ಘಟಪ್ರಭಾ ನದಿ ಅಬ್ಬರದಿಂದಾಗಿ ಮುಧೋಳ ತಾಲೂಕಿನ ಮಳಲಿ ಗ್ರಾಮದ ಶಾಲೆಯ ಆವರಣ ಕೆರೆಯಂತಾಗಿದ್ದಲ್ಲದೇ ಕೊಠಡಿಗಳಿಗೂ ನೀರು ನುಗ್ಗಿರುವುದು. 
ಜಿಲ್ಲೆ

ಕೃಷ್ಣಾ, ಘಟಪ್ರಭಾ ನದಿಗಳ ರಣಕೇಕೆ


ಅಶೋಕ ಶೆಟ್ಟರ, ಬಾಗಲಕೋಟೆ: ಮೂರು ನದಿಗಳ ಹರಿದಿರುವ ಬಾಗಲಕೋಟೆ ಜಿಲ್ಲೆಯಲ್ಲಿ ಈಗಾಗಲೇ ಕೃಷ್ಣಾ ಮತ್ತು ಘಟಪ್ರಭಾ ನದಿಗಳ ಅಬ್ಬರ ಜೋರಾಗಿವೆ. ಘಟಪ್ರಭಾ ನದಿಯಂತೂ ರಣಕೇಕೆ ಹಾಕುತ್ತಿದ್ದು, ಇದರಿಂದ ನದಿ ತೀರದ ಗ್ರಾಮಗಳ ಜನಜೀವನ ಮತ್ತೆ ನಲುಗಿ ಹೋಗುತ್ತಿದೆ.
ಅಪಾರ ಪ್ರಮಾಣದ ಬೆಳೆಗಳು ಜಲಾವೃತವಾಗಿವೆ. ರಸ್ತೆ. ಸೇತುವೆಗಳು ಮುಳುಗಿದ್ದು, ಶಾಲಾ ಮೈದಾನಗಳು ಕೆರೆಯಂತಾಗಿ, ಕೊಠಡಿಗಳಲ್ಲಿ ನೀರು ನುಗ್ಗುತ್ತಿದೆ. ಸದ್ಯ ಎಲ್ಲೆಡೆ ನೀರು ನಿಂತಿದ್ದು, ಪ್ರವಾಹ ತಗ್ಗಿ ನೀರು ಇಳಿದ ಮೇಲೆಯೇ ನಿಖರವಾಗಿ ಎಲ್ಲೆಲ್ಲಿ ಎಷ್ಟೆಷ್ಟು ಹಾನಿಯಾಗಿದೆ ಎನ್ನುವ ಸರ್ವೆ ನಡೆಯಲಿದೆ.

ಕೃಷ್ಣಾ ಮತ್ತು ಘಟಪ್ರಭಾ ಅಬ್ಬರದ ಬೆನ್ನಲ್ಲೆ ಇದೀಗ ಮಲಪ್ರಭಾ ನದಿ ತೀರದಲ್ಲೂ ಭೀತಿ ಶುರುವಾಗಿದೆ. ನವೀಲುತೀರ್ಥ ಜಲಾಶಯದಿಂದ ೫ ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಅಪಾಯದ ಸುಳಿವು ನೀಡುತ್ತಿದೆ. ಕೃಷ್ಣಾ ನದಿಯಲ್ಲಿ ಲಕ್ಷ ಲಕ್ಷ ಕ್ಯೂಸೆಕ್ ನೀರು ಹರಿದು ಬಂದರೂ ಪ್ರವಾಹ ಉಂಟಾಗಲ್ಲ. ಅದೇ ಘಟಪ್ರಭಾ ನದಿಗೆ ೫೦ ಸಾವಿರ ಕ್ಯೂಸೆಕ್ ಗೂ ಅಽಕ ನೀರು ಬಂದಲ್ಲಿ ಪ್ರವಾಹ ಸ್ಥಿತಿ ಉಂಟಾಗುತ್ತದೆ. ಅದು ಈಗ ಆರಂಭವಾಗಿದೆ.

ಮಲಪ್ರಭಾ ಭಿನ್ನ :
ಆದರೆ, ಮಲಪ್ರಭಾ ನದಿ ತೀರ ಈ ಎರಡು ನದಿಗಳಂತೆ ಅಲ್ಲ. ಮಲಪ್ರಭಾ ನದಿಗೆ ೨೦ ಸಾವಿರ ಕ್ಯೂಸೆಕ್ ನೀರು ಬಂದರೂ ಹಲವು ಗ್ರಾಮಗಳಲ್ಲಿ ಜಮೀನುಗಳು ಜಲಾವೃತವಾಗಿ ಬೆಳೆಹಾನಿ ಉಂಟಾಗುತ್ತದೆ. ಅದು ೩೦ ಸಾವಿರ ದಾಟಿದರೆ ಗ್ರಾಮಗಳಿಗೆ ನೀರು ನುಗ್ಗುತ್ತದೆ. ಸದ್ಯ ಅಲ್ಲಿ ಅಂತ ಅಪಾಯ ಇಲ್ಲವಾದರೂ ಬೆಣ್ಣಿಹಳ್ಳ ತುಂಬಿ ಬಂದರೆ ಜಿಲ್ಲೆಯ ಬಾದಾಮಿ, ಗುಳೇದಗುಡ್ಡ, ಹುನಗುಂದ, ಇಳಕಲ್ಲ ತಾಲೂಕಿನ ೭೧ ಗ್ರಾಮಗಳ ಪರಿಸ್ಥಿತಿ ಅಲ್ಲೋಲ ಕಲ್ಲೋಲವಾಗಲಿದೆ. ಹೀಗಾಗಿಯೇ ಸದ್ಯ ೫ ಸಾವಿರ ಕ್ಯೂಸೆಕ್ ನೀರು ಬರುತ್ತಿದ್ದರೂ ನದಿ ತೀರದ ಜನರಿಗೆ ಎಚ್ಚರಿಕೆಯನ್ನು ಜಿಲ್ಲಾಡಳಿತ ನೀಡುತ್ತಿದೆ.

