ಜಿಲ್ಲೆ

ಕೆ.ಆರ್.ಆಸ್ಪತ್ರೆಯಲ್ಲಿ ಹಾಸಿಗೆ ಸಾಮರ್ಥ್ಯ ಹೆಚ್ಚಳ

ಮೈಸೂರು: ನಗರದ ಕೆ.ಆರ್.ಆಸ್ಪತ್ರೆಯಲ್ಲಿ ಹಾಸಿಗೆ ಸಾಮರ್ಥ್ಯ ಹೆಚ್ಚಿಸಲಾಗುವುದು. ಅದಕ್ಕಾಗಿ ಅಗತ್ಯ ಸೌಲಭ್ಯ ಕಲ್ಪಿಸಿಕೊಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.


ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಶತಮಾನೋತ್ಸವ ಕಾರ್ಯಕ್ರಮದ ಲಾಂಛನ ಅನಾವರಣ, ಕೆ.ಆರ್. ಆಸ್ಪತ್ರೆಯ ಸುಟ್ಟಗಾಯಗಳ ವಿಭಾಗದ ನವೀಕರಣಗೊಂಡ ಕಟ್ಟಡ ಮತ್ತು ರೇಡಿಯಾಲಜಿ ವಿಭಾಗದ ಎಂಆರ್‌ಐ ಯಂತ್ರೋಪಕರಣವನ್ನು ಉದ್ಘಾಟಿಸಿ ಮಾತನಾಡಿದರು.


ಕೆ.ಆರ್. ಆಸ್ಪತ್ರೆ ಮೈಸೂರಿಗಷ್ಟೇ ಸಿಮೀತವಾಗಿಲ್ಲ. ಹಾಸನ, ಕೊಡಗು, ಮಂಡ್ಯ, ಚಾಮರಾಜನಗರ ಜಿಲ್ಲೆಗಳಿಂದಲೂ ರೋಗಿಗಳು ಬರುತ್ತಾರೆ. ಇದರಿಂದ ಒತ್ತಡ ಅಧಿಕವಾಗಿದೆ. ಆದ್ದರಿಂದ ಈಗಿರುವ 1200 ಹಾಸಿಗೆ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸಲಾಗುವುದು. ಕಟ್ಟಡ ಸೇರಿದಂತೆ ಅಗತ್ಯ ಸೌಲಭ್ಯ ಕಲ್ಪಿಸಿಕೊಡಲಾಗುವುದು ಎಂದರು.


ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು 1924ರಲ್ಲಿ ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಸ್ಥಾಪಿಸಿದರು. ಇದಕ್ಕೀಗ ನೂರು ವರ್ಷದ ಸಂಭ್ರಮ. ದೊಡ್ಡ ಇತಿಹಾಸವಿರುವ ಈ ಸಂಸ್ಥೆಯ ಶತಮಾನೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಗುವುದು. ಅದಕ್ಕೆ ಬೇಕಾದ ಅನುದಾನ, ಸೌಲಭ್ಯ ಕಲ್ಪಿಸಿಕೊಡಲಾಗುವುದು ಎಂದು ತಿಳಿಸಿದರು.


ವೃತ್ತಿಗೌರವ, ಬದ್ಧತೆ ಇರಲಿ:
ವೈದ್ಯಕೀಯ, ಇಂಜಿನಿಯರಿಂಗ್, ರಾಜಕೀಯ ಸೇರಿದಂತೆ ಯಾವುದೇ ವೃತ್ತಿಯಲ್ಲಿದ್ದರೂ ನಿಷ್ಠೆ, ಶ್ರದ್ಧೆ ಮತ್ತು ಸಾಮಾಜಿಕ ಬದ್ಧತೆಯಿಂದ ಕೆಲಸ ಮಾಡಬೇಕು. ಆಗ ಮಾತ್ರ ಮುಂದುವರಿಯಲು ಸಾಧ್ಯ. ಸಮಾಜವೂ ಗುರುತಿಸಿ, ಮನ್ನಣೆ ನೀಡುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ವೃತ್ತಿಗೌರವ ಎತ್ತಿಹಿಡಿಯಬೇಕು ಎಂದು ಸಿಎಂ ಸಿದ್ದರಾಮಯ್ಯ ಸಲಹೆ ನೀಡಿದರು.


ವೈದ್ಯಕೀಯ ವೃತ್ತಿ ಶ್ರೇಷ್ಠವಾದದು. ರೋಗಿಗಳ ಜೀವ ಉಳಿಸಿದರೆ ವೈದ್ಯರನ್ನು ಪೂಜೆ ಮಾಡುತ್ತಾರೆ. ಕೊನೆಯವರೆಗೂ ಸ್ಮರಿಸುತ್ತಾರೆ. ಆದ್ದರಿಂದ ವೈದ್ಯರು ಜನರ ಪ್ರಾಣದೊಂದಿಗೆ ಚೆಲ್ಲಾಟವಾಡಬಾರದು. ರೋಗಿಗಳ ಪ್ರಾಣ ಉಳಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು. ವೈದ್ಯರ ತಪ್ಪು, ನಿರ್ಲಕ್ಷೃ, ಬೇಜವಾಬ್ದಾರಿಯಿಂದ ರೋಗಿ ಸಾಯಬಾರದು. ವೈದ್ಯಕೀಯ ವೃತ್ತಿ ಬಿಟ್ಟು ಕೆಲವರು ಬೇರೆ ಕೆಲಸಕ್ಕೆ ಹೋಗುತ್ತಾರೆ. ಇದು ಸರಿಯಲ್ಲ. ವೃತ್ತಿ ಶ್ರೇಯಸ್ಸೂ ಅಲ್ಲ ಎಂದು ವೈದ್ಯರಿಗೆ ಕಿವಿಮಾತು ಹೇಳಿದರು.


ನಾಲ್ವಡಿ ಅವರನ್ನು ಸ್ಮರಿಸಿದ ಸಿಎಂ, ಮೈಸೂರು ವೈದ್ಯಕೀಯ ಕಾಲೇಜು ಸಾವಿರಾರು ವೈದ್ಯರನ್ನು ನೀಡಿದೆ. ಇಲ್ಲಿ ಕಲಿತ ವಿದ್ಯಾರ್ಥಿಗಳು ದೇಶ-ವಿದೇಶಗಳಲ್ಲಿ ಸೇವೆ ಸಲ್ಲಿಸುತ್ತಾರೆ. ಸಂಸ್ಥೆಗೆ ಉತ್ತಮ ಹೆಸರಿದ್ದು, ಅದನ್ನು ಉಳಿಸಿಕೊಂಡು ಹೋಗಬೇಕು ಎಂದರು.


ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮಾತನಾಡಿ, ಮೈಸೂರು ವೈದ್ಯಕೀಯ ಕಾಲೇಜಿನ ಶತಮಾನೋತ್ಸವ ಹಿನ್ನೆಲೆಯಲ್ಲಿ 75 ಕೋಟಿ ರೂ. ವೆಚ್ಚದಲ್ಲಿ ಶತಮಾನೋತ್ಸವ ಭವನ ನಿರ್ಮಾಣ ಮಾಡಲಾಗುವುದು. ಕೆ.ಆರ್. ಆಸ್ಪತ್ರೆಯ ಎಲ್ಲ ಹೊರರೋಗಿಗಳ ವಿಭಾಗ(ಒಪಿಡಿ) ಒಂದೆಡೆ ಕಾರ್ಯನಿರ್ವಹಣೆ ಮಾಡುವ ವ್ಯವಸ್ಥೆ ಮಾಡಲಾಗುವುದು ಎಂದರು.


ಶಾಸಕ ಕೆ.ಹರೀಶ್‌ಗೌಡ ಮಾತನಾಡಿ, ಮೈಸೂರು ನಗರಕ್ಕೆ ನೆಫ್ರಾಲಾಜಿ ಸೆಂಟರ್ ಹಾಗೂ ಕಿದ್ವಾಯಿ ಆಸ್ಪತ್ರೆ ನೀಡಬೇಕು ಎಂದು ಸಿಎಂಗೆ ಮನವಿ ಮಾಡಿದರು.


ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಕೆ.ಗೋವಿಂದರಾಜ್, ಶಾಸಕರಾದ ಡಿ.ರವಿಶಂಕರ್, ಅನಿಲ್ ಚಿಕ್ಕಮಾದು, ವಿಧಾನ ಪರಿಷತ್ ಸದಸ್ಯರಾದ ಡಾ.ಡಿ.ತಿಮ್ಮಯ್ಯ, ಮರಿತಿಬ್ಬೇಗೌಡ, ಕೆಡಿಪಿ ಸದಸ್ಯ ಡಾ.ಯತಿಂದ್ರ ಸಿದ್ದರಾಮಯ್ಯ, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ದಕ್ಷಿಣ ವಲಯ ಐಜಿಪಿ ಡಾ.ಎಂ.ಬಿ.ಬೋರಲಿಂಗಯ್ಯ, ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್, ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕಿ ಡಾ.ಸುಜಾತಾ ರಾಥೋಡ್, ಕಾಲೇಜಿನ ಡೀನ್ ಡಾ.ಕೆ.ಆರ್.ದಾಕ್ಷಾಯಿಣಿ ಮತ್ತಿತರರು ಉಪಸ್ಥಿತರಿದ್ದರು.