ರಾಯಚೂರು ರಾಯಚೂರು ಬೃಹತ್ ಶಾಖೋತ್ಪನ್ನ ವಿದ್ಯುತ್ ಕೇಂದ್ರಕ್ಕೆ ನೀರು ಒದಗಿಸುವ ನಿಟ್ಟಿನಲ್ಲಿ ತಾಲೂಕಿನ ಗುರ್ಜಾಪುರ ಹತ್ತಿರ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಬ್ಯಾರೇಜ್ ಕಂ.ಬ್ರಿಡ್ಜ್ ಶನಿವಾರ ಮುಳುಗಡೆಯಾಗಿದೆ.
ಮಹಾರಾಷ್ಟ್ರದಲ್ಲಿ ಹೆಚ್ಚಿನ ಮಳೆಯಾಗಿದ್ದರಿಂದ ನಾರಾಯಣಪುರ ಜಲಾಶಯದಿಂದ ಪ್ರಸ್ತುತ 2.10 ಲಕ್ಷ ಕ್ಯೂಸೆಕ್ ನೀರು ಹರಿಬಿಡಲಾಗುತ್ತಿದ್ದು, ಈಗಾಗಲೇ ಬ್ಯಾರೇಜ್‌ನ ಎಲ್ಲ 194 ಗೇಟ್‌ಗಳನ್ನು ತೆರೆದು ನದಿಗೆ ನೀರು ಹರಿಸಲಾಗುತ್ತಿದೆ. ಹೆಚ್ಚಿನ ನೀರು ಹರಿದು ಬರುತ್ತಿದ್ದರಿಂದ ಸೇತುವೆ ಮುಳುಗಡೆಯಾಗಿದೆ.
ಕಳೆದ 5 ವರ್ಷದಿಂದ ಬ್ಯಾರೇಜ್‌ನಲ್ಲಿ ನೀರು ನಿಲುಗಡೆ ಮಾಡಲಾಗುತ್ತಿದ್ದು, 2019 ರ ಪ್ರವಾಹದ ಸಂದರ್ಭದಲ್ಲಿ ಬ್ಯಾರೇಜ್ ಸಂಪೂರ್ಣ ಮುಳುಗಡೆಯಾಗಿತ್ತು. ಜತೆಗೆ ಸೇತುವೆಗೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಕೊಚ್ಚಿ ಹೋಗಿತ್ತು. 7 ವರ್ಷದ ನಂತರ ಸೇತುವೆ ಮುಳುಗಡೆಯಾಗಿದ್ದು, ಇದರಿಂದ ರಾಯಚೂರು-ಯಾದಗಿರಿ ಜಿಲ್ಲೆಗಳನ್ನು ಸಂಪರ್ಕಿಸುವಂತೆ ಬ್ಯಾರೇಜ್ ಮೇಲೆ ನಿರ್ಮಾಣ ಮಾಡಲಾಗಿರುವ ಸೇತುವೆ ಮೇಲೆ ಹೆಚ್ಚಿನ ವಾಹನ ಸಂಚಾರ ಇಲ್ಲದಿದ್ದರೂ ಮುಂಜಾಗ್ರತಾ ಕ್ರಮವಾಗಿ ಸೇತುವೆ ಮೇಲೆ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ.