ಕೆ.ಆರ್.ಸಾಗರ: ಕೃಷ್ಣರಾಜಸಾಗರ ಅಣೆಕಟ್ಟೆಯಿಂದ ತಮಿಳುನಾಡಿಗೆ ಸುಮಾರು 12 ಸಾವಿರ ಕ್ಯೂಸೆಕ್ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಮೇಲುಕೋಟೆ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ನೂರಾರು ರೈತ ಸಂಘದ ಕಾರ್ಯಕರ್ತರು ಕೆ.ಆರ್.ಸಾಗರ ಅಣೆಕಟ್ಟೆಯ ಮುಖ್ಯದ್ವಾರದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.
ಕೆ.ಆರ್.ಸಾಗರ ಅಣೆಕಟ್ಟೆಯ ಮುಖ್ಯದ್ವಾರ ಬಳಿ ಗುರುವಾರ ಜಮಾಯಿಸಿದ ಪ್ರತಿಭಟನಾಕಾರರು, ಅಣೆಕಟ್ಟೆಯಿಂದ ಕಳೆದೆರಡು ದಿನಗಳಿಂದ ತಮಿಳುನಾಡಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಸುವ ರಾಜ್ಯ ಸರ್ಕಾರದ ತೀರ್ಮಾನ ವಿರೋಧಿಸಿ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳಕ್ಕಾಗಮಿಸಿದ ಕೆ.ಆರ್.ಸಾಗರ ಕಾವೇರಿ ನೀರಾವರಿ ನಿಗಮ ಇಇ ಜಯಂತ್ ಅವರನ್ನು ಶಾಸಕ ದರ್ಶನ್ ಪುಟ್ಟಣ್ಣಯ್ಯ ಮತ್ತು ರೈತರು ತರಾಟೆಗೆ ತೆಗೆದುಕೊಂಡರು. ಯಾವ ನಿಯಮದಡಿ ಅಣೆಕಟ್ಟೆಯಿಂದ ತ.ನಾಡಿಗೆ ನೀರು ಹರಿಸುತ್ತಿದ್ದಿರಿ? ತಮಿಳುನಾಡು ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದೆ ಎಂದು ಹೆಚ್ಚಿನ ಪ್ರಮಾಣ ನೀರು ಹರಿಸಿದರೆ ಮುಂದಿನ ದಿನಗಳಲ್ಲಿ ರಾಜ್ಯ ಜನತೆಗೆ ಕುಡಿಯುವ ನೀರು ಮತ್ತು ರೈತರ ಬೆಳೆಗಳಿಗೆ ತೊಂದರೆಯಾಗಲಿದೆ. ಸಂಕಷ್ಟ ಸೂತ್ರ ಪಾಲನೆ ನಿಟ್ಟಿನಲ್ಲಿ ಕಾವೇರಿ ನಿರ್ವಹಣಾ ಪ್ರಾಧಿಕಾರಿದ ತೀರ್ಪಿನಂತೆ ಏಕೆ ತೀರ್ಮಾನ ತೆಗೆದುಕೊಂಡಿಲ್ಲ ಎಂದು ಕಾವೇರಿ ನಿರ್ವಹಣಾ ಪ್ರಾಧಿಕಾರದ ತೀರ್ಪುಗಳ ಪುಸ್ತಕದಲ್ಲಿನ ಉಲ್ಲೇಖವನ್ನು ತೋರಿಸಿದರು.
ಇದಕ್ಕೆ ಉತ್ತರಿಸಿದ ಇಇ ಜಯಂತ್, ತಮಿಳುನಾಡು ಸರ್ಕಾರ ಸುಪ್ರೀಂಕೋರ್ಟ್ ಮೊರೆ ಹೋಗಿದೆ. ಆದ ಕಾರಣದಿಂದ ಕೋರ್ಟ್ ಆದೇಶದಂತೆ ನೀರು ಹರಿಸುತ್ತಿದ್ದೇವೆ. ನಮ್ಮ ಜನತೆಗೆ ತೊಂದರೆಯಾಗದಂತೆ ಎಚ್ಚರಿಕೆಯಿಂದ ನೀರು ಹರಿಸಲಾಗುತ್ತಿದೆ. ಕಾವೇರಿ ನೀರಾವರಿ ನಿರ್ವಹಣಾ ಪ್ರಾಧಿಕಾರದ ನಿಯಮ ಪಾಲನೆ ಮಾಡುತ್ತಿದ್ದೇವೆ ಎಂದರು.
ಇದಕ್ಕೆ ಬೇಸರ ವ್ಯಕ್ತಪಡಿಸಿದ ಶಾಸಕರು, ಮೊಬೈಲ್ ಮೂಲಕ ಕಾವೇರಿ ನೀರಾವರಿ ನಿಗಮ ದಕ್ಷಿಣ ವಲಯ ಮುಖ್ಯ ಅಭಿಯಂತರ ವೆಂಕಟೇಶ್ ಜತೆ ಮಾತನಾಡಿ, ಸಂಕಷ್ಟ ಸೂತ್ರದಡಿ ನೀವು ನೀರು ಬಿಡುತ್ತಿಲ್ಲ. ಒತ್ತಡಕ್ಕೆ ಮಣಿದು ಮಂಡ್ಯ ಮತ್ತು ಮೈಸೂರು ರೈತರ ಕಡೆಗಣಿಸಿ ನೀರು ಹರಿಸುತ್ತಿದ್ದಿರಿ. ನಮಗೆ ನೀರಿಲ್ಲ, ಏಕೆ ತಮಿಳುನಾಡಿಗೆ ಹೆಚ್ಚಿನ ನೀರು ಹರಿಸುತ್ತಿದ್ದರಿ? ಮೊದಲು ಕಾವೇರಿ ಪ್ರಾಧಿಕಾರದ ಪುಸ್ತಕದಲ್ಲಿನ ತೀರ್ಮಾನ ನೋಡಿ ಕ್ರಮ ತೆಗೆದುಕೊಳ್ಳಿ. ಶೀಘ್ರವಾಗಿ ತಮಿಳುನಾಡಿಗೆ ಹರಿಸುತ್ತಿರುವ ನೀರು ನಿಲ್ಲಿಸದೆ ಇದ್ದಲ್ಲಿ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಮಂಡ್ಯ ಜಿಲ್ಲಾ ರೈತ ಸಂಘದ ಅಧ್ಯಕ್ಷ ಕೆಂಪೂಗೌಡ, ಪಾಂಡವಪುರ ತಾಲೂಕು ಅಧ್ಯಕ್ಷ ಪಿ.ನಾಗರಾಜು, ಶ್ರೀರಂಗಪಟ್ಟಣ ತಾಲೂಕು ಅಧ್ಯಕ್ಷ ಮುರಳಗಾಲ ಕೃಷ್ಣೇಗೌಡ, ಮುಖಂಡರಾದ ಪ್ರಸನ್ನ ಎನ್.ಗೌಡ, ಕಡತನಾಳು ಗೋವಿಂದೇಗೌಡ ಸೇರಿದಂತೆ ನೂರಾರು ರೈತ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.