ಘಟಪ್ರಭಾ ತೀರದಲ್ಲಿ ಹಾನಿ ಹೆಚ್ಚು :
ಘಟಪ್ರಭಾ ನದಿಗೆ ಈ ವರ್ಷ ಈ ವರೆಗೂ ಅತಿ ಹೆಚ್ಚು ನೀರು ಹರಿದು ಬಂದಿದ್ದು ೮೦ ಸಾವಿರ ಕ್ಯೂಸೆಕ್ ವರೆಗೂ. ಹೀಗಾಗಿ ಅಲ್ಲಿ ತೀವ್ರ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ. ಸಾವಿರಾರು ಹೆಕ್ಟರ್ ಪ್ರದೇಶದ ಬೆಳೆಗಳು ನೀರಲ್ಲಿ ಮುಳುಗಿಹೋಗಿವೆ. ಎಂಟತ್ತು ಗ್ರಾಮಗಳಲ್ಲಿ ನೀರು ನುಗ್ಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ. ರಸ್ತೆ, ಸೇತುವೆಗಳು ಜಲಾವೃತಗೊಂಡು ಸಂಪರ್ಕಕ್ಕೆ ಅಡಚಣೆಯಾಗಿದೆ. ಮನೆಗಳಿಗೆ ನೀರು ನುಗ್ಗಿದ್ದರಿಂದ ನೂರಾರು ಕುಟುಂಬಗಳು ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದುಕೊಂಡಿವೆ. ಸದ್ಯ ನದಿಗೆ ಹರಿದು ಬರುತ್ತಿರುವ ನೀರಿನ ಪ್ರಮಾಣ ಕಡಿಮೆ ಆಗುತ್ತಿರುವುದು ತುಸು ಸಮಾಧಾನದ ವಿಚಾರ. ಅದಾಗ್ಯೂ ಈಗಾಗಲೇ ಹಲವು ಗ್ರಾಮಗಳಲ್ಲಿ ಉಂಟಾಗಿರುವ ಪ್ರವಾಹದಿಂದ ಹೊರಬರಲು ಅಲ್ಲಿನ ಜನರಿಗೆ ತಿಂಗಳುಗಳೇ ಬೇಕಾಗುತ್ತದೆ. ಇನ್ನು ಬೆಳೆಹಾನಿ ಯಾವ ಪ್ರಮಾಣ ಎಂದು ಈಗಲೇ ಹೇಳಲಾಗದು.

ಅಪಾಯ ತಡೆಗಟ್ಟಿದ ಆಲಮಟ್ಟಿ :
ಇನ್ನು ಕೃಷ್ಣಾ ನದಿಗೆ ಇನ್ನೂ ಸಹ ಅಪಾರ ಪ್ರಮಾಣದಲ್ಲಿ ನೀರಿನ ಹರಿವು ಇದೆ. ಸದ್ಯ ೩ ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ೨.೫೦ ಲಕ್ಷ ಕ್ಯೂಸೆಕ್ ನೀರು ಬಂದರೆ ಜಮಖಂಡಿ ತಾಲೂಕಿನಲ್ಲಿ ಪ್ರವಾಹ ಉಂಟಾಗುತ್ತಿತ್ತು. ಆದರೆ, ಈ ಸಲ ಆಲಮಟ್ಟಿ ಜಲಾಶಯದಿಂದ ಹೊರಹರಿವು ಹೆಚ್ಚಿದ್ದರಿಂದ ಅಪಾಯವನ್ನು ನಿಯಂತ್ರಿಸಿದೆ. ಬುಧವಾರ ಆಲಮಟ್ಟಿಯಿಂದ ೩.೫ ಲಕ್ಷ ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ. ಇತ್ತ ಮಲಪ್ರಭಾ ನದಿಯಲ್ಲೂ ಏನಾದರೂ ನೀರಿನ ಹರಿವು ಹೆಚ್ಚಾದಲ್ಲಿ ಕೂಡಲಸಂಗಮ ಭಾಗದಲ್ಲಿ ಕೃಷ್ಣಾ ಮತ್ತು ಮಲಪ್ರಭಾ ನದಿ ನೀರು ಒತ್ತಿ ಪ್ರವಾಹ ಸ್ಥಿತಿ ಉಂಟಾಗುವ ಆತಂಕ ಎದುರಾಗಲಿದೆ. ಸದ್ಯ ಮಲಪ್ರಭಾ ಶಾಂತವಾಗಿರುವುದು ಸಮಾಧಾನದ ವಿಷಯ.
ಹತ್ತಕ್ಕೂ ಹೆಚ್ಚು ಶಾಲೆಗಳು ಜಲಾವೃತ :
ಘಟಪ್ರಭಾ ಅಬ್ಬರ ಜೋರಾಗಿರುವುದರಿಂದ ಮುಧೋಳ ತಾಲೂಕಿನ ಆರಕ್ಕೂ ಹೆಚ್ಚು ಶಾಲೆಗಳು ಜಲಾವೃತವಾಗಿವೆ. ಜಮಖಂಡಿ ತಾಲೂಕಿನಲ್ಲಿ ಕೃಷ್ಣಾ ನದಿ ಆರ್ಭಟದಿಂದಾಗಿ ಅಲ್ಲಿಯೂ ಸಹ ನಾಲ್ಕÊೆದು ಶಾಲೆಗಳು ನೀರಿನಿಂದ ಆವೃತ್ತವಾಗಿವೆ. ಇದಲ್ಲದೇ ಜಮಖಂಡಿ ತಾಲೂಕಿನಲ್ಲಿ ಜಿಟಿಜಿಟಿ ಮಳೆಯಿಂದಾಗಿ ಹತ್ತು ಶಾಲೆಗಳ ೩೭ ಕೊಠಡಿಗಳು ಸೋರಲು ಆರಂಭಿಸಿವೆ ಎಂದು ವರದಿಯಾಗಿದೆ.
ಇನ್ನು ಸ್ಥಳೀಯವಾಗಿ ಪರಿಸ್ಥಿತಿ ಅವಲೋಕಿಸಿಕೊಂಡು, ಎಸ್‌ಡಿಎಂಸಿ ಸದಸ್ಯರ ಗಮನಕ್ಕೆ ತಂದು ಶಾಲೆಗಳಿಗೆ ರಜೆ ನೀಡುವಂತೆ ಕ್ಷೇತ್ರ ಶಿಕ್ಷಣಾಽಕಾರಿಗಳು ಶಾಲೆಗಳ ಮುಖ್ಯೋಪಾಧ್ಯಾಯರಿಗೆ ಸೂಚನೆ ನೀಡಿದ್ದಾರೆ. ರಸ್ತೆಗಳು ಬಂದ್ ಆಗಿರುವುದು, ಗ್ರಾಮದಲ್ಲಿ ನೀರು ನುಗ್ಗಿರುವುದು ಸೇರಿ ಪರಿಸ್ಥಿತಿ ನೋಡಿಕೊಂಡು ರಜೆ ಕೊಡಲಾಗುತ್ತಿದೆ. ಇನ್ನು ಕಾಳಜಿ ಕೇಂದ್ರಗಳನ್ನು ತೆರೆದಿರುವ ಕಡೆಗಳಲ್ಲೂ ಶಾಲೆಗಳಿಗೆ ರಜೆ ನೀಡಲಾಗಿದೆ.
೧೭.೫೫ ಕಿ.ಮೀ. ರಸ್ತೆ ಮುಳುಗಡೆ :
ಕೃಷ್ಣಾ ಮತ್ತು ಘಟಪ್ರಭಾ ನದಿ ಅಬ್ಬರದಿಂದಾಗಿ ಒಟ್ಟು ೧೭.೫೫ ಕಿ.ಮೀ. ರಸ್ತೆಗಳು ಮುಳುಗಿವೆ. ಒಟ್ಟು ೨೪ ರಸ್ತೆಗಳು ಮುಳುಗಿದ್ದು, ಮೂರು ಪ್ರಮುಖ ಹೆದ್ದಾರಿಗಳು ಜಲಾವೃತವಾಗಿವೆ. ಚಿಚಖಂಡಿ, ಮುಧೋಳ-ಯಾದವಾಡ, ಜಮಖಂಡಿ-ಮೈಗೂರ-ಮುತ್ತೂರ-ಕಂಕಣವಾಡಿ, ಯಲ್ಲಟ್ಟಿ-ಆಸಂಗಿ, ಟಕ್ಕೋಡ-ತುಬಚಿ ಮುಖ್ಯ ರಸ್ತೆಗಳು ಸಹ ಜಲಾವೃತವಾಗಿವೆ. ನೀರು ಇಳಿದ ಬಳಿಕವಷ್ಟೆ ರಸ್ತೆ ಮತ್ತು ಸೇತುವೆಗಳು ಎಷ್ಟು ಪ್ರಮಾಣದಲ್ಲಿ ಹಾನಿಗೆ ಒಳಗಾಗಿವೆ ಎಂದು ಗೊತ್ತಾಗುತ್ತದೆ ಎಂದು ಲೋಕೋಪಯೋಗಿ ಇಲಾಖೆ ಅಽಕಾರಿಗಳು ಹೇಳುತ್ತಾರೆ.