ಜಿಲ್ಲೆ

ಕೆ.ಎಚ್.ಮುನಿಯಪ್ಪ ಅವರನ್ನು ಸಂಪುಟದಿಂದ ಕೈಬಿಡಿ

ಚಿತ್ರದುರ್ಗ: ಆಹಾರ ಇಲಾಖೆ ಸಚಿವ ಕೆ.ಎಚ್.ಮುನಿಯಪ್ಪ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಬೇಕು. ಈ ಸಂಬಂಧ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಲು ಶುಕ್ರವಾರ ನಡೆದ ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದ ರಾಜ್ಯಮಟ್ಟದ ಪದಾಧಿಕಾರಿಗಳ ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಲಾಯಿತು.

ಒಕ್ಕೂಟದ ರಾಜ್ಯ ಅಧ್ಯಕ್ಷ ಡಾ.ರವಿಮಾಕಳೆ ಮಾತನಾಡಿ, ಸಚಿವರು ಈಚೆಗೆ ತಮ್ಮ ಜನಾಂಗದ ಮುಖಂಡರ ಸಭೆಯಲ್ಲಿ ಅವೈಜ್ಞಾನಿಕ, ಅಸಂವಿಧಾನಿಕ, ಡಾ.ಬಿ.ಆರ್.ಅಂಬೇಡ್ಕರ್ ಅವರ ಆಶಯಗಳಿಗೆ ವಿರುದ್ಧವಾಗಿರುವ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ ಜಾರಿಯಾಗಬೇಕೆಂದು ಪ್ರಸ್ತಾಪಿಸಿ, ಪ್ರಚೋದನಕಾರಿ ಹೇಳಿಕೆ ನೀಡಿದ್ದು, ಸಂಪುಟದಿಂದ ವಜಾಗೊಳಿಸಲು ಆಗ್ರಹಿಸಲಾಗುವುದು ಎಂದು ತಿಳಿಸಿದರು.

ಬೆಳಗಾವಿ ಅಧಿವೇಶನದಲ್ಲಿ ವರದಿ ಮಂಡಿಸಲು ಆಗ್ರಹಿಸಿರುವ ಸಚಿವರ ಜನವಿರೋಧಿ ಹೇಳಿಕೆ ಖಂಡನೀಯ. ಎಸ್ಸಿ, ಎಸ್ಟಿ ಸಮಾಜದವರಲ್ಲಿ ತಾರತಮ್ಯ ಉಂಟುಮಾಡಿ, ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಅವರು ಪ್ರವಾಸ ಕೈಗೊಂಡ ಕಡೆಗಳಲ್ಲಿ ಘೇರಾವ್ ಹಾಕಿ, ಪ್ರತಿಭಟಿಸಲು ಸಮಿತಿ ನಿರ್ಧರಿಸಿದೆ ಎಂದರು.

ಕಾರ್ಯಾಧ್ಯಕ್ಷ ರಾಘವೇಂದ್ರ ನಾಯಕ್ ಮಾತನಾಡಿ, ಪರಿಶಿಷ್ಟ ಜಾತಿಯ ಜನರಲ್ಲಿ ಗೊಂದಲ ಸೃಷ್ಟಿಸುತ್ತಿದ್ದು, ಅವರ ಹೇಳಿಕೆಯಿಂದಾಗಿ ಭೋವಿ, ಲಂಬಾಣಿ, ಕೊರಚ, ಕೊರಮ ಸಮುದಾಯಗಳಲ್ಲಿ ಆತಂಕದ ವಾತಾವರಣ ಉಂಟಾಗಿದೆ. ಇದರ ವಿರುದ್ಧ ರಾಜ್ಯಾದ್ಯಂತ ಹೋರಾಟ ಕೈಗೊಳ್ಳುತ್ತೇವೆ ಎಂದು ಹೇಳಿದರು.

ಇಮ್ಮಡಿ ಸಿದ್ದರಾಮೇಶ್ವರ ಶ್ರೀ, ಸಿದ್ಧಲಿಂಗ ಶ್ರೀ, ಸರ್ದಾರ್ ಸೇವಾಲಾಲ್ ಶ್ರೀ, ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಗಂಗಾನಾಯ್ಕ್ ಗೋಂಧಿ, ಸಂಘಟನಾ ಕಾರ್ಯದರ್ಶಿ ರವಿಕಾಂತ್ ಅಂಗಡಿ, ಭೋವಿ ಸಂಘದ ಅಧ್ಯಕ್ಷ ಚಿಕ್ಕಂದವಾಡಿ ತಿಪ್ಪೇಸ್ವಾಮಿ, ರಾಜ್ಯ ಅಧ್ಯಕ್ಷ ಎಚ್.ಆನಂದಪ್ಪ, ಮುಖಂಡರಾದ ರೂಪಾನಾಯ್ಕ್, ಹನುಮಂತಪ್ಪ ಗೋಡೆಮನೆ, ಬಾಲ್ಯನಾಯ್ಕ, ಬಾಲಾಜಿ, ಬುಟ್ಟಾನಾಯ್ಕಾ, ಪ್ರಕಾಶ್ ರಾಮನಾಯ್ಕ, ವಸಂತನಾಯ್ಕ, ರಮೇಶ, ಗಣೇಶ, ಅನಂತನಾಯ್ಕ, ವೀಣಾ, ತುಳಸಿ ಇತರರಿದ್ದರು.