ಕೆ.ಆರ್.ನಗರ: ನೌಕರರ ಹಿತಕಾಯುತ್ತಿರುವ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ, ಜಿಲ್ಲಾ, ತಾಲೂಕು ಘಟಕಗಳ ವಿರುದ್ಧ ಆಧಾರ ರಹಿತವಾಗಿ ಸಾಮಾಜಿಕ ಜಾಲತಾಣದಲ್ಲಿ ತೇಜೋವಧೆ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕೆ.ಆರ್.ನಗರ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ತಾಲೂಕು ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.
ತಾಲೂಕು ಅಧ್ಯಕ್ಷ ಸಿ.ಜೆ.ಅರುಣ್ ಕುಮಾರ್ ನೇತೃತ್ವದಲ್ಲಿ ತಾಲೂಕು ಕಚೇರಿ ಮುಂದೆ ಜಮಾಯಿಸಿದ ಪದಾಧಿಕಾರಿಗಳು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಸಿ.ಜೆ.ಅರುಣ್ ಕುಮಾರ್ ಮಾತನಾಡಿ, ಸರ್ಕಾರಿ ನೌಕರರ ಸಂಘದ ರಾಜ್ಯ ಅಧ್ಯಕ್ಷ ಸಿ.ಎಸ್.ಷಡಕ್ಷರಿ ಅವರ ಮಾರ್ಗದರ್ಶನದಲ್ಲಿ ಜಿಲ್ಲಾ, ತಾಲೂಕು ಘಟಕಗಳ ಪದಾಧಿಕಾರಿಗಳು ನೌಕರರ ಹಿತಕಾಯುವುದು, ಅವರ ನೋವುಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ ಸಂಘದ ರಾಜ್ಯದ ಅಧ್ಯಕ್ಷರು ಮತ್ತು ರಾಜ್ಯದ ಜಿಲ್ಲೆ ಮತ್ತು ತಾಲೂಕು ಸಂಘದ ವಿರುದ್ಧ ವಿವಿಧ ಇಲಾಖೆ ಕೆಲ ಅಧಿಕಾರಿಗಳು ಆಧಾರ ರಹಿತವಾದ ಆರೋಪಗಳ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಸಂಘಟನೆಗಳ ತೇಜೋವಧೆ ಮಾಡಿದ್ದಾರೆ. ಸಂಘಟನೆ ಹಾಗೂ ಪದಾಧಿಕಾರಿಗಳ ವಿರುದ್ಧ ಸುಳ್ಳು ಆರೋಪ ಮಾಡಿರುವ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ(ಸಕ್ಕರೆ)ಯ ಅಧಿನ ಕಾರ್ಯದರ್ಶಿ ಶಾಂತರಾಮು, ಸರ್ಕಾರದ ಸಚಿವಾಲಯದ ಶಾಖಾಧಿಕಾರಿ ಗುರುಸ್ವಾಮಿ, ರಾಯಚೂರು ಪಶು ಆಸ್ವತ್ರೆಯ ಜಾನುವಾರು ಅಭಿವೃದ್ಧಿ ಅಧಿಕಾರಿ ಎಂ. ಮೆಹಬೂಬ್ ಬಾಷ, ಬೆಂಗಳೂರು ಭೂ ಮಾಪನ ಇಲಾಖೆಯ ಸೂಪರ್ ವೈಜರ್ ಶಿವರುದ್ರಯ್ಯ, ರಾಮನಗರದ ಅವ್ವೇರಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕ ನಿಂಗೇಗೌಡರ ವಿರುದ್ಧ ಕ್ರಮ ಜರುಗಿಸಬೇಕಯ ಎಂದು ಆಗ್ರಹಿಸಿದರು.
ಸುಳ್ಳು ಆರೋಪ ಮಾಡಿರುವ ಅಧಿಕಾರಿಗಳ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳುವಂತೆ ಪ್ರತಿಭಟನಾಕಾರರು ಇದೇ ವೇಳೆ ತಹಸೀಲ್ದಾರ್‌ಎಂ.ಜಿ.ಸಂತೋಷ್ ಕುಮಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಸಂಘಟನೆಯ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶಂಕರೇಗೌಡ, ರಾಜ್ಯ ಪರಿಷತ್ತು ಸದಸ್ಯ ಕೆ.ವಿ.ರಮೇಶ್, ತಾಲೂಕು ಪ್ರಧಾನ ಕಾರ್ಯದರ್ಶಿ ಪಿ.ಪ್ರಶಾಂತ್, ಉಪಾಧ್ಯಕ್ಷರಾದ ಗೋಪಾಲನಾಯಕ, ಮಧುಕುಮಾರ್, ಖಜಾಂಚಿ ಪ್ರಸನ್ನ, ನಿರ್ದೇಶಕರಾದ ಸಣ್ಣಸ್ವಾಮಿ, ಧುವಕುಮಾರ್, ಶಿವಲಿಂಗೇಗೌಡ, ವರುಣ್, ಮಹೇಶ್, ಕರೀಗೌಡ, ದೇವೇಂದ್ರ, ರಿಜ್ವಾನ್, ಮಂಜೇಗೌಡ ಇತರರು ಇದ್ದರು.