ಜಿಲ್ಲೆ

ಕೆ.ಆರ್.ಪೇಟೆ ಪುರಸಭೆ ಕಚೇರಿಯಲ್ಲಿ ಭಷ್ಟಾಚಾರ ತಾಂಡವ

ಕೆ.ಆರ್.ಪೇಟೆ: ಪುರಸಭೆ ಕಚೇರಿಯಲ್ಲಿ ಮಿತಿಮೀರಿದ ಭ್ರಷ್ಟಾಚಾರದಿಂದಾಗಿ ಸಾರ್ವಜನಿಕರು ಹೈರಾಣಾಗಿದ್ದಾರೆ. ತಿಂಗಳುಗಟ್ಟಲೆ ಕಚೇರಿಗೆ ಅಲೆದರೂ ಕೆಲಸಗಳು ಆಗದೆ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.


ಪಟ್ಟಣ ವ್ಯಾಪ್ತಿಯ ನಿವೇಶನ, ಕಟ್ಟಡಗಳಿಗೆ ಇ-ಸ್ವತ್ತು ಪಡೆಯುವುದು, ಖಾತೆ ಬದಲಾವಣೆ, ಉದ್ಯಮಗಳ ಲೈಸೆನ್ಸ್ ನವೀಕರಣ, ಹೊಸ ಮನೆ ಕಟ್ಟಲು ಲೈಸೆನ್ಸ್ ಪಡೆಯುವುದು, ಕಂದಾಯ ನಿರ್ಧರಣೆ-ಪಾವತಿ ಸೇರಿದಂತೆ ಯಾವುದೇ ಕೆಲಸಗಳು ಇಲ್ಲಿ ಹಣವಿಲ್ಲದೆ ಸರಾಗವಾಗಿ ಆಗುತ್ತಿಲ್ಲ. ಇಲ್ಲಿನ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯವೈಖರಿ ಆ ದೇವರೇ ಬಂದರೂ ಸರಿಮಾಡಲು ಸಾಧ್ಯವಿಲ್ಲ. ಪ್ರತಿ ಸೇವೆಗೂ ಇಂತಿಷ್ಟು ಹಣ ನೀಡಲೇಬೇಕು. ಕಂದಾಯ ಪಾವತಿಸಲು ಬರುವ ಗ್ರಾಹಕರು ಚಲನ್ ಪಡೆಯಲು ಸಂಬಂಧಪಟ್ಟ ಸಿಬ್ಬಂದಿ ಮುಂದೆ ಕಾದು ನಿಲ್ಲಬೇಕು. ಚಲನ್ ನೀಡಲು ಹಣಕ್ಕೆ ಬೇಡಿಕೆ ಇಡುತ್ತಾರೆ. ಹಣ ನೀಡದವರಿಗೆ ಕೆಲವು ದಾಖಲಾತಿಗಳು ಸಮರ್ಪಕವಾಗಿಲ್ಲವೆಂಬ ಸಬೂಬು ಹೇಳಿ ವಾಪಸ್ ಕಳುಹಿಸುತ್ತಾರೆ. ಇಲ್ಲಿ ಇ-ಸ್ವತ್ತು ಪಡೆಯುವುದೆಂದರೆ ದೊಡ್ಡ ಸವಾಲು ಎಂಬುದು ಪಟ್ಟಣದ ನಿವಾಸಿಗಳ ಆರೋಪವಾಗಿದೆ.


ಪುರಸಭೆ ವ್ಯಾಪ್ತಿಯಲ್ಲಿರುವ ಖಾಲಿ ನಿವೇಶನ, ಕಟ್ಟಡಗಳ ಇ-ಸ್ವತ್ತು ಪಡೆಯಲು ಅರ್ಜಿ ಸಲ್ಲಿಸಿ ಆರು ತಿಂಗಳಾದರೂ ಕೆಲಸ ಆಗಿರುವುದಿಲ್ಲ. ವಿಚಾರಿಸಲು ಮುಂದಾದರೆ ಸಬೂಬು ಹೇಳಿ ಮರಳಿ ಬರುವಂತೆ ಕಳಿಸುತ್ತಾರೆ. ಇ-ಸ್ವತ್ತಿಗೆ ಪ್ರಭಾವಿ ವ್ಯಕ್ತಿಗಳಿಂದ ಹೇಳಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎನ್ನುತ್ತಾರೆ ನೊಂದ ನಿವಾಸಿಗಳು.


ಹಕ್ಕುಪತ್ರ ಅಥವಾ ಇ-ಸ್ವತ್ತು, ಲೈಸೆನ್ಸ್ ಪಡೆಯುವ ಉದ್ದೇಶಕ್ಕಾಗಿ ಬರುವ ಸಾರ್ವಜನಿಕರು ಪುರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿಯ ನಿರ್ಲಕ್ಷೃದಿಂದ ರೋಸಿಹೋಗಿದ್ದಾರೆ.


ತಾಲೂಕು ಕೇಂದ್ರದಲ್ಲಿ ನಮ್ಮದೊಂದು ನಿವೇಶನವಿರಲಿ ಅಥವಾ ಸ್ವಂತ ಮನೆಯಿರಲಿ ಎಂಬ ಆಸೆ ಹೊಂದಿರುವ ಗ್ರಾಮೀಣ ಜನರಂತೂ ಪುರಸಭೆ ಅಧಿಕಾರಿಗಳು ಮತ್ತು ಸಿಬ್ಬಂದಿಯ ಆಡಳಿತ ವೈಖರಿ ನೋಡಿ ಪಟ್ಟಣದ ಸಹವಾಸವೇ ಬೇಡ ಎಂಬ ಪರಿಸ್ಥಿತಿಗೆ ಬಂದಿದ್ದಾರೆ ಎನ್ನುತ್ತಾರೆ ಗ್ರಾಮೀಣ ಭಾಗದ ಜನರು.

ಅಕ್ರಮವಾಗಿ ಮನೆಗಳು ನಿರ್ಮಾಣ: ಪಟ್ಟಣದ ಹೇಮಾವತಿ ಬಡಾವಣೆಯಲ್ಲಿ ಬಡವರಿಗೆ ನಿರ್ಮಿಸಿರುವ ಸುಮಾರು 1 ಸಾವಿರ ನಿವೇಶನ ಹಂಚಿಕೆಯಲ್ಲಿ ಅಕ್ರಮವಾಗಿದೆ ಎಂದು ಆರೋಪಿಸಿ ದಶಕದ ಹಿಂದೆಯೇ ಕೆಲವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ವಿಚಾರಣೆ ಮಧ್ಯೆದಲ್ಲಿ ಬಡಾವಣೆಯನ್ನು ಯಥಾಸ್ಥಿತಿ ಕಾಪಾಡುವಂತೆ ಆದೇಶ ಬಂದಿತ್ತು. ಈ ನಡುವೆ, ನಿವೇಶನ ಮಾಲೀಕರಿಂದ ಅಕ್ರಮವಾಗಿ ಮನೆಗಳು ನಿರ್ಮಾಣವಾಗಿವೆ. ಆದರೆ ಆ ಆಸ್ತಿಗಳು ಖಾತೆ ಬದಲಾವಣೆ, ಇ-ಸ್ವತ್ತು, ಪರಭಾರೆ ಆಗುತ್ತಿಲ್ಲ. ಪುರಸಭೆಯೂ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಸರ್ಕಾರ ಕಳೆದ ವರ್ಷ ಮೊದಲನೇ ಹಂತದಲ್ಲಿ ಕೆಲ ನಿವೇಶನಗಳನ್ನು ಅಧಿಕೃತಗೊಳಿಸಿ ಆದೇಶಿಸಿದೆ. ಅವುಗಳ ಖಾತೆ ಬದಲಾವಣೆ ಆಗುತ್ತಿವೆ. ಉಳಿಕೆ ನಿವೇಶನಗಳನ್ನು ಸರ್ಕಾರ ಎರಡನೇ ಹಂತದಲ್ಲಿ ಅಧಿಕೃತಗೊಳಿಸಿ ಆದೇಶಿಸಬೇಕಿದೆ.

ಪುರಸಭೆ ವ್ಯಾಪ್ತಿಯ ಹೊಸಹೊಳಲಿನಲ್ಲಿ ಬಡವರಿಗೆ ನಿವೇಶನ ಹಂಚಿಕೆಗೆ 6.5 ಎಕರೆ ಜಮೀನು ಮೀಸಲಿಡಲಾಗಿದೆ. ಆದರೆ ದಶಕ ಕಳೆದರೂ ನಿವೇಶನಗಳ ಹಂಚಿಕೆ ಆಗಿಲ್ಲ. ಹತ್ತು ವರ್ಷದ ಹಿಂದೆ ಬಡವರಿಂದ ನಿವೇಶನ ಹಂಚಿಕೆಗೆ ಪುರಸಭೆಯಿಂದ ಅರ್ಜಿ ಸ್ವೀಕರಿಸಲಾಗಿದೆ. ಡಿಸಿ ಪರ್ಮಿಷನ್ ಆಗಿಲ್ಲವೆಂದು ನೆಪ ಹೇಳುತ್ತಾ ಹಂಚಿಕೆ ಪ್ರಕ್ರಿಯೆ ಸ್ಥಗಿತಗೊಳಿಸಲಾಗಿದೆ. ಪುರಸಭೆ ಅಧಿಕಾರಿಗಳು, ಜನಪ್ರತಿನಿಧಿಗಳ ನಿರ್ಲಕ್ಷೃದಿಂದ ನಿವೇಶನ ಹಂಚಿಕೆ ಪ್ರಕ್ರಿಯೆಗೆ ಎಳ್ಳು ನೀರು ಬಿಟ್ಟಂತಾಗಿದೆ. ಅರ್ಜಿದಾರರು ನಿವೇಶನ ಕೊಡುತ್ತಾರೆ ಎಂದು ಹಗಲುಗನಸು ಕಾಣುತ್ತಲೇ ಇದ್ದಾರೆ.


ಮೂಲಸೌಕರ್ಯ ವಂಚಿತ ವಾರ್ಡ್‌ಗಳು:
ಪಟ್ಟಣಕ್ಕೆ ಹೇಮಾವತಿ ನದಿಯಿಂದ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಾಗಿದೆ. ಪಟ್ಟಣ ಹೊರ ವಲಯದಲ್ಲಿ 2.5 ಲಕ್ಷ ಲೀ. ಸಾಮರ್ಥ್ಯದ ಟ್ಯಾಂಕಿನಿಂದ ನೀರು ಪೂರೈಸಲಾಗುತ್ತಿದೆ. ಪಟ್ಟಣದಲ್ಲಿ ಸುಮಾರು 12 ಲಕ್ಷ ಜನಸಂಖ್ಯೆ ಇದ್ದು, ನೀರಿನ ಕೊರತೆ ಮಾಮೂಲಾಗಿದೆ. ವಾರ್ಡ್ 21, 18, 1 ಹಾಗೂ 22 ಸೇರಿದಂತೆ ಹಲವೆಡೆ ಪೂರೈಕೆ ಸಮಸ್ಯೆ ಇದ್ದು, ಟ್ಯಾಂಕ್ ಶೇಖರಣೆ ಸಾಮರ್ಥ್ಯ ಹೆಚ್ಚಿಸುವ ಮೂಲಕ ಪುರಸಭೆ ನೀರಿನ ಸಮಸ್ಯೆ ಸರಿಪಡಿಸಬೇಕಿದೆ.


ಯುಜಿಡಿ ಸಮಸ್ಯೆ ಜನರಿಗೆ ತಲೆನೋವಾಗಿ ಪರಿಣಮಿಸಿದೆ. ಎಲ್ಲೆಂದರಲ್ಲಿ ಯುಜಿಡಿ ಮ್ಯಾನ್‌ಹೋಲ್ ಬಾಯಿ ತೆರೆದು ರಸ್ತೆಯಲ್ಲೆಲ್ಲ ಹರಿಯುತ್ತಿದೆ. ಯುಜಿಡಿ ನೆಟ್‌ವರ್ಕ್ ಸಮಪರ್ಕವಾಗಿಲ್ಲದ್ದರಿಂದ ಸಮಸ್ಯೆಯಾಗಿದೆ. ಬೀದಿ ದೀಪಗಳು ಸುಟ್ಟರೂ ಅವುಗಳ ಬದಲಾವಣೆ ಸಮರ್ಪಕವಾಗಿಲ್ಲ. ಮನವಿ ಮಾಡಿದರೂ ಪುರಸಭೆ ಅಧಿಕಾರಿಗಳು ಕ್ಯಾರೆ ಎನ್ನುವುದಿಲ್ಲ. ಟಿ.ಬಿ.ಸರ್ಕಲ್, ಬಿಜಿಎಸ್ ಬಿಲ್ಡಿಂಗ್ ಎದುರು ಹೈಮಾಸ್ಟ್ ಇದ್ದು, ನಿರ್ವಹಣೆ ಕೊರತೆಯಿಂದ ಎರಡು ದೀಪ ಮಾತ್ರ ಉರಿಯುತ್ತವೆ. ಸುಟ್ಟಿರುವ ದೀಪಗಳ ದುರಸ್ತಿ ಮಾಡಿಲ್ಲ. ವಾರ್ಡ್‌ಗಳಲ್ಲಿ ರಸ್ತೆ, ಚರಂಡಿ ಸಮಸ್ಯೆ ಇದ್ದು, ಮೂಲಸೌಕರ್ಯ ನಿರ್ಮಾಣಕ್ಕೆ ಒತ್ತು ನೀಡುವ ಮೂಲಕ ಪುರಸಭೆ ಸಾರ್ವಜನಿಕರ ನೆಮ್ಮದಿ ಬದುಕಿಗೆ ಉತ್ತಮ ಪರಿಸರ ನಿರ್ಮಿಸಿಕೊಡಬೇಕಿದೆ.