ಜಿಲ್ಲೆ

ಕೆ.ಎಂ. ಶಿವಲಿಂಗೇಗೌಡ ಉಮೇದುವಾರಿಕೆ

ಅರಸೀಕೆರೆ: ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿರುವ ಮಾಜಿ ಶಾಸಕ ಕೆ.ಎಂ. ಶಿವಲಿಂಗೇಗೌಡ ತಮ್ಮ ಬೆಂಬಲಿಗರೊಂದಿಗೆ ಬುಧವಾರ ಬೆಳಗ್ಗೆ ತಾಲೂಕು ಕಚೇರಿಗೆ ತೆರಳಿ ಚುನಾವಣಾಧಿಕಾರಿ ರಾಜಸುಲೋಚನಾ ಅವರಿಗೆ ಉಮೇದುವಾರಿಕೆ ಸಲ್ಲಿಸಿದರು.

ಮಾರುತಿ ನಗರ ಬಡಾವಣೆಯಲ್ಲಿರುವ ಶ್ರೀ ಆಂಜನೇಯ ಸ್ವಾಮಿ ದೇಗುಲದ ಬಳಿಯಿಂದ ಮಧ್ಯಾಹ್ನ ಸಹಸ್ರಾರು ಬೆಂಬಲಿಗರೊಂದಿಗೆ ತಾಲೂಕು ಕಚೇರಿವರೆಗೆ ಬೃಹತ್ ರ‌್ಯಾಲಿಯೊಂದಿಗೆ ಶಕ್ತಿ ಪ್ರದರ್ಶನ ನಡೆಸಿದರು.

ಕಳೆದ ಮೂರು ಅವಧಿಯಿಂದಲೂ ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ನಡೆಸಿರುವುದನ್ನು ಯಾರಿಂದಲೂ ಮರೆಯಲಾಗದು. ಕೊಬ್ಬರಿಗೆ ಬೆಂಬಲ ಬೆಲೆ ಹೆಚ್ಚಳ ಮಾಡುವುದು ಹಾಗೂ ಎತ್ತಿನಹೊಳೆ ಕಾಮಗಾರಿ ಪೂರ್ಣಗೊಳಿಸುವುದು ನನ್ನ ಮೊದಲ ಆದ್ಯತೆಯಾಗಿದೆ. ಇದಕ್ಕಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಒಗ್ಗೂಡಿ ಕೆಲಸ ಮಾಡಬೇಕು. ಕಳೆದ ಕೆಲ ದಿನಗಳಿಂದ ಮಾಜಿ ಸಚಿವ ಎಚ್.ಡಿ. ರೇವಣ್ಣ ನನ್ನ ವಿರುದ್ಧ ಮನಬಂದಂತೆ ಮಾತನಾಡುತ್ತಿರುವುದು ಸರಿಯಲ್ಲ. ತಕ್ಷಣವೇ ಹೇಳಿಕೆ ನಿಲ್ಲಿಸದಿದ್ದರೆ ಎಲ್ಲವನ್ನೂ ಜನರೆದರು ಬಿಚ್ಚಿಡಲಿದ್ದೇನೆ ಮರೆಯಬೇಡಿ. ಜಿಪಂ ಮಾಜಿ ಸದಸ್ಯ ಬಿಳಿಚೌಡಯ್ಯ ಅವರಿಗೆ ವಿಧಾನಪರಿಷತ್ ಪ್ರವೇಶಿಸಲು ಅವಕಾಶ ಏಕೆ ಮಾಡಿಕೊಡಲಿಲ್ಲ ಎಂದು ಶಿವಲಿಂಗೇಗೌಡ ವಾಗ್ದಾಳಿ ನಡೆಸಿದರು.

ಕೆಪಿಸಿಸಿ ಮಾಜಿ ಸದಸ್ಯ ಜಿ.ಬಿ. ಶಶಿಧರ್ ಮಾತನಾಡಿ, ಪಕ್ಷದ ವರಿಷ್ಠರ ಸೂಚನೆಯಂತೆ ಮತ್ತೆ ಸಕ್ರಿಯ ರಾಜಕಾರಣಕ್ಕೆ ಮರಳಿದ್ದು ಅಭ್ಯರ್ಥಿ ಗೆಲುವಿಗೆ ಹೋರಾಟ ನಡೆಸಲಿದ್ದೇನೆ ಎಂದರು.

ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಾಣಾವರ ಶ್ರೀನಿವಾಸ್, ಗಂಡಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೆಟ್ರೋಬಾಬು, ಕಿಸಾನ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಆದಿಹಳ್ಳಿ ಸಂತೋಷ್, ಪುರಸಭೆ ಮಾಜಿ ಅಧ್ಯಕ್ಷ ಕೆ.ಸಿ. ಯೋಗೀಶ್, ಮುಖಂಡರಾದ ಮಲ್ಲೇನಹಳ್ಳಿ ಶಿವಶಂಕರಸ್ವಾಮಿ, ಉದ್ಯಮಿ ಬಿ.ಎಸ್. ಅರುಣ್ ಕುಮಾರ್, ಗಂಜಿಗೆರೆ ಚಂದ್ರಶೇಖರ್, ಜಿಟಿಎಸ್ ಗೌಸ್‌ಖಾನ್ ಸೇರಿ ಹಲವು ಮುಖಂಡರು ಮುಂಚೂಣಿಯಲ್ಲಿದ್ದರು.