ಹಾಸನ: ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ್ ಅವರ ಬಗ್ಗೆ ಹಗುರವಾಗಿ ಮಾತನಾಡಿರುವ ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಶನಿವಾರ ಪ್ರತಿಭಟಿಸಿ, ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಿಂದ ಹೊರಟ ಪ್ರತಿಭಟನಾ ಮೆರವಣಿಗೆ ಬಿ.ಎಂ.ರಸ್ತೆ, ಡಿಸಿ ಕಚೇರಿ ಎದುರು ರಸ್ತೆ ತಡೆ ನಡೆಸಿ ಈಶ್ವರಪ್ಪ ವಿರುದ್ಧ ಘೋಷಣೆ ಕೂಗಿದರು.ಈ ವೇಳೆ ಈಶ್ವರಪ್ಪ ಅವರ ಪ್ರತಿಕೃತಿಯನ್ನು ದಹಿಸಿ ಘೋಷಣೆ ಕೂಗಿದರು.
ಈ ವೇಳೆ ಮಾತನಾಡಿದ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಂಜಿತ್ ಗೊರೂರು, ಮಾನಸಿಕ ಅಸ್ವಸ್ಥರಂತೆ ಇಡೀ ಕರ್ನಾಟಕದಲ್ಲಿ ಹುಚ್ಚನಂತೆ ವರ್ತಿಸುವ ಏಕೈಕ ರಾಜಕಾರಣಿ ಎಂದರೆ ಈಶ್ವರಪ್ಪ. ಹರುಕು ಬಾಯಿ ಈಶ್ವರಪ್ಪ ಅವರು ಬೆಂಗಳೂರು ಗ್ರಾಮಾಂತರ ಸಂಸದರು ಮತ್ತು ನಮ್ಮ ನಾಯಕರಾದ ಡಿ.ಕೆ. ಸುರೇಶ್ ಅವರ ಬಗ್ಗೆ ಬಹಳ ಹಗುರವಾಗಿ ಮಾತನಾಡಿದ್ದಾರೆ. ಅವರನ್ನು ಗುಂಡಿಕ್ಕಿ ಕೊಲ್ಲುವಂತೆ ಪ್ರೇರಪಣೆ ನೀಡಿದ್ದಾರೆ. ಅವರನ್ನು ಕೂಡಲೇ ಬಂಧಿಸಿ ಶಿಸ್ತುಕ್ರಮ ಜರುಗಿಸುವಂತೆ ಆಗ್ರಹಿಸಿದರು.
ಈಶ್ವರಪ್ಪ ಹೇಳಿಕೆ ಖಂಡನೀಯ,ಪ್ರಚೋದನಾಕಾರಿ ಹೇಳಿಕೆ ನೀಡಿರುವ ಅವರ ಮತ್ತು ಬಿಜೆಪಿಯ ಸಂಸ್ಕೃತಿಯನ್ನು ಹೊರ ಹಾಕಿದ್ದಾರೆ. ನಾಡು ನುಡಿಗಾಗಿ, ಇಡೀ ಕರ್ನಾಟಕದ ಪರವಾಗಿ ಧ್ವನಿ ಎತ್ತಿದ ಡಿ.ಕೆ. ಸುರೇಶ್ ಅವರನ್ನು ಹತ್ಯೆ ಮಾಡಿ ಎಂದು ಹೇಳಿರುವುದು ಇಡೀ ಬಿಜೆಪಿಯ ಮನಸ್ಥಿತಿಯನ್ನು ತೋರಿಸುತ್ತದೆ.ನಮ್ಮ ಸಂಸದರು ಕೇಂದ್ರದಿಂದ ಕರ್ನಾಟಕ್ಕೆ ಬರುವ ಪಾಲನ್ನು ಮಾತ್ರ ಕೇಳಿದ್ದಾರೆ. ಅಷ್ಟಕ್ಕೇ ಅಸಂಬದ್ಧ ಹೇಳಿಕೆ ನೀಡಿರುವುದು ದಮನಕಾರಿ ಧೋರಣೆ ಎಂದು ಖಂಡಿಸಿದರು.
ಕರ್ನಾಟಕಕ್ಕೆ ಆಗಿರುವ ಅನ್ಯಾದಯ ವಿರುದ್ಧದ ಹೋರಾಟಕ್ಕೆ ದನಿಗೂಡಿಸಬೇಕಿದ್ದ ಬಿಜೆಪಿಯವರು ಏನೋ ಪ್ರಮಾದ ಆಗಿದೆ ಎಂಬಂತೆ ಬಿಂಬಿಸಲು ಹೊರಟಿರುವುದು ದುರದೃಷ್ಟಕರ ಎಂದರು.ಯಾರು ಏನೇ ಹೇಳಿದರೂ, ನಾಡು-ನುಡಿಯ ಪರ ದನಿ ಎತ್ತಿ ಹೋರಾಟ ಮಾಡುವುದನ್ನು ಮುಂದುವರಿಸಲಿದೆ. ನಂತರವೂ ಪ್ರಚೋದನಾಕಾರಿ ಹೇಳಿಕೆ ನೀಡಿದರೆ ಹೋರಾಟ ತೀವ್ರಗೊಳಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಯೂತ್ ಕಾಂಗ್ರೆಸ್ ಮುಖಂಡರಾದ ಅವಿನಾಶ್, ವಿವೇಕ್, ಪ್ರವೀಣ್, ಲಿಖಿತ್, ರಘು, ಕುಮಾರ್ ಇತರರು ಇದ್ದರು.