ಜಿಲ್ಲೆ

‘ಕೃಷ್ಣರಾಜ’ವನ್ನು ದೇಶಕ್ಕೆ ಮಾದರಿ ಕ್ಷೇತ್ರವನ್ನಾಗಿಸೋಣ : ಎಸ್.ಎ. ರಾಮದಾಸ್

ಮೈಸೂರು: ದೇಶದಲ್ಲಿಯೇ ಕೃಷ್ಣರಾಜ ವಿಧಾನಸಭಾ ಕ್ಷೇತ್ರವನ್ನು ಮಾದರಿಯಾಗಿಸುವ ನಿಟ್ಟಿನಲ್ಲಿ ಬುನಾದಿ ಹಾಕೋಣ ಎಂದು ಶಾಸಕ ಎಸ್.ಎ. ರಾಮದಾಸ್ ಹೇಳಿದರು.

ಕೃಷ್ಣರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಾರ್ಡ್ ನಂ.50ರ ಅಗ್ರಹಾರದ ಶ್ರೀ ರೇಣುಕಾಚಾರ್ಯ ದೇವಸ್ಥಾನ ಆವರಣದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಯೋಗಕ್ಷೇಮಯಾತ್ರೆಯಲ್ಲಿ ಮಾತನಾಡಿ, ಇಡೀ ದೇಶ ಇಂದು ಕೃಷ್ಣರಾಜ ಕ್ಷೇತ್ರದತ್ತ ತಿರುಗಿ ನೋಡುತ್ತಿದೆ. ಅಂತಹ ಯೋಜನೆಗಳು ಕ್ಷೇತ್ರದಲ್ಲಿ ಜಾರಿಯಾಗಿವೆ. ಅದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತುಂಬಿದ ಸಭೆಯಲ್ಲಿ ನನ್ನ ಬೆನ್ನುತಟ್ಟಿ ಪ್ರೋತ್ಸಾಹಿಸಿರುವುದು ಸಾಕ್ಷಿಯಾಗಿದೆ ಎಂದರು.

ಬಿಜೆಪಿ ಅಭಿವೃದ್ಧಿಯ ಮಂತ್ರ ಪಠಿಸುತ್ತದೆಯೇ ಹೊರತು, ಅನ್ಯ ವಿಚಾರಗಳತ್ತ ಗಮನ ಹರಿಸುವುದಿಲ್ಲ ಎಂಬುದನ್ನು ನರೇಂದ್ರ ಮೋದಿ ಹಾಗೂ ಬಸವರಾಜ ಬೊಮ್ಮಾಯಿ ಸಾಬೀತು ಮಾಡಿದ್ದಾರೆ. ಆ ದಿಕ್ಕಿನಲ್ಲಿ ನಮ್ಮೆಲ್ಲರ ಚಿತ್ತ ಇರಬೇಕು. ಕ್ಷೇತ್ರ ವ್ಯಾಪ್ತಿಯ 482 ಕಿ.ಮೀ.ರಸ್ತೆ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದ್ದು, ಶೇ.90ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಮಾಸಾಂತ್ಯದಲ್ಲಿ ಎಲ್ಲ ಕಾಮಗಾರಿ ಪೂರ್ಣಗೊಳ್ಳಲಿದೆ. ಮಾತ್ರವಲ್ಲ ಮುಂದಿನ ಹತ್ತು ವರ್ಷಗಳ ಕಾಲ ಕ್ಷೇತ್ರದಲ್ಲಿ ಯಾವುದೇ ರೀತಿಯ ಸಮಸ್ಯೆ ಕಂಡುಬಾರದ ರೀತಿಯಲ್ಲಿ ದೂರದೃಷ್ಟಿಯ ಯೋಜನೆಗಳನ್ನು ಅನುಷ್ಠಾನ ಮಾಡಲಾಗಿದೆ ಎಂದರು.

ಜಾತಿ, ಧರ್ಮ ಮೀರಿ ಈ ಕ್ಷೇತ್ರದ ಜನ ನನನ್ನು ಮನೆ ಮಗನಂತೆ ಕಂಡಿದ್ದಾರೆ, ಆಶೀರ್ವದಿಸಿದ್ದಾರೆ. ಅದರಂತೆಯೇ ನಾನು ಶಾಸಕನಾಗಿದ್ದ ಅಷ್ಟೂ ವರ್ಷಗಳ ಕಾಲ ಪ್ರಾಮಾಣಿಕವಾಗಿ ಕೆಲಸ ಮಾಡಿದ ತೃಪ್ತಿ ಇದೆ. ಜನರ ಕಷ್ಟಗಳಿಗೆ ಸ್ಥಳದಲ್ಲೇ ಪರಿಹಾರ ಕಂಡುಕೊಳ್ಳಲು ಯೋಗಕ್ಷೇಮ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಕೇಂದ್ರ ಹಾಗೂ ರಾಜ್ಯದಲ್ಲಿರುವ ಬಿಜೆಪಿ ನೇತೃತ್ವದ ಸರ್ಕಾರ ಹಲವು ಹತ್ತು ಜನಪರ ಕಾರ್ಯಕ್ರಮ ರೂಪಿಸಿವೆ. ಒಂದಲ್ಲ ಒಂದು ಯೋಜನೆಗಳ ಪ್ರಯೋಜನ ಕ್ಷೇತ್ರದ ಒಟ್ಟು 80 ಸಾವಿರ ಕುಟುಂಬಗಳ ಪೈಕಿ 70 ಸಾವಿರ ಕುಟುಂಬಕ್ಕೆ ಲಭಿಸಿದೆ. ಇಂತಹ ಹೊತ್ತಿನಲ್ಲಿ ಮತ್ತಷ್ಟು ಯೋಜನೆಗಳು ಸಿಗಬೇಕಾಗದಲ್ಲಿ ಅದು ಬಿಜೆಪಿಯಿಂದ ಮಾತ್ರ ಸಾಧ್ಯ ಎಂದರು.

ಕೊಳವೆಬಾವಿ ಮುಕ್ತ ಕ್ಷೇತ್ರವನ್ನಾಗಿಸುವ ನಿಟ್ಟಿನಲ್ಲಿ ಯಶಸ್ಸು ಸಾಧಿಸಿದ್ದೇವೆ. ಮಳೆಗಾಲದಲ್ಲಿ ಕ್ಷೇತ್ರದ ಹಲವೆಡೆ ಸಮಸ್ಯೆ ಕಾಣಿಸಿಕೊಳ್ಳುತ್ತಿತ್ತು, ಇದೀಗ ಆ ಸಮಸ್ಯೆಯನ್ನು ಬಗೆಹರಿಸಲಾಗಿದೆ. ಹತ್ತು ಹಲವು ಯೋಜನೆಗಳನ್ನು ಜನಸಾಮಾನ್ಯರ ಮನೆ ಬಾಗಿಲಿಗೆ ತಲುಪಿಸುವ ಕೆಲಸ ಮಾಡಲಾಗಿದೆ ಎಂದು ಹೇಳಿದರು.