ಜಿಲ್ಲೆ

ಕೃಷ್ಣೆ-ಭೀಮೆ ಸಂಗಮದಲ್ಲಿ ನೀರು ನಾಯಿ ಪ್ರತ್ಯಕ್ಷ


ಯಾದಗಿರಿ: ದಕ್ಷಿಣ ಭಾರತದಲ್ಲಿ ವ್ಯಾಪಕವಾಗಿದೆ ಕಂಡು ಬರುವ, ಪ್ರಾಣಿ ಸಂಕುಲದಲ್ಲಿ ಅಪರೂಪದ ಪ್ರಭೇದ ಎಂದೇ ಕರೆಯಲ್ಪಡುವ ನೀರು ನಾಯಿಗಳು ವಡಿಗೇರಾ ತಾಲೂಕಿನ ಸಂಗಮ ಗ್ರಾಮದ ಸಮೀಪದ ಕೃಷ್ಣಾ ನದಿಯಲ್ಲಿ ಪ್ರತ್ಯಕ್ಷಗೊಂಡಿವೆ.

ತಮ್ಮ ಕುಟುಂಬದೊಡನೆ ಹಿಂಡು ಹಿಂಡಾಗಿ ನದಿ ಮಧ್ಯೆದಲ್ಲಿ ಕಂಡು ಬರುತ್ತಿರುವ ಈ ನಿರುಪದ್ರವಿ ಜೀವಿಗಳು ಸಧ್ಯ ಅಳಿವಿನಂಚಿನಲ್ಲಿವೆ. ಕೃಷ್ಣೆಯ ಒಡಲಲ್ಲಿ ನಿತ್ಯ ಸಂಜೆಯವರೆಗೂ ಆಟವಾಡಿ ಕಾಲ ಕಳೆಯುತ್ತಿರುವ ಈ ಅತಿಥಿಗಳನ್ನು ಕಣ್ಣಾರೆ ಕಾಣಲು ನದಿಪಾತ್ರದ ಸುತ್ತಮುತ್ತಲಿನ ಗ್ರಾಮಗಳ ಜನತೆ ಹೆಚ್ಚಿನ ಪ್ರಮಾಣದಲ್ಲಿ ನದಿಗೆ ಭೇಟಿ ಕೊಡುತ್ತಿದ್ದಾರೆ. ತುಂಗಭದ್ರಾ ನದಿಗುಂಟ ಅಪಾರ ಸಂಖ್ಯೆಯಲ್ಲಿ ಅಪರೂಪದ ನೀರುನಾಯಿಗಳಿವೆ. ಸಸ್ತನಿ ವರ್ಗದ ಈ ಪ್ರಭೇದಕ್ಕೆ ವೈಜ್ಞಾನಿಕ ಭಾಷೆಯಲ್ಲಿ `ಲೂತ್ರಾ' ಎಂದು ಕರೆಯಲಾಗುತ್ತದೆ.

ಸಧ್ಯ ನದಿಗಳ ಸಮೀಪ ಬಂಡೆಗಳ ಪೊಟರೆಗಳು ನೀರು ನಾಯಿಗಳ ವಾಸಸ್ಥಾನವಾಗಿವೆ. ನೀಳ ದೇಹ, ನೀರಿನಲ್ಲಿ ತೋಯದ ತುಪ್ಪಳದ ಚರ್ಮ, ಚಪ್ಪಟೆಯಾದ ತಲೆ, ಬಲವಾದ ಬಾಲ, ಹುಟ್ಟುಗಳಿಂತಿರುವ ಪಾದಗಳು, ಸ್ಪರ್ಶಸೂಕ್ಷ್ಮ ಮೀಸೆಗೂದಲುನಿಂದ ಗಮನ ಸೆಳೆಯುತ್ತಿರುವ ನಾಯಿಗಳು ಜನರು ಚೀರಾಡಿದರೆ ನೀರಲ್ಲಿ ಮುಳುಗಿ ತಲೆ ಮಾತ್ರ ಹೊರಗಡೆ ಇಟ್ಟು ತದೇಕ ಚಿತ್ತದಿಂದ ನೋಡುತ್ತಿರುವುದು ಬಲು ಅಪರೂಪದ ದೃಶ್ಯವಾಗಿದೆ.
ನಾರಾಯಣಪುರದ ಬಸವಸಾಗರ ಜಲಾಶಯದಲ್ಲಿ ಕಳೆದೊಂದು ದಶಕದ ಹಿಂದೆ ನೀರು ನಾಯಿಗಳು ಪ್ರತ್ಯಕ್ಷವಾಗಿದ್ದವು. ಅಲ್ಲಿಂದ ಇವು ಜಿಲ್ಲೆಯಲ್ಲಿ ಕಂಡು ಬಂದಿರಲಿಲ್ಲ. ಕೃಷ್ಣಾ ನದಿಯಲ್ಲಿ ನೀರು ಹೆಚ್ಚಿನ ಪ್ರಮಾಣದಲ್ಲಿದ್ದು, ಅಲ್ಲದೆ ಆಲಮಟ್ಟಿ ಜಲಾಶಯದಿಂದ ಇವುಗಳು ವಲಸೆ ಬಂದಿರಬಹುದು ಎನ್ನುತ್ತಾರೆ ಅರಣ್ಯ ಇಲಾಖೆ ಅಧಿಕಾರಿಗಳು.

ಮೀನು, ಏಡಿ, ಕಪ್ಪೆ, ಬಾತುಕೋಳಿ ಇವುಗಳ ಆಹಾರ. ಸಧ್ಯ ಕೃಷ್ಣಾ ನದಿಯಲ್ಲಿ ಅಕ್ರಮ ಮರಳುಗಾರಿಗೆ ಅವ್ಯಾಹತವಾಗಿ ನಡೆಯುತ್ತಿದ್ದು, ನೀರು ನಾಯಿಗಳ ಸಂತತಿಗೆ ಅಪಾಯ ತಂದೊಡ್ಡುವ ಸಾಧ್ಯತೆ ಇದೆ. ಹೀಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ತಕ್ಷಣ ಈ ಬಗ್ಗೆ ಕ್ರಮ ಕೈಗೊಂಡು ಈ ಅಪರೂಪದ ಸಸ್ತನಿ ಸಂಕುಲಕ್ಕೆ ರಕ್ಷಣೆ ಒದಗಿಸುವುದು ಜರೂರಿ ಎನಿಸಿದೆ.