ಜಿಲ್ಲೆ

ಕೆ.ಅಮರನಾರಾಯಣರಿಗೆ ರಾಜ್ಯೋತ್ಸವ ಪ್ರಶಸ್ತಿ

ಚಿಕ್ಕಬಳ್ಳಾಪುರ : ನಿರಂತರವಾಗಿ ಪರಿಸರ ಸಂರಕ್ಷಣೆ ಮತ್ತು ಜಾಗೃತಿ ಮೂಡಿಸುವ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಜಿಲ್ಲೆಯ ಕೆ.ಅಮರನಾರಾಯಣ ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

ನಿವೃತ್ತ ಐಎಎಸ್ ಅಧಿಕಾರಿಯಾಗಿರುವ ಕೆ.ಅಮರನಾರಾಯಣ (66 ) ಅವರ ಹುಟ್ಟೂರು ಶಿಡ್ಲಘಟ್ಟ ತಾಲೂಕಿನ ಸುಗಟೂರು. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕರ್ತವ್ಯ ನಿರ್ವಹಣೆ ಸಂದರ್ಭದಲ್ಲಿ ಪರಿಸರ ಪೂರಕ ಕಾರ್ಯಕ್ರಮಗಳನ್ನು ರೂಪಿಸಿದ್ದು ಹೊಂಗೆ ಬೆಳೆದರೆ ಹೆಂಗೆ, ರೈತ ಮಿತ್ರ, ಹಸಿರು ಹೊನ್ನು, ಕೋಟಿ ನಾಟಿ, ಕೃಷಿ ಅರಣ್ಯ, ವೃಕ್ಷ ರಕ್ಷಾ, ಕಲ್ಲರಳಿ ಹೂವಾಗಿ ಕಲ್ಲರಳಿ ಹಣ್ಣಾಗಿ, ಬೋಳು ಗುಡ್ಡಕ್ಕೆ ಬನದ ಮೆರುಗು, ಬೆಳ್ಳಿಗುಡ್ಡಕ್ಕೆ ಹಸಿರ ಸೆರಗು, ಪರಿಮಳ ವನ, ಜೀವಿ ವೈವಿಧ್ಯ ವನ, ಪ್ರಕೃತಿಯೊಡನೆ ಸಂಭ್ರಮಿಸು, ದುರ್ಗದ ಮೊರೆ ಹಸಿರಿಗೆ ಕರೆ, ಮಳೆ ನೀರು ಸಂಗ್ರಹ ಜಲಕ್ಷಾಮಾ ನಿಗ್ರಹ, ಬಾಟಲಿ ನೀರು ಏಕೆ ಮಳೆ ನೀರು ಓಕೆ, ಸ್ವಚ್ಛತೆಯೇ ಸ್ವರ್ಗ, ಕಸದಿಂದ ಕಾಸು ಕಸದಿಂದ ರಸ, ಪ್ಲಾಸ್ಟಿಕ್ ಮುಕ್ತ ವಲಯ, ಬೀಜ ಪ್ರಸಾದ, ಸೌರಶಕ್ತಿ ಬಳಕೆ, ಜೀವಿ ವೈವಿಧ್ಯದ ರಕ್ಷಣೆ ಸೇರಿ ಹಲವು ಕಾರ್ಯಕ್ರಮಗಳ ಮೂಲಕ ಪರಿಸರ ಸಂರಕ್ಷಣೆಗೆ ಶ್ರಮಿಸಿದ್ದಾರೆ.

80 ದಶಕದಲ್ಲಿ ಉಪ ವಿಭಾಗಾಧಿಕಾರಿಯಾಗಿದ್ದಾಗ ಶಾಲಾ ವನ ನಿರ್ಮಾಣ, ಶ್ರಮದಾನದಿಂದ ಗ್ರಾಮಗಳ ಸ್ವಚ್ಛತೆ, ಅರಣ್ಯೀಕರಣಕ್ಕೆ ಒತ್ತು ನೀಡಿದ್ದು 2006 ರಲ್ಲಿ ಇಂಗಳದಾಳು ಗ್ರಾಮದಲ್ಲಿ ಬೋಳು ಗುಡ್ಡಕ್ಕೆ ಬನದ ಮೆರುಗು ಬೆಳ್ಳಿಗುಡ್ಡಕ್ಕೆ ಹಸಿರು ಸೆರಗು ಹೆಸರಿನಲ್ಲಿ 35 ಸಾವಿರ ಸಸಿಗಳನ್ನು ನಾಟಿ ಮಾಡಿಸಿದ್ದಾರೆ. 2013 ನೇ ಸಾಲಿನಿಂದ ಕಲ್ಲರಳಿ ಹಣ್ಣಾಗಿ ಹೆಸರಿನಲ್ಲಿ ಜನ್ಮದಿನ, ವಿವಾಹ ವಾರ್ಷಿಕೋತ್ಸವ ಸೇರಿ ವಿವಿಧ ಕಾಯಕ್ರಮಗಳ ಹಿನ್ನೆಲೆಯಲ್ಲಿ 16 ಎಕರೆ ಜಮೀನಿನಲ್ಲಿ 40 ಜಾತಿಯ 1400 ಹಣ್ಣಿನ ಗಿಡಗಳನ್ನು ಬೆಳೆಸಿದ್ದಾರೆ. ತ್ಯಾಜ್ಯಯುಕ್ತ ಕಲ್ಯಾಣಿ, ಕೊಳಗಳ ಶುದ್ದೀಕರಣ, ಮರಗಳ್ಳರ ವಿರುದ್ಧ ಅಮರ ಕೆಲಸ ಮಾಡಿದ ನಾರಾಯಣ ಸೇರಿ ಕೈಗೊಂಡ ಕಾರ್ಯಕ್ರಮಗಳು ಹಲವು.

ಹಲವು ಪ್ರಶಸ್ತಿಗಳು : ಚಿತ್ರದುರ್ಗದಲ್ಲಿ ಹಸಿರು ಜಿಲ್ಲಾಧಿಕಾರಿ, ಜಲಸಾಕ್ಷರತೆಯ ಮೂಲಕ ಜಲನಾರಾಯಣ, ಸ್ವಚ್ಛತಾ ನಾರಾಯಣ ಎಂಬುದಾಗಿ ಹೆಸರು ಪಡೆದುಕೊಂಡಿದ್ದಾರೆ. ನಿವೃತ್ತಿಯ ಬಳಿಕವು ಪರಿಸರ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇದನ್ನು ಗುರುತಿಸಿ ಕರ್ನಾಟಕ ರಾಜ್ಯ ವಿಶೇಷ ಪರಿಸರ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ರಾಜಸ್ಥಾನದ ಮೌಂಟು ಅಬುವಿನಲ್ಲಿ ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದಲ್ಲಿ ನಡೆದ ಗ್ಲೋಬಲ್ ಸಮ್ಮೀಟ್ ಆನ್ ಸೈನ್ಸ್, ಸ್ಪಿರಿಚ್ಯುಲಿಟಿ ಅಂಡ್ ಎನ್‌ವಿರನ್ಮೆಂಟ್ ನಲ್ಲಿ ಗಾರ್ಡಿಯನ್ ಆ್ ನೇಚರ್ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.