ಮೈಸೂರು: ಕೃಷ್ಣರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅಗ್ರಹಾರ, ಚಾಮುಂಡಿಪುರಂ, ಅಶೋಕಪುರಂ, ವಿದ್ಯಾರಣ್ಯಪುರಂ ಭಾಗದಲ್ಲಿ 5.70 ಕೋಟಿ ರೂ. ಮೊತ್ತದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎಸ್.ಎ. ರಾಮದಾಸ್ ಬುಧವಾರ ಚಾಲನೆ ನೀಡಿದರು.
ಕಂಸಾಳೆ ಮಹದೇವಯ್ಯ (ಸೆಂಟ್‌ಮೇರಿಸ್) ವೃತ್ತದಿಂದ ರಾಮಾನುಜ ರಸ್ತೆ 12ನೇ ಕ್ರಾಸ್‌ವರೆಗಿನ ರಸ್ತೆ ಡಾಂಬರಿಕಾರಣ, ವಿದ್ಯಾರಣ್ಯಪುರಂನ ಭೂತಾಳೆ ಮೈದಾನದ 2ನೇ ಮುಖ್ಯರಸ್ತೆಯಿಂದ ಚಾಮುಂಡಿಪುರಂ ವೃತ್ತದ ಮೂಲಕ ಸಾಗಿ ನಂಜುಮಳಿಗೆ ವೃತ್ತದಲ್ಲಿ ಅಂತ್ಯಗೊಳ್ಳುವ ರಸ್ತೆ ಡಾಂಬರೀಕರಣಕ್ಕೆ ಚಾಲನೆ ನೀಡಲಾಯಿತು.
ನಂಜುಮಳಿಗೆ ವೃತ್ತದಿಂದ ವಿದ್ಯಾರಣ್ಯಪುರಂ 4ನೇ ಮುಖ್ಯರಸ್ತೆ ಮಾರ್ಗವಾಗಿ ಸಾಗಿ 25ನೇ ಕ್ರಾಸ್‌ನಲ್ಲಿ ಅಂತ್ಯಗೊಳ್ಳುವ ರಸ್ತೆ, ಸಿಲ್ಕ್ ಫ್ಯಾಕ್ಟರಿ ವೃತ್ತದಿಂದ ಸಾರ್ವಜನಿಕ ಹಾಸ್ಟೆಲ್ ಮುಖ್ಯರಸ್ತೆ ಮಾರ್ಗವಾಗಿ ಸೂಯೇಜ್ ಫಾರ್ಮ್‌ಗೆ ತೆರಳುವ ಮುಖ್ಯ ರಸ್ತೆ, ವಿದ್ಯಾರಣ್ಯ ಪುರಂನ 4ನೇ ಮುಖ್ಯ ರಸ್ತೆಯ 16ನೇ ಅಡ್ಡರಸ್ತೆಯಿಂದ ಶಿವಗ್ಯಾಸ್ ಮಾರ್ಗವಾಗಿ ಇನ್‌ಸ್ಟಿಟ್ಯೂಟ್ ಆಫ್ ಎಜುಕೇಷನ್ ಶಾಲೆಯವರೆಗೆ ಹಾಗೂ 3ನೇ ಮೇನ್ ಎಸ್‌ಜೆಎಚ್ ಮುಖ