ಮಾಂಜರಿ: ಗ್ರಾಮೀಣ ಭಾಗದ ರೈತರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಪ್ರಾರಂಭಿಸಿದ ಕೆ.ಪಿ.ಮಗೆಣ್ಣವರ ಲಕ್ಷ್ಮೀ ಸೌಹಾರ್ದ ಸಂಸ್ಥೆ ಪ್ರಸಕ್ತ ಆರ್ಥಿಕ ವರ್ಷದಲ್ಲಿ ೮.೭೫ ಕೋಟಿ ರೂ. ನಿವ್ವಳ ಲಾಭಗಳಿಸಿದೆ ಎಂದು ಸಂಸ್ಥಾಪಕ ಅಧ್ಯಕ್ಷ, ಮಾಜಿ ಶಾಸಕ ಕಲ್ಲಪ್ಪ ಮಗೆಣ್ಣವರ ತಿಳಿಸಿದರು.
ಗ್ರಾಮದ ಮುಖ್ಯ ಕಚೇರಿಯಲ್ಲಿ ಭಾನುವಾರ ಏರ್ಪಡಿಸಿದ್ದ ಸನ್ಮಾನ ಸಮಾರಂಭ ಹಾಗೂ ಪ್ರಸಕ್ತ ವರ್ಷದ ೨೦೨೪-೨೫ನೇ ಸಾಲಿನ ಸಹಕಾರಿಯ ಲೆಕ್ಕ ಪತ್ರ ಮುಕ್ತಾಯ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು. ಗ್ರಾಮದ ಸಹಕಾರಿಯು ೮.೭೫ ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಕಾಗವಾಡ ಶಾಖೆ ೧.೧೩ ಕೋಟಿ ರೂ. ಲಾಭಾಂಶ ಗಳಿಸಿ ಮೊದಲನೇ ಸ್ಥಾನದಲ್ಲಿದೆ ಎಂದರು.
ಕೆ.ಪಿ.ಮಗೆಣ್ಣವರಲಕ್ಷ್ಮೀ ಸೌಹಾರ್ದ ಸಂಸ್ಥೆಯು ೨೯ ಶಾಖೆ ಹೊಂದಿದ್ದು, ಇದರಲ್ಲಿ ಪ್ರಸಕ್ತ ಸಾಲಿನಲ್ಲಿ ಕಾಗವಾಡ ಶಾಖೆಯು ಮೊದಲನೇ ಸ್ಥಾನದಲ್ಲಿದೆ. ಅದಕ್ಕಾಗಿ ಸಲಹಾ ಸಮಿತಿಯ ಅಧ್ಯಕ್ಷ ಟಿ.ಕೆ.ಧೋತ್ರೆ ಹಾಗೂ ಮ್ಯಾನೇಜರ್ ರಾಘವೇಂದ್ರ ಕುಲಕರ್ಣಿ ಅವರನ್ನು ಬ್ಯಾಂಕ್ ಅಧ್ಯಕ್ಷ ಸತೀಶ ಮಗೆಣ್ಣವರ ಸನ್ಮಾನಿಸಿ ಗೌರವಿಸಿದರು. ಎರಡನೇ ಸ್ಥಾನದಲ್ಲಿ ಹಾರೂಗೇರಿ ಶಾಖೆ ಹಾಗೂ ಮೂರನೇ ಸ್ಥಾನವದಲ್ಲಿ ಮಾಂಜರಿ ಶಾಖೆ ಸ್ಥಾನದಲ್ಲಿದೆ. ಈ ಮೂರು ಶಾಖೆಗಳ ಸಲಹಾ ಸಮಿತಿಯ ಅಧ್ಯಕ್ಷರು ಹಾಗೂ ಮ್ಯಾನೇಜರ್ ಅವರನ್ನು ಸನ್ಮಾನಿಸಿದರು.
ಸಂಸ್ಥೆಯ ಮುಖ್ಯ ವ್ಯವಸ್ಥಾಪಕ ಪ್ರದೀಪ ಮಗೆಣ್ಣವರ ಮಾತನಾಡಿ, ಮಾರ್ಚ್ ೨೦೨೫ರ ವರೆಗೆ ಸಂಸ್ಥೆಯು ೧೧,೫೮೪ ಸದಸ್ಯರನ್ನು ಹೊಂದಿದ್ದು, ೮೭.೧೭ ಲಕ್ಷ ರೂ. ಷೇರು ಬಂಡವಾಳವಿದೆ. ೩೩೪.೨೪ ಕೋಟಿ ರೂ. ಠೇವಣಿ ಸಂಗ್ರಹಿಸಿದ್ದು, ೧೭೭.೬೧ ಕೋಟಿ ರೂ. ಸಾಲ ವಿತರಿಸಲಾಗಿದೆ ಎಂದರು. ೩೭೪ ಕೋಟಿ ರೂ. ದುಡಿಯುವ ಬಂಡವಾಳವಿದೆ ಎಂದರು. ಸಾಲ ವಸೂಲಾತಿ ಶೇ.೯೭ ರಷ್ಟು ಆಗಿದೆ. ೯ ಶಾಖೆಗಳು ಶೇ.೧೦೦ ರಷ್ಟು ಸಾಲ ವಸೂಲಾತಿ ಮಾಡಿದೆ ಎಂದರು.
೨೯ ಶಾಖೆಗಳ ಸಲಹಾ ಸಮಿತಿಯ ಅಧ್ಯಕ್ಷರನ್ನು ಸನ್ಮಾನಿಸಲಾಯಿತು.
ಬ್ಯಾಂಕ್‌ನ ಅಧ್ಯಕ್ಷ ಸತೀಶ ಮಗೆಣ್ಣವರ, ಉಪಾಧ್ಯಕ್ಷ ಸದಾಶಿವ ಮಿರಜಿ, ನಿರ್ದೇಶಕರಾದ ತಾತ್ಯಾಸಾಹೇಬ ಶೇಡಬಾಳೆ ಅಶೋಕ ಚಿಮಾಯಿ, ಭೀಮು ಭೋಲೆ, ನೇಮಿನಾಥ ಪಟ್ಟಣಕುಡೆ. ಸಾಗರ ಮಂಗಸೂಳಿ, ಮ್ಯಾನೇಜರ್ ಕಿರಣ ಮೋನೆ, ಚಂದ್ರಕಾಂತ ಪಾಟೀಲ, ರಾಜು ದೊಡ್ಡಣ್ಣವರ, ರಾಹುಲ ಶಹಾ, ಎ.ಜಿ.ಹಳ್ಳಿ, ಅಶೋಕ ಹುಗ್ಗಿ ಇತರರು ಇದ್ದರು.