಚಿನ ಉತ್ತೇಜನ ನೀಡಿದ್ದರು. ಅವರ ನಿಧನ ತುಂಬಲಾರದ ನಷ್ಟ ಎಂದರು.

ದೇಶದಲ್ಲಿ ಮಾತ್ರವಲ್ಲದೆ ಹೊರ ದೇಶಗಳಲ್ಲೂ ಇವರು ಪತ್ರಕರ್ತರ ಸಂಘಟನೆ ಬಲಗೊಳ್ಳಲು ಶ್ರಮಿಸಿದ್ದರು. ಪತ್ರಕರ್ತರನ್ನು ಕುಟುಂಬದ ರೀತಿ ಕಾಣುತ್ತಿದ್ದರು. ಅಪಾರ ಮಂದಿಗೆ ಮಾರ್ಗದರ್ಶರಾಗಿದ್ದರು. ಪತ್ರಕರ್ತರ ಸಂಘ ಹಾಗೂ ಸರ್ಕಾರಗಳ ನಡುವೆ ಉತ್ತಮ ಬಾಂಧವ್ಯ ಬೆಸೆದಿದ್ದರು. ಅಂದು ಅವರು ರಾಷ್ಟ್ರಮಟ್ಟದಲ್ಲಿ ಕಟ್ಟಿದ ಸಂಘಟನೆ ಇಂದು ನಾಲ್ಕು ಭಾಗವಾಗಿದೆ. ಮತ್ತೆ ಒಗ್ಗೂಡಿಸಲು ಮಾಡಿದ ಪ್ರಯತ್ನ ಸಫಲವಾಗಲಿಲ್ಲ ಎಂದು ಬೇಸರ ಹೊರ ಹಾಕಿದರು.

ಕೆಯುಡಬ್ಲ್ಯೂಜೆ ವಿಶೇಷ ಪ್ರತಿನಿಧಿ ರವಿ ನಾಕಲಗೂಡು ಮಾತನಾಡಿ, ವಿಕ್ರಮ್‌ರಾವ್ ಅವರು ನೇರ ವ್ಯಕ್ತಿತ್ವ ಹೊಂದಿದ್ದರು. ಸಂಘಟನಾ ಚತುರರಾಗಿದ್ದರು. ಐಎಫ್‌ಡಬ್ಲ್ಯೂಜೆ ಸ್ಥಾಪಕ ಅಧ್ಯಕ್ಷರಾಗಿ ಪತ್ರಕರ್ತರ ಏಳಿಗೆಗೆ ದುಡಿದಿದ್ದರು. ಹಾಸನ ಜಿಲ್ಲೆಯೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. ಭಾಷೆಯ ಮೇಲೆ ಹಿಡಿತ ಹೊಂದಿದ್ದರು. ಕಮಾಂಡಿಂಗ್ ಶಕ್ತಿ ಹೊಂದಿದ್ದರು. ದೇಶಾದ್ಯಂತ ಸಂಘಕ್ಕೆ ಶಕ್ತಿ ಕೊಟ್ಟಿದ್ದರು ಎಂದರು.

ಈ ವೇಳೆ ಜಿಲ್ಲಾ ಸಂಘದ ಮಾಜಿ ಅಧ್ಯಕ್ಷರಾದ ಬಿ.ಆರ್. ಉದಯ ಕುಮಾರ್, ಕೆ.ಆರ್.ಮಂಜುನಾಥ್, ಲೀಲಾವತಿ, ಪ್ರಧಾನ ಕಾರ್ಯದರ್ಶಿ ಬಿ.ಸಿ. ಶಶಿಧರ್ ಇದ್ದರು.