ಜಿಲ್ಲೆ

ಕೃಷ್ಣೆ ಭೋರ್ಗರೆತ ಪ್ರವಾಹ ಆತಂಕ

ಕೊಡೇಕಲ್ : ಒಂದು ವಾರದಿಂದ ಸುರಿಯುತ್ತಿರುವ ನಿರಂತರ ಮಳೆಯೊಂದಿಗೆ ಹೆಚ್ಚಿದ ಒಳಹರಿವಿನಿಂದಾಗಿ ನಾರಾಯಣಪುರದ ಬಸವಸಾಗರ ಜಲಾಶಯ ಭರ್ತಿಯಾಗುವ ಹಂತಕ್ಕೆ ಬಂದಿದೆ. ಮುನ್ನೆಚ್ಚರಿಕೆಯಾಗಿ ೩೦ ಮುಖ್ಯ ಗೇಟ್‌ಗಳ ಮೂಲಕ ೧,೬೬,೯೦೦ ಕ್ಯೂಸೆಕ್ ನೀರನ್ನು ಕೃಷ್ಣಾ ನದಿಗೆ ಹರಿಸಲಾಗುತ್ತಿದೆ. ಹೀಗಾಗಿ ನದಿಪಾತ್ರದಲ್ಲಿ ಪ್ರವಾಹ ಸ್ಥಿತಿ ಉಂಟಾಗಿದೆ.

ಮೈದುಂಬಿ ಹರಿಯುತ್ತಿರುವ ನದಿ ನೀರು ಜಲಾಶಯ ಕೆಳಭಾಗದಲ್ಲಿರುವ ಶ್ರೀ ಛಾಯಾ ಭಗವತಿ ದೇವಸ್ಥಾನದ ಮೆಟ್ಟಿಲುಗಳಿಗೆ ಸ್ಪರ್ಶಿಸಿದ್ದು, ದೇವಸ್ಥಾನ ಗರ್ಭಗುಡಿ ಪ್ರವೇಶಿಸಲು ಕೃಷ್ಣೆ ಹವಣಿಸುತ್ತಿರುವಂತೆ ಕಾಣುತ್ತಿದೆ. ಇನ್ನಷ್ಟು ಹೆಚ್ಚಿನ ನೀರು ನದಿಗೆ ಹರಿಸಿದರೆ ಛಾಯಾ ಭಗವತಿಗೆ ಕೃಷ್ಣೆ ದಿಗ್ಬಂಧನ ಹಾಕುವುದರಲ್ಲಿ ಸಂದೇಹವಿಲ್ಲ. ಹೀಗಾಗಿ ದೇವಸ್ಥಾನ ಅರ್ಚಕ ಚಿದಂಬರಭಟ್ಟ ಜೋಶಿ ದೇವಿ ಉತ್ಸವ ಮೂರ್ತಿಗೆ ಪೂಜೆ ನೆರವೇರಿಸಲು ಮೇಲ್ಭಾಗದಲ್ಲಿ ಸಿದ್ಧತೆ ನಡೆಸಿದ್ದಾರೆ.

ಮಹಾರಾಷ್ಟçದ ಕೊಂಕಣ, ಘಟ್ಟ ಪ್ರದೇಶಗಳಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಕೃಷ್ಣೆಗೆ ಪ್ರವಾಹ ಸ್ಥಿತಿ ಎದುರಾಗಿದ್ದು, ಆಲಮಟ್ಟಿ ಜಲಾಶಯಕ್ಕೆ ಭಾರಿ ಪ್ರಮಾಣದ ನೀರು ಹರಿದುಬರುತ್ತಿದ್ದರಿಂದ ೧.೬೦ ಲಕ್ಷ ಕ್ಯೂಸೆಕ್ ನೀರು ಬಸವಸಾಗರಕ್ಕೆ ಬಿಡಲಾಗಿದೆ. ಜಲಾಶಯದ ೩೦ ಮುಖ್ಯ ಕ್ರಸ್ಟ್ ಗೇಟ್‌ಗಳ ಮೂಲಕ ೧,೬೬,೯೦೦ ಕ್ಯೂಸೆಕ್ ನೀರು ಕೃಷ್ಣಾ ಒಡಲಿಗೆ ಹರಿಬಿಡಲಾಗುತ್ತಿದೆ. ೩೩.೩೧೩ ಟಿಎಂಸಿ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ ೨೬.೭೪ ಟಿಎಂಸಿ ನೀರಿದೆ. ಕಳೆದ ಹತ್ತು ದಿನಗಳÀಲ್ಲೇ ಜಲಾಶಯಕ್ಕೆ ಹತ್ತು ಟಿಎಂಸಿಗೂ ಅಧಿಕ ನೀರು ಬಂದಿದೆ.

ಹಳ್ಳಿಗರಿಗೆ ಆತಂಕ: ನದಿಗೆ ಅಪಾರ ಪ್ರಮಾಣದ ನೀರು ಹರಿಸುತ್ತಿರುವುದರಿಂದ ತೀರದ ಗ್ರಾಮಗಳಾದ ದೇವರಗಡ್ಡಿ, ಮೇಲಿನಗಡ್ಡಿ, ರಾಯನಗೋಳ, ಅಮ್ಮಾಪುರ ಎಸ್.ಕೆ., ಗೆದ್ದಲಮರಿ, ಜುಮಾಪುರ, ಜುಮಾಲಪುರ ತಾಂಡಾ, ತಂಗಡಬೈಲ್, ನೀಲಕಂಠರಾಯನಗಡ್ಡಿ, ಬೆಂಚಿಗಡ್ಡಿ, ಶೆಳ್ಳಗಿ, ಮುಷ್ಟಳ್ಳಿ, ಚೌಡೇಶ್ವರಹಾಳಗಳಿಗೆ ಪ್ರವಾಹ ಭೀತಿ ಎದುರಾಗಿದ್ದು, ಜನರನ್ನು ಆತಂಕಕ್ಕೀಡು ಮಾಡಿದೆ.