ಬಳ್ಳೆಕೆರೆ ಗ್ರಾಮದ ಶಾಲೆ ಕೊಠಡಿ ಮಳೆಗೆ ಕುಸಿದಿರುವುದು. 
ಜಿಲ್ಲೆ

ಕೆ.ಆರ್.ಪೇಟೆ ತಾಲೂಕಿನಲ್ಲಿ ಮಳೆ ಅವಾಂತರ

ಕೆ.ಆರ್.ಪೇಟೆ: ತಾಲೂಕಿನ ಹಲವು ಭಾಗಗಳಲ್ಲಿ ಸೋಮವಾರ ಸುರಿದ ಭಾರಿ ಮಳೆಗೆ ಸರ್ಕಾರಿ ಶಾಲೆ ಛಾವಣಿ, ಮನೆ ಗೋಡೆ ಕುಸಿದಿದೆ. ಕೆರೆ ಏರಿ ಬಿರುಕು ಬಿಟ್ಟು, ಹಲವೆಡೆ ಬೆಳೆಗಳು ನಾಶವಾಗಿದೆ.

ತಾಲೂಕಿನ ಬಳ್ಳೇಕೆರೆ ಗ್ರಾಮದ ಸರ್ಕಾರಿ ಶಾಲೆ ಛಾವಣಿ ಕುಸಿದಿದ್ದು, ಭಾರಿ ಪ್ರಮಾಣದ ದುರಂತ ತಪ್ಪಿದೆ. ಮಕ್ಕಳನ್ನು ಶಾಲೆಯಿಂದ ಬಿಟ್ಟ ನಂತರ ಛಾವಣಿ ಕುಸಿದಿದ್ದು, ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ.

ಮಳೆ ನೀರು ನಾಲೆಗೆ ನುಗ್ಗಿದ ಪರಿಣಾಮ ತಾಲೂಕಿನ ಸಾರಂಗಿ ಬಳಿ ಹೇಮಾವತಿ ಮುಖ್ಯ ನಾಲೆ ಮೇಲೆ ಭಾರಿ ಪ್ರಮಾಣದ ನೀರು ಹರಿದಿದೆ. ಅಪಾಯದ ಮುನ್ಸೂಚನೆಯಿಂದ ಎಚ್ಚೆತ್ತ ನೀರಾವರಿ ಇಲಾಖೆ, ತಕ್ಷಣವೇ ಹೇಮಾವತಿ ಜಲಾಶಯದಿಂದ ನಾಲೆಗೆ ಹರಿಸುತ್ತಿದ್ದ ನೀರನ್ನು ಸ್ಥಗಿತಗೊಳಿಸಿದರು.

ಮಳೆಯಿಂದ ತಾಲೂಕಿನ ಸಂತೆಬಾಚಹಳ್ಳಿ ಹೋಬಳಿಯ ಅಘಲಯ ಗ್ರಾಮದ ಕೆರೆ ತುಂಬಿ ಏರಿಯ ಒಂದು ಭಾಗ ಕುಸಿದಿದೆ. ಭಾರಿ ಪ್ರಮಾಣದ ನೀರು ಕೆಳ ಭಾಗದ ಹಳ್ಳಕ್ಕೆ ಹರಿಯುತ್ತಿದೆ. ನೀರು ಅಕ್ಕಪಕ್ಕದ ಜಮೀನುಗಳಿಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಬೆಳೆ ನೀರಿನಲ್ಲಿ ಮುಳುಗಿದೆ.

ತಾಲೂಕಿನ ಚೌಡೇನಹಳ್ಳಿಯ ಚಂದ್ರೇಗೌಡ ಅವರ ಮನೆ ತಡರಾತ್ರಿ ಮಳೆಗೆ ಕುಸಿದಿದೆ. ಮನೆ ಕುಸಿಯುತ್ತಿರುವುದನ್ನು ಗಮನಿಸಿ ಎಚ್ಚೆತ್ತ ಕುಟುಂಬಸ್ಥರು ಮನೆ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ದನಕರುಗಳ ಹಗ್ಗ ಕೋಯ್ದು ಹೊರಬಂದು ತಮ್ಮೊಂದಿಗೆ ತಮ್ಮ ರಾಸುಗಳ ಪ್ರಾಣ ರಕ್ಷಣೆ ಮಾಡಿಕೊಂಡಿದ್ದಾರೆ.

ಕಿಕ್ಕೇರಿಯಲ್ಲಿ ಜಯಮ್ಮ ಅವರ ಮನೆ ಕುಸಿದಿದೆ. ಪಟ್ಟಣದ ಹಳೇ ಮೈಸೂರು ರಸ್ತೆಯಲ್ಲಿ ಮಳೆ ನೀರು ಮನೆಗಳಿಗೆ ನುಗ್ಗಿ ನಿವಾಸಿಗಳು ಪರಿತಪಿಸುವಂತಾಗಿದೆ.

ಮಳೆಹಾನಿಯಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಸ್ಥಳಗಳಿಗೆ ತಕ್ಷಣವೇ ತಾಲೂಕು ಆಡಳಿತ ಭೇಟಿ ನೀಡಿ ಸೂಕ್ತ ಪರಿಹಾರದ ವ್ಯವಸ್ಥೆ ಮಾಡುವಂತೆ ಜನರು ಆಗ್ರಹಿಸಿದ್ದಾರೆ.