ಜಿಲ್ಲೆ

ಕೆ.ಎಸ್. ಲಿಂಗೇಶ್ ಹೇಳಿಕೆಗೆ ಕಾಂಗ್ರೆಸ್‌ನ ದೇವರಾಜೇಗೌಡ ತಿರುಗೇಟು

ಹಾಸನ: ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಸ್. ಲಿಂಗೇಶ್ ಅವರು ಆಧಾರರಹಿತವಾಗಿ ಡಿ.ಕೆ. ಶಿವಕುಮಾರ್ ಮೇಲೆ ಸುಳ್ಳು ಆರೋಪ ಮಾಡುವ ಬದಲು ನೇರವಾಗಿ ಎಸ್‌ಐಟಿಗೆ ದೂರು ಕೊಡಲಿ ಎಂದು ಕಾಂಗ್ರೆಸ್ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ದೇವರಾಜೇಗೌಡ ಸವಾಲು ಹಾಕಿದರು.
ಕಳೆದ ಒಂದು ವಾರದಿಂದ ಪೆನ್‌ಡ್ರೈವ್ ವಿಚಾರವಾಗಿ ನಡೆಯುತ್ತಿರುವ ಎಲ್ಲಾ ವಿದ್ಯಮಾನವನ್ನು ರಾಜ್ಯದ ಜನತೆ ನೋಡುತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಬಿಡುಗಡೆಯಾದ ಪೆನ್‌ಡ್ರೈವ್ ಜೆಡಿಎಸ್ ಪಕ್ಷದ ಮುಖಂಡರಿಗೆ ಸೇರಿದೆ ಎಂದು ಮಾಧ್ಯಮದಲ್ಲಿ ಬಿತ್ತರವಾಗಿದೆ. ಈ ಬಗ್ಗೆ ಹಲವಾರು ರಾಜಕೀಯ ಮುಖಂಡರು ಚರ್ಚೆ ಮಾಡಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದೆ ವಿಚಾರವಾಗಿ ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷರಾದ ಕೆ.ಎಸ್. ಲಿಂಗೇಶ್ ಅವರು ಪೆನ್ ಡ್ರೈವ್ ವಿಚಾರವಾಗಿ ಮಾತನಾಡಿದ್ದು, ಪೆನ್‌ಡ್ರೈವ್ ಬಿಡುಗಡೆ ಮಾಡಿರುವುದು ಡಿ.ಕೆ. ಶಿವಕುಮಾರ್ ಎಂದು ಆರೋಪ ಮಾಡಿದ್ದಾರೆ. ಹೀಗೆ ಆಧಾರರಹಿತ ಹೇಳಿಕೆ ಕೊಡುವುದು ನಿಮಗೆಷ್ಟು ಸರಿ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನೆ ಮಾಡಿದರು.
ಪ್ರಕರಣ ಸಂಬಂಧ ಎಸ್‌ಐಟಿ ರಚನೆ ಆಗಿದ್ದು, ಅಧಿಕಾರಿಗಳು ಸಂತ್ರಸ್ತರನ್ನು ಭೇಟಿ ಮಾಡಿ ಮಾಹಿತಿ ಕಲೆ ಹಾಕುತ್ತಿದ್ದಾರೆ. ನೀವು ಸುದ್ದಿಗೋಷ್ಠಿಯಲ್ಲಿ ಆರೋಪ ಮಾಡುವ ಬದಲು ನೇರವಾಗಿ ಎಸ್‌ಐಟಿಗೆ ಬರವಣಿಗೆ ಮೂಲಕ ದೂರು ಕೊಡಿ. ನೀವು ಸುಳ್ಳು ಆರೋಪ ಮಾಡಿದ್ದು, ಇದು ನಿಮಗೆ ಶೋಭೆ ತರುವುದಿಲ್ಲ. ಸತ್ಯಾಂಶವನ್ನು ತಿಳಿದು ಮಾತನಾಡಿದರೆ ನಿಮಗೆ ಗೌರವ ಸಿಗುತ್ತದೆ ಎಂದು ಟಾಂಗ್ ನೀಡಿದರು.
ಈಗಾಗಲೇ ಪೆನ್‌ಡ್ರೈವ್ ಹಂಚಿಕೆ ಮಾಡಿದ ಡ್ರೈವರ್ ಕಾರ್ತಿಕ್ ತಾನು ಬಿಜೆಪಿ ಮುಖಂಡ ದೇವರಾಜೇಗೌಡ ಅವರಿಗೆ ಕೊಟ್ಟಿದ್ದೇನೆ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ಆದಾಗ್ಯೂ ಕಾಂಗ್ರೆಸ್ ಮೇಲೆ ಲಿಂಗೇಶ್ ಅವರು ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ. ಜವಾಬ್ದಾರಿಯುತ ವ್ಯಕ್ತಿಯಾಗಿ ಈ ರೀತಿ ಗಾಳಿಯಲ್ಲಿ ಗುಂಡು ಹಾರಿಸುವ ಕೆಲಸ ಮಾಡುತ್ತಿರುವ ಲಿಂಗೇಶ್ ಅವರು ಡಿಸಿಎಂ ಡಿಕೆ ಶಿವಕುಮಾರ್ ಕೈವಾಡ ಇದೆ ಎಂದರೆ ಆ ಬಗ್ಗೆ ದಾಖಲೆಗಳಿದ್ದರೆ ಎಸ್‌ಐಟಿ ಮುಂದೆ ಹಾಜರುಪಡಿಸಲಿ ಎಂದು ಸಲಹೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬಿ.ಕೆ. ಮಂಜುನಾಥ್, ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷ ಮಲ್ಲಿಗೇವಾಳು ದೇವಪ್ಪ, ಕಾಂಗ್ರೆಸ್ ಮುಖಂಡರಾದ ನಾಯಕರಹಳ್ಳಿ ಅಶೋಕ್, ಹೊಂಬಳೇಶ್ ಇತರರು ಉಪಸ್ಥಿತರಿದ್ದರು.