ತರೀಕೆರೆ: ತಾಲೂಕಿನ ಜಾನಪದ ಲೋಕಕ್ಕೆ ಮತ್ತೊಂದು ಪ್ರಶಸ್ತಿಯ ಗರಿ ಮುಡಿಗೇರಿದೆ. ರಾಜ್ಯ ಸರ್ಕಾರ 2022-23ನೇ ಸಾಲಿನ ಜಾನಪದ ಅಕಾಡೆಮಿ ಪ್ರಶ್ತಸಿ ಪ್ರಕಟಿಸಿದ್ದು ಕುಡ್ಲೂರು ಗ್ರಾಮದ ವೀರಗಾಸೆ ಕಲಾವಿದ ಕೆ.ಎಚ್.ರೇವಣ್ಣಸಿದ್ದಪ್ಪ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕರಡೆ ವಾದ್ಯ ಕಲಾವಿದ ಹಾಲಪ್ಪ, ನಿಂಗಮ್ಮ ದಂಪತಿ ಪುತ್ರನಾಗಿ 1946ರಲ್ಲಿ ಜನಿಸಿದ ಕೆ.ಎಚ್.ರೇವಣಸಿದ್ದಪ್ಪ (76) ಕುಡ್ಲೂರು ಗ್ರಾಮದಲ್ಲಿ 8ನೇ ತರಗತಿವರೆಗೆ ಕಲಿತಿದ್ದಾರೆ. ತಂದೆ ಬಾರಿಸುತ್ತಿದ್ದ ಕರಡೆಯಿಂದ ಆಕರ್ಷಿತರಾಗಿ ಬಾಲ್ಯದಿಂದಲೇ ಗಂಡು ಕಲೆಯಾದ ವೀರಗಾಸೆಯನ್ನು ಅಪ್ಪಿಕೊಂಡರು. ತಂದೆಯಿಂದ ಬಳುವಳಿಯಾಗಿ ಬಂದ ಕಲೆಯನ್ನು ಊರಿನ ದೇವರ ಕಾರ್ಯದ ಜತೆಗೆ ಸುತ್ತಮುತ್ತಲ ಗ್ರಾಮಗಳಲ್ಲಿ ನಡೆಯುತ್ತಿದ್ದ ದೇವರ ಪೂಜಾ ಕಾರ್ಯ ಮೆರವಣಿಗೆಗಳಲ್ಲಿ ಪ್ರದರ್ಶಿಸಿ ಜನರ ಮೆಚ್ಚುಗೆ ಗಳಿಸಿದ್ದರು.
ಕಲೆಯ ಪರಂಪರೆ ಮುಂದುವರಿಸಬೇಕೆನ್ನುವ ಅಭಿಲಾಷೆಯಿಂದ ಗ್ರಾಮದಲ್ಲಿದ್ದ ವೀರಗಾಸೆ ಕಲಾ ತಂಡ ಸೇರಿಕೊಂಡರು. ಉತ್ಸವ, ಮೆರವಣಿಗೆ, ಸಮಾರಂಭಗಳಲ್ಲಿ ಕರಡೆ, ಚಮರ, ದೋಣು ಬಡಿದು ಕಲಾ ಕೌಶಲ ಮೆರೆದರು. ಕರಡೆ ಬಡಿಯುತ್ತಲೇ ನೃತ್ಯದ ಕಡೆ ಆಕರ್ಷಿತರಾಗಿ ಪ್ರತಿಭೆ ಅನಾವರಣಗೊಳಿಸಿದರು.
ರಾಜ್ಯದ ವಿವಿಧೆಡೆ ನಡೆಯುತ್ತಿದ್ದ ಗಣೇಶೋತ್ಸವ, ಕನ್ನಡ ರಾಜ್ಯೋತ್ಸವ, ಕೆಂಡಾರ್ಚನೆ, ಜಾನಪದ ಜಾತ್ರೆ, ಕನ್ನಡ ಸಾಹಿತ್ಯ ಪರಿಷತ್ ಸಮ್ಮೇಳನಗಳಲ್ಲಿ ವೀರಗಾಸೆ ನೃತ್ಯ ಪ್ರದರ್ಶಿಸಿ ಜನರನ್ನು ರಂಜಿಸಿದ ಕೆ.ಎಚ್.ರೇವಣಸಿದ್ದಪ್ಪ ಪ್ರತಿಭೆ ಗುರುತಿಸಿದ ರಾಮನಗರ ಜಿಲ್ಲಾಡಳಿತ ಜಾನಪದ ಲೋಕ ಪ್ರಶಸ್ತಿ ಪ್ರದಾನ ಮಾಡಿತ್ತು. ಬೆಂಗಳೂರು, ಸಾಗರ, ಚಿಕ್ಕಮಗಳೂರು ಹೀಗೆ ಇತರ ಕಡೆಯ ಹಲವು ಸಂಘ ಸಂಸ್ಥೆಗಳು ವಿಶ್ವ ಕನ್ನಡ ಕಣ್ಮಣಿ, ಬಸವಜ್ಯೋತಿ, ಸಾಗರೋತ್ಸವ ಇನ್ನಿತರ ಪ್ರಶಸ್ತಿ ಪಡೆದುಕೊಂಡಿದ್ದರು. ಸದ್ಯ ಜಾನಪದ ಅಕಾಡೆಮಿ ಪ್ರಶ್ತಸಿಗೆ ಭಾಜನರಾಗಿರುವುದು ತಾಲೂಕಿಗೆ ಹೆಮ್ಮೆಯ ಸಂಗತಿ.
ತಂದೆಯಿಂದ ಕಲಿತ ಕಲೆಯಿಂದ ಜಾನಪದ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಸರ್ಕಾರ ಪ್ರಶಸ್ತಿ ಪ್ರಕಟಿಸಿರುವುದರಿಂದ ಅತೀವ ಸಂತೋಷವಾಗಿದೆ. ಈ ಹಿಂದೆ ವೀರಭದ್ರ ವೇಷ ಧರಿಸಿ ನೃತ್ಯ ಪ್ರದರ್ಶಿಸಲಾಗುತ್ತಿತ್ತು. 4 ವರ್ಷಗಳಿಂದ ಕಾಲು ನೋವು ಕಾಡುತ್ತಿರುವ ಕಾರಣ ನೃತ್ಯ ನಿಲ್ಲಿಸಲಾಗಿದೆ. ಕರಡೆ, ಚಮರ, ದೋಣು ಮಾತ್ರ ಬಾರಿಸಲಾಗುತ್ತಿದೆ.