ಜಿಲ್ಲೆ

ಕೆ.ಕೆ.ಪ್ರಸಾದ್ ಗ್ರಾಪಂ ಸದಸ್ಯತ್ವ ವಜಾ

ಸುಂಟಿಕೊಪ್ಪ: ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಹಾಗೂ ಹಾಲಿ ಸದಸ್ಯ ಕೆ.ಕೆ.ಪ್ರಸಾದ್ ಅವರನ್ನು ಸದಸ್ಯತ್ವ ಸ್ಥಾನದಿಂದ ವಜಾಗೊಳಿಸಿ, ಮುಂದಿನ 6 ವರ್ಷಗಳ ಕಾಲ ಚುನಾವಣೆಗೆ ನಿಲ್ಲದಂತೆ ಆದೇಶಗೊಳಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಆದೇಶ ಹೊರಡಿಸಿದೆ.

ಕೆ.ಕೆ.ಪ್ರಸಾದ್ ಸುಂಟಿಕೊಪ್ಪ ಗ್ರೇಡ್ 1 ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾಗಿದ್ದ ವೇಳೆ ಪರಿಶಿಷ್ಟ ಜಾತಿಗೆ ಮೀಸಲಾದ 30 ಸಾವಿರ ರೂ. ಅನುದಾನವನ್ನು ದುರುಪಯೋಗಪಡಿಸಿಕೊಂಡಿರುವುದು ಸಾಬೀತಾಗಿರುವ ಹಿನ್ನೆಲೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಪಾರ ಮುಖ್ಯ ಕಾರ್ಯದರ್ಶಿ ಉಮಾ ಮಹದೇವನ್ ಅವರು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಆಧಿನಿಯಮ 1993 ಪ್ರಕರಣ 43(ಎ) ಅಡಿಯಲ್ಲಿ ಆನರ್ಹಗೊಳಿಸಿರುವುದಲ್ಲದೆ ಇದೇ ಅಧಿನಿಯಮ 48(4) ಹಾಗೂ 43 (ಎ) (2) ಅನ್ವಯ 6 ವರ್ಷಗಳ ಕಾಲ ಚುನಾವಣೆಗೆ ನಿಲ್ಲದಂತೆ ಆನರ್ಹಗೊಳಿಸಿ ಆದೇಶಿಸಿದ್ದಾರೆ.

ಪ್ರಕರಣದ ವಿವರ: ಕೆ.ಕೆ.ಪ್ರಸಾದ್ ಉಪಾಧ್ಯಕ್ಷರಾಗಿದ್ದ ಸಂದರ್ಭ ಗ್ರಾಮ ಪಂಚಾಯಿತಿಗೆ ಸೇರಿದ ಮಾರುಕಟ್ಟೆ ಆವರಣದಲ್ಲಿರುವ ಮಳಿಗೆ-49 ಅನ್ನು ಅನಧಿಕೃತವಾಗಿ ವಶಕ್ಕೆ ತೆಗೆದುಕೊಂಡು ಯಾವುದೇ ಹರಾಜು ಪ್ರಕ್ರಿಯೆ ನಡೆಸದೆ 8 ತಿಂಗಳಿಂದ ಒಣಮೀನು ಮಾರಾಟ ನಡೆಸುತ್ತಿದ್ದರು. ಗ್ರಾಮ ಪಂಚಾಯಿತಿ ಅನುದಾನದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ದೇವು ಎಂಬುವರ ಹೆಸರಿಗೆ ಸೌರವಿದ್ಯುತ್ ದೀಪ ಅಳವಡಿಸಲು 30 ಸಾವಿರ ರೂ. ಅನುದಾನ ಮಂಜೂರು ಮಾಡಿಸಿಕೊಂಡು ಸದರಿ ಬೀದಿ ದೀಪವನ್ನು ತಮ್ಮ ತಾಯಿಯ ಮನೆಗೆ ಅಳವಡಿಸಿದ್ದರು. ಈ ಸಂಬಂಧ ಪರಿಶಿಷ್ಟ ಜಾತಿಗೆ ಮೀಸಲಿದ್ದ ಅನುದಾನ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಜಿ.ಎನ್.ದಿನೇಶ್ ಎಂಬುವರು ದೂರು ಸಲ್ಲಿಸಿದ್ದರು.

ದೂರು ವಿಚಾರಣೆ ನಡೆಸಿದ ಬಳಿಕ ಪ್ರಾದೇಶಿಕ ಆಯುಕ್ತರು 2024ರ ಜುಲೈ 5ರಂದು ಸರ್ಕಾರಕ್ಕೆ ವರದಿ ಸಲ್ಲಿಸಿ ಅಧಿಕಾರ ದುರುಪಯೋಗ ಮೇಲ್ನೋಟಕ್ಕೆ ಸಾಬೀತಾದ ಹಿನ್ನೆಲೆಯಲ್ಲಿ ಕ್ರಮಕ್ಕೆ ಶಿಫಾರಸು ಮಾಡಿದ್ದರು. ಈ ಹಿನ್ನೆಲೆಯಲ್ಲಿ ಪ್ರಾದೇಶಿಕ ಆಯುಕ್ತರ ವರದಿಯೊಂದಿಗೆ 2024ರ ಆಗಸ್ಟ್ 12ರಂದು ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿತ್ತು. ಈ ಬಗ್ಗೆ ಕೆ.ಕೆ.ಪ್ರಸಾದ್ ಲಿಖಿತ ದಾಖಲೆಗಳನ್ನು ಸಲ್ಲಿಸಿ ತಮ್ಮನ್ನು ಆರೋಪ ಮುಕ್ತಗೊಳಿಸುವಂತೆ ಕೋರಿದ್ದರು.

ಸರ್ಕಾರದ ಅಪಾರ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ 2024ರ ಅಕ್ಟೋಬರ್ 8ರಂದು ವಿಚಾರಣೆಗೆ ತಿಳಿವಳಿಕೆ ಪತ್ರ ಜಾರಿಗೊಳಿಸಲಾಗಿತ್ತು. ಆದರಂತೆ ಕುಶಾಲನಗರ ತಾಲೂಕು ಪಂಚಾಯಿತಿಯ ಕಾರ್ಯನಿರ್ವಹಣಾಧಿಕಾರಿ ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯಿಂದ ಎಸ್‌ಡಿಡಿಎ ಮತ್ತು ಫಲಾನುಭವಿಯಾದ ದೇವು ಹಾಗೂ ಅಂದಿನ ಉಪಾಧ್ಯಕ್ಷರಾಗಿದ್ದ ಕೆ.ಕೆ.ಪ್ರಸಾದ್ ವಿಚಾರಣೆಗೆ ಹಾಜರಾಗಿದ್ದರು.

ವಿಚಾರಣೆಯಲ್ಲಿ ವಾದಿ, ಪ್ರತಿವಾದಿಗಳ ಹೇಳಿಕೆ ಮತ್ತು ದಾಖಲೆಗಳನ್ನು ಪರಿಶೀಲಿಸಿದಾಗ ಅನುದಾನ ದುರುಪಯೋಗ ಪಡಿಸಿಕೊಂಡಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಕೆ.ಕೆ.ಪ್ರಸಾದ್ ಅವರನ್ನು ಸದಸ್ಯತ್ವ ಸ್ಥಾನದಿಂದ ವಜಾಗೊಳಿಸಿ ಮತ್ತು ಮುಂದಿನ 6 ವರ್ಷಗಳ ಕಾಲ ಚುನಾವಣೆಗೆ ನಿಲ್ಲಲು ಅನರ್ಹಗೊಳಿಸಿ 2025ರ ಜೂನ್ 21ರಂದು ಇಲಾಖೆ ಅಧಿಕೃತ ಆದೇಶ ಹೊರಡಿಸಿದೆ.