ಜಿಲ್ಲೆ

ಕೆ.ಗುಡಿಯಲ್ಲಿ ಪಕ್ಷಿ ಸಮೀಕ್ಷೆಗೆ ಚಾಲನೆ

ಯಳಂದೂರು: ಬಿಆರ್‌ಟಿ ಹುಲಿ ಯೋಜನಾ ಪ್ರದೇಶ ವ್ಯಾಪ್ತಿಯ ಕೆ.ಗುಡಿ ವಲಯದಲ್ಲಿ ಪಕ್ಷಿ ಸಮೀಕ್ಷೆಗೆ ಗುರುವಾರ ಚಾಲನೆ ದೊರೆಯಿತು.


ನಾಲ್ಕು ದಿನ ನಡೆಯುವ ಪಕ್ಷಿ ಸಮೀಕ್ಷೆಗೆ ಬಿಆರ್‌ಟಿ ಹುಲಿ ಯೋಜನೆ ನಿರ್ದೇಶಕಿ ಜೆ.ದೀಪಾ ಚಾಲನೆ ನೀಡಿ ಮಾತನಾಡಿ, ಪಕ್ಷಿ ವೀಕ್ಷಣೆಗೆ 50 ಮಂದಿ ಪಕ್ಷಿ ಪ್ರಿಯರು ಈಗಾಗಲೇ ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. ಜತೆಗೆ ಆಂಧ್ರಪ್ರದೇಶದ ಅರಣ್ಯ ಕಾಲೇಜಿನ 17 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 67 ಸದಸ್ಯರನ್ನು ಕಾಡಿನಲ್ಲಿ ಪಕ್ಷಿ ವೀಕ್ಷಣೆ ಹಾಗೂ ಮಾಹಿತಿ ಸಂಗ್ರಹಕ್ಕೆ ಅವಕಾಶ ಮಾಡಿಕೊಡಲಾಗಿದೆ. ಕೆ. ಗುಡಿ, ಬಿಳಿಗಿರಿರಂಗನಬೆಟ್ಟ, ಬೂದಿಪಡಗ, ಜೋಡಿಗೆರೆ, ಬೆಲ್ಲವತ್ತ, ಪುರಾಣಿಪೋಡು, ಕೊಳ್ಳೇಗಾಲ ವಲಯದ ಕಡೆ ಈ ತಂಡಗಳು ಪಕ್ಷಿ ಸಮೀಕ್ಷೆ ಮಾಡಲಿದೆ ಎಂದು ಮಾಹಿತಿ ನೀಡಿದರು.


ಖ್ಯಾತ ಪಕ್ಷಿ ತಜ್ಞ ಡಾ.ಸಲೀಂ ಆಲಿ 1939ರಲ್ಲಿ ಇಲ್ಲಿಗೆ ಭೇಟಿ ನೀಡಿ ಇಲ್ಲಿಂದಲೇ ತಮ್ಮ ಬರ್ಡ್ಸ್ ಆಫ್ ಮೈಸೂರು ಸಮೀಕ್ಷೆ ಪ್ರಾರಂಭಿಸಿ 100ಕ್ಕೂ ಹೆಚ್ಚು ಪ್ರಭೇದದ ಪಕ್ಷಿಗಳನ್ನು ಗುರುತಿಸಿದ್ದರು. ನಂತರ 2012ರಲ್ಲಿ ನಡೆದ ಪಕ್ಷಿ ಸಮೀಕ್ಷೆ ಪ್ರಕಾರ ಬಿಆರ್‌ಟಿ ಹುಲಿ ರಕ್ಷಿತ ಅರಣ್ಯ ಪ್ರದೇಶದಲ್ಲಿ 272 ಪ್ರಭೇದದ ಹಕ್ಕಿಗಳಿವೆ ಎಂದು ಗುರುತಿಸಲಾಗಿತ್ತು. ಈಗ ಇದು ಮತ್ತಷ್ಟು ಏರಿಕೆ ಕಂಡಿರಬಹುದು ಅಥವಾ ಇಳಿಕೆ ಆಗಿರುವ ಸಾಧ್ಯತೆಗಳೂ ಅಲ್ಲಗೆಳೆಯುವಂತಿಲ್ಲ. ಈ ಬಗ್ಗೆ ಪಕ್ಷಿ ವೀಕ್ಷಣೆಗೆ ತೆರಳುವ ತಂಡಗಳು ವೀಕ್ಷಣೆ ಮಾಡಿ ಮಾಹಿತಿ ಕಲೆ ಹಾಕಬೇಕು. ಸ್ಥಳೀಯ ಸೋಲಿಗರಿಗೆ ಇದರ ಬಗ್ಗೆ ಹೆಚ್ಚಿನ ಮಾಹಿತಿ ಇದ್ದು, ಈ ಬಗ್ಗೆಯೂ ಹೆಚ್ಚಿನ ಗಮನ ನೀಡಬೇಕು ಎಂದು ಸಲಹೆ ನೀಡಿದರು.


ಬಿಆರ್‌ಟಿ ಯಳಂದೂರು ವಲಯದ ಎಸಿಎಫ್ ಮಹಾದೇವಯ್ಯ, ಕೆ.ಗುಡಿ ಆರ್‌ಎಫ್‌ಒ ವಿನೋದ್‌ಗೌಡ, ಲೋಕೇಶ್‌ಮೂರ್ತಿ, ಸೇರಿದಂತೆ ಪಕ್ಷಿ ಸಮೀಕ್ಷೆ ಸದಸ್ಯರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಹಾಜರಿದ್ದರು.