ಚಿಂತಾಮಣಿ: ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ನೇತೃತ್ವದ ತಂಡ ತಾಲೂಕಿನ ಕೃಷ್ಣರಾಜಪುರದಲ್ಲಿರುವ (ಮರಿ ಮಾಕಲಹಳ್ಳಿ) ಪಮ್ಮಲ ಜನಾಂಗದವರನ್ನು ಭೇಟಿ ಮಾಡಿ, ಅಹವಾಲು ಸ್ವೀಕರಿಸಿತು.
ಕುಟುಂಬದ ಸದಸ್ಯರು, ಸಮಸ್ಯೆಗಳು ಮತ್ತು ಸವಲತ್ತುಗಳ ಸದ್ವಿನಿಯೋಗ ಸೇರಿ ಹಲವು ಮಾಹಿತಿ ಸಂಗ್ರಹಿಸಿತು. ಕೃಷ್ಣರಾಜಪುರದಲ್ಲಿ ಹಲವು ವರ್ಷಗಳಿಂದ ವಾಸವಿರುವ ಪಮ್ಮಲ ಜನಾಂಗದ 15ಕ್ಕೂ ಹೆಚ್ಚು ಕುಟುಂಬಗಳಿಗೆ ಇದುವರೆಗೂ ಜಾತಿ ಪ್ರಮಾಣ ಪತ್ರ ಸಿಗದೆ ಸರ್ಕಾರಿ ಸವಲತ್ತುಗಳಿಂದ ವಂಚಿತರಾಗಿರುವ ಕುರಿತು ಜನಾಂಗದವರು ಗಮನ ಸೆಳೆದಿದ್ದಾರೆ ಎಂದು ಜಯಪ್ರಕಾಶ್ ಹೆಗ್ಡೆ ತಿಳಿಸಿದರು.
ಇದುವರೆಗೂ ರಾಜ್ಯದ ಗೆಜೆಟ್‌ನಲ್ಲಿ ಅನಮ್ಮ ಪಮ್ಮಲ ಜನಾಂಗ ನಮೂದಾಗಿಲ್ಲ, ಇದು ಜಾತಿ ಪ್ರಮಾಣ ಪತ್ರ ವಿತರಣೆಗೆ ತೊಂದರೆಯಾಗಿದೆ. ಮೂರ್ನಾಲ್ಕು ವರ್ಷಗಳ ಹಿಂದೆ ಆಯೋಗದ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸಮಸ್ಯೆಗಳನ್ನು ಗಮನಕ್ಕೆ ತಂದಿದ್ದರೂ ಬಗೆಹರಿಯದ ಹಿನ್ನೆಲೆಯಲ್ಲಿ ಖುದ್ದು ಪರಿಶೀಲನೆ ನಡೆಸಿದ್ದು ಕಾನೂನಾತ್ಮಕವಾಗಿ ಬೇಡಿಕೆಗಳ ಈಡೇರಿಕೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ವಕೀಲರಾದ ಚೊಕ್ಕರೆಡ್ಡಿಹಳ್ಳಿ ನಾ.ಶಂಕರ್, ಶ್ರೀನಾಥ್ ಮತ್ತಿತರರು ಇದ್ದರು.