ಬಾಗಲಕೋಟೆ: ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತ ಪೂರ್ಣಗೊಳಿಸಿ ೧೫ ಲಕ್ಷ ಎಕರೆ ನೀರಾವರಿ ಮಾಡಲು ವಿಶೇಷ ಒತ್ತು ನೀಡಬೇಕಿದೆ. ನಮ್ಮ ಪಾಲಿನ ನೀರಿನ ಹಕ್ಕು ಶೀಘ್ರದಲ್ಲಿ ಕೋರ್ಟ ತೀರ್ಪು ಬರಲಿದೆ. ಗಡ್ಡಕ್ಕೆ ಬೆಂಕಿ ಹತ್ತಿದಾಗ ಭಾವಿ ತೋಡುವುದು ಸರಿಯಲ್ಲ. ಇದಕ್ಕಾಗಿ ಕೃಷ್ಣೆಯ ಮಕ್ಕಳ ಹಕ್ಕಿಗಾಗಿ ಬೃಹತ್ ಹೋರಾಟ ಸಜ್ಜಾಗೋಣ ಎಂದು ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಹೇಳಿದರು.
ನಗರದ ಬಿವಿವಿ ಸಂಘದ ನೂತನ ಸಭಾಭವನದಲ್ಲಿ ಶನಿವಾರ ಬಿವಿವಿ ಸಂಘ, ಅಕ್ಕನ ಬಳಗ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಸಭಾ ಜಿಲ್ಲಾ ಘಟಕ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸಂಸದರಿಗೆ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಮುಂಬಯಿ ಪ್ರಾಂತ್ಯದಲ್ಲಿ ಇದ್ದಾಗ ಎರಡು ಕೋಟಿ ರೂ. ನೀಡಿದ್ದರೇ ಕೊಯ್ನಾ ಆಣೆಕಟ್ಟಿನಿಂದ ನಮ್ಮ ಬೆಳಗಾವಿ ಡಿವಿಜನ್ ನೀರಾವರಿ ಆಗುತ್ತಿತ್ತು. ೭೦ ಆಳಿದ ಸರ್ಕಾರಗಳು ಮಾಡಲಿಲ್ಲ. ಕಾವೇರಿಗಾಗಿ ಒತ್ತು ನೀಡುವವರು ಕೃಷ್ಣೆಗಾಗಿ ಆಸಕ್ತಿ ವಹಿಸಲ್ಲ. ಇದರ ಪರಿಣಾಮ ನಮ್ಮ ಪಾಲಿನ ೧೭೨ ಟಿಎಂಸಿ ನೀರು ಬಳಕೆ ಮಾಡಲು ಸಾಧ್ಯವಾಗಿಲ್ಲ. ಮಲತಾಯಿ ಧೋರಣೆ ಇಂದಿಗೂ ಮುಂದುವರೆದಿದೆ. ೧೫ ಲಕ್ಷ ಎಕರೇ ನೀರಾವಾರಿ ಮಾಡಲು ೧.೩೨ ಲಕ್ಷ ಲಕ್ಷ ಜಮೀನು ಭೂ ಸ್ವಾಽÃನ ಮಾಡಿಕೊಳ್ಳಬೇಕಿದೆ. ೨೦ ಗ್ರಾಮಗಳ ಸ್ಥಳಾಂತರವಾಗಬೇಕು. ಹೀಗಾಗಿ ಬೃಹತ್ ಹೋರಾಟ ಅಗತ್ಯವಾಗಿದೆ ಎಂದರು.
ಮಾಜಿ ಸಿಎಂ, ಬೆಳಗಾವಿ ಸಂಸದ ಜಗದೀಶ ಶೆಟ್ಟರ ಮಾತನಾಡಿ, ಬಿಜೆಪಿ ಪಕ್ಷ ಬೆಳೆಸಲು ಉತ್ತರ ಕರ್ನಾಟಕ ದೊಡ್ಡ ಶಕ್ತಿ ನೀಡಿದೆ. ಜನತ ಪರಿವಾರದ ನಾಯಕರು ಪಕ್ಷಕ್ಕೆ ಸೇರ್ಪಡೆಗೊಂಡ ಬಳಿಕ ರಾಜಕೀಯ ದೃವಿಕರಣ ನಡೆದು ಹೋಯಿತು. ಅದರಲ್ಲಿ ಗೋವಿಂದ ಕಾರಜೋಳ, ಪಿ.ಸಿ.ಗದ್ದಿಗೌಡರ, ರಮೇಶ ಜಿಗಜಿಣಗಿ, ಆನಂದ ಮಾಮನಿ, ಮಹಾದೇವಪ್ಪ ಯಾದವಾಡ ಬಂದ ಬಳಿಕ ಹೊಸ ಶಕ್ತಿಯೇ ಸೃಷ್ಟಿಯಾಯಿತು. ನಾನು ಸಿಎಂ, ಸಚಿವನಾಗಿದ್ದಾಗ ಉ-ಕ ಭಾಗದ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದೇನೆ. ೪೩ ಹೊಸ ತಾಲೂಕು ಘೋಷಣೆ ಮಾಡಿದೆ ಅದರಲ್ಲೂ ೩೬ ತಾಲೂಕು ಉ-ಕ ಭಾಗದ್ದೂ. ಬಾಗಲಕೋಟೆ ಜಿಲ್ಲೆಯಲ್ಲಿಯೂ ೩ ಹೊಸ ತಾಲೂಕು ರಚನೆ ಮಾಡಿದೆ ಎಂದು ಹೇಳಿದರು.
ಉತ್ತರ ಕರ್ನಾಟಕ ಭಾಗ ಸಾಕಷ್ಟು ಅಭಿವೃದ್ಧಿಯಾಗಬೇಕಿದೆ. ಬಾಗಲಕೋಟೆ-ಕುಡಚಿ ರೈಲು ಮಾರ್ಗ, ಹುಬ್ಬಳ್ಳಿ -ಅಂಕೋಲ ಮಾರ್ಗ ಪೂರ್ಣಗೊಳಿಸಬೇಕಿದೆ, ಬೆಲೆಕೇರಿಯಲ್ಲಿ ಪೋರ್ಟ ನಿರ್ಮಿಸಬೇಕಿದೆ, ಕಳಸಾ ಭಂಡೂರಿ ಮಹಾದಾಯಿ ಯೋಜನೆ ತಾರ್ಕಿಕ್ ಅಂತ್ಯಕ್ಕೆ ತೆಗೆದುಕೊಂಡು ಹೋಗಬೇಕಿದೆ. ಕೊನೆ ಪ್ರಯತ್ನದಲ್ಲಿ ಎಲ್ಲರು ಯಶಸ್ವಿಯಾಗೋಣ. ಕೃಷ್ಣಾ ಮೇಲ್ದಂಡೆ ಯೋಜನೆ ಪೂರ್ಣಗೊಂಡು ದಶಕಗಳು ಕಳೆದು ಹೋಗಬೇಕಿತ್ತು, ಆದರೇ ಆಗಿಲ್ಲ. ೫೦ ಸಾವಿರ ಕೋಟಿ ರೂ. ಅಗತ್ಯವಾಗಿ ಬೇಕಿದೆ. ಇದಕ್ಕೆ ನೂತನ ಸಂಸದರು ಒಗ್ಗಟ್ಟಾಗಿ ಶ್ರಮಿಸೋಣ ಎಂದರು.
ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಮಾತನಾಡಿದರು. ಬಿವಿವಿ ಸಂಘದ ಅಧ್ಯಕ್ಷ, ನಿಡಸೋಸಿ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಬಿವಿವಿ ಸಂಘದ ಕಾರ್ಯಾಧ್ಯಕ್ಷ, ಮಾಜಿ ಶಾಸಕ ವೀರಣ್ಣ ಚರಂತಿಮಠ, ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ಕಣವಿ ವೀರಭದ್ರೇಶ್ವರ ಟ್ರಸ್ಟ್ ಅಧ್ಯಕ್ಷ ಪ್ರಕಾಶ ರೇವಡಿಗಾರ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಸಭಾ ಅಧ್ಯಕ್ಷ ಜಿ.ಎನ್.ಪಾಟೀಲ, ಅಕ್ಕನ ಬಳಗದ ಅಧ್ಯಕ್ಷೆ ನಿರ್ಮಲಾ ಹಲಕುರ್ಕಿ ಸೇರಿದಂತೆ ಬಿವಿವಿ ಸಂಘದ ಸದಸ್ಯರು ಇತರರು ಇದ್ದರು.