ಜಿಲ್ಲೆ

ಕೆ.ಆರ್. ಕ್ಷೇತ್ರದಲ್ಲಿ ತಾಯಿ, ಮಗುವಿನ ಮರಣ ಪ್ರಮಾಣ ಶೂನ್ಯಕ್ಕೆ ಇಳಿಸುವ ಗುರಿ : ಶಾಸಕ ಎಸ್.ಎ. ರಾಮದಾಸ್

ಮೈಸೂರು: ಮುಂದಿನ ಐದು ವರ್ಷಗಳಲ್ಲಿ ಕೃಷ್ಣರಾಜ ವಿಧಾನಸಭಾ ಕ್ಷೇತ್ರದಲ್ಲಿ ಗರ್ಭಿಣಿಯರು ಹಾಗೂ ನವಜಾತ ಶಿಶುಗಳ ಸಾವಿನ ಸಂಖ್ಯೆಯನ್ನು ಶೂನ್ಯಕ್ಕೆ ತರುವ ಸಂಕಲ್ಪ ಮಾಡಲಾಗಿದೆ ಎಂದು ಶಾಸಕ ಎಸ್.ಎ.ರಾಮದಾಸ್ ಹೇಳಿದರು.

ನಗರದ ರಾಜೇಂದ್ರ ಕಲಾಮಂದಿರ ಆವರಣದಲ್ಲಿ ಶನಿವಾರ ಆಯೋಜಿಸಲಾಗಿದ್ದ ರಾಜ್ಯ ಹಾಗೂ ಕೇಂದ್ರ ಸರ್ಕಾರ ಪುರಸ್ಕೃತ ಯೋಜನೆಗಳಾದ ಸುಕನ್ಯಾ ಸಮೃದ್ಧಿ ಮತ್ತು ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆ ಫಲಾನುಭವಿಗಳಿಗೆ ಸವಲತ್ತು ವಿತರಣೆ ಹಾಗೂ 1200 ಜನರಿಗೆ ಉಚಿತ ಕನ್ನಡಕ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ನೂರಾರು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಅಂತಹ ಯೋಜನೆಗಳ ಪೈಕಿ ನನಗೆ ಅತಿ ಇಷ್ಟವಾದ ಯೋಜನೆಯೆಂದರೆ ಮಾತೃವಂದನಾ ಯೋಜನೆ. ಇಡೀ ದೇಶದಲ್ಲಿ ಮೊದಲ ಬಾರಿಗೆ ಈ ಯೋಜನೆ ಜಾರಿಯಾಗಿದ್ದು ಕೃಷ್ಣರಾಜ ವಿಧಾನಸಭಾ ಕ್ಷೇತ್ರದಲ್ಲಿ. ಆ ಕಾರಣಕ್ಕಾಗಿಯೇ ಮೈಸೂರಿಗೆ ಬಂದಿದ್ದ ಪ್ರಧಾನಿ ನರೇಂದ್ರ ಮೋದಿಯವರು ನನಗೆ ಬೆನ್ನಿನ ಮೇಲೆ ಗುದ್ದಿ ಒಳ್ಳೆಯ ಕೆಲಸ ಮಾಡುತ್ತಿದ್ದೀಯಾ ಮತ್ತಷ್ಟು ಒಳ್ಳೆಯ ಕೆಲಸ ಮಾಡು ಎಂದು ಹುರಿದುಂಬಿಸಿದರು. ಅದರ ಪರಿಣಾವೇ ಇಂದು ನಮ್ಮ ಕ್ಷೇತ್ರದಲ್ಲಿ 9200 ಗರ್ಭಿಣಿ ಮಹಿಳೆಯರು ಈ ಯೋಜನೆಯ ಫಲ ಪಡೆದರು. ಈ ಮೂಲಕ ಭವಿಷ್ಯದ ಮಗು ಆರೋಗ್ಯವಂತವಾಗಲು ಹಾಗೂ ತಾಯಿ ಸೌಖ್ಯದಿಂದಿರಲು ಸಾಧ್ಯವಾಯಿತು ಎಂದರು.

ಕೇಂದ್ರ ಸರ್ಕಾರದ ಈ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನ ಮಾಡುವ ಮುಖೇನ ನಮ್ಮ ಕ್ಷೇತ್ರದಲ್ಲಿ ಮುಂದಿನ ಐದು ವರ್ಷಗಳಲ್ಲಿ ಒಬ್ಬ ಗರ್ಭಿಣಿ ಮಹಿಳೆಯಾಗಲಿ ಅಥವಾ ನವಜಾತ ಶಿಶುವಾಗಲಿ ಸಾವಿಗೀಡಾಗಬಾರದು ಎಂಬ ಸಂಕಲ್ಪ ನಮ್ಮದಾಗಿದೆ. ಆ ನಿಟ್ಟಿನಲ್ಲಿ ಮುಂದಿನ ಐದು ವರ್ಷಗಳ ಕಾಲ ಕಾರ್ಯಯೋಜನೆಯನ್ನು ರೂಪಿಸಲಾಗಿದೆ ಎಂದು ಹೇಳಿದರು.

ಕೇಂದ್ರ ಸರ್ಕಾರ ರೂಪಿಸಿರುವ ಯೋಜನೆಗಳನ್ನು ಅರಿಯುವ ಸಲುವಾಗಿಯೇ ದೇಶದ ಹತ್ತು ರಾಜ್ಯಗಳಲ್ಲಿ ಪ್ರವಾಸ ಮಾಡಿ 510 ಪುಟಗಳ ವಿಷನ್ ಡಾಕ್ಯುಮೆಂಟ್ ಸಿದ್ದಪಡಿಸಿ ನರೇಂದ್ರ ಮೋದಿ ಅವರಿಗೆ ನೀಡಲಾಗಿದೆ. ಅಂದು ಆರಂಭವಾದ ಈ ಕಾರ್ಯ ಇಂದು ಕ್ಷೇತ್ರದಲ್ಲಿರುವ 80 ಸಾವಿರ ಮನೆಗಳ ಪೈಕಿ 70 ಸಾವಿರ ಮನೆಗಳಿಗೆ ಒಂದಲ್ಲ ಒಂದು ಯೋಜನೆ ತಲುಪಿಸುವ ಕೆಲಸ ಮಾಡಲಾಗಿದೆ ಎಂದು ತಿಳಿಸಿದರು.

ಕ್ಷೇತ್ರದ 9200 ಗರ್ಭಿಣಿಯರಿಗೆ ಅಣ್ಣನ ಸ್ಥಾನದಲ್ಲಿ ನಿಂತು ಮಡಿಲು ತುಂಬುವ ಸೌಭಾಗ್ಯ ನನ್ನ ಪಾಲಿಗೆ ಬಂದಿದೆ ಎಂದ ಅವರು, ಇಲ್ಲಿ ಯಾವುದೇ ರೀತಿಯ ಜಾತಿ, ಧರ್ಮ ಇಲ್ಲ. ಎಲ್ಲ ಜಾತಿ, ಧರ್ಮಗಳ ನನ್ನ ಸಹೋದರಿಯರು ಈ ಯೋಜನೆಯ ಭಾಗವಾಗಿರುವುದು ನನಗೆ ಅತೀವ ಸಂತೋಷ ತಂದಿದೆ ಎಂದರು.

ಯೋಜನೆಯಲ್ಲಿ ಫಲಾನುಭವಿಯಾದ ಗರ್ಭಿಣಿಗೆ ನಾಲ್ಕು ತಿಂಗಳ ಕಾಲ ಆಹಾರ, ಸೀರೆ, ಕುಪ್ಪಸ ಹಾಗೂ ಆರು ಸಾವಿರ ರೂಪಾಯಿ ಆರ್ಥಿಕ ನೆರವು ಸಿಗಲಿದೆ. ಆಕೆ ಹಾಗೂ ತನ್ನೊಡಲಲ್ಲಿರುವ ಮಗು ಆನಂದವಾಗಿರಬೇಕೆಂಬುದೇ ಈ ಯೋಜನೆಯ ಉದ್ದೇಶವಾಗಿದೆ. ಚುನಾವಣೆ, ಓಟು ಎಲ್ಲ ಒಂದು ಕಡೆ ಇರಲಿ, ನನ್ನ ಸಹೋದರಿಯರ ನೆಮ್ಮದಿಯ ಬದುಕು ನನ್ನ ಕನಸು. ಮಳೆ ಬಂದ ಕಾರಣ ಕೆಲವರಿಗೆ ಕನ್ನಡಕ ತಲುಪಿಸಲು ಆಗದೆ ಇರುವುದರಿಂದ ಉಳಿದವರಿಗೆ ಅವರವರ ಮೆನಗೆ ತಲುಪಿಸಲಾಗುವುದು ಎಂದು ಹೇಳಿದರು.

ಕಾರ್ಯಕ್ರಮ ಉಪ ಮೇಯರ್ ಡಾ.ಜಿ.ರೂಪಾ ಯೋಗೀಶ್, ನಗರ ಪಾಲಿಕೆ ಸದಸ್ಯರಾದ ಬಿ.ವಿ ಮಂಜುನಾಥ್, ಮ.ವಿ ರಾಮಪ್ರಸಾದ್, ಬಿಜೆಪಿ ಕೃಷ್ಣರಾಜ ಕ್ಷೇತ್ರದ ಅಧ್ಯಕ್ಷ ವಡಿವೇಲ್, ಕಣ್ಣಿನ ವೈದ್ಯ ಡಾ.ಚೇತನ್, ಮಕ್ಕಳ ಅಭಿವೃದ್ಧಿ ಅಧಿಕಾರಿ ಮಧುಸೂದನ್, ಕನ್ನಡಕ ತಯಾರಕ ವಿಜಯ್ ಕುಮಾರ್ ಹಾಗೂ ಇತರರು ಇದ್ದರು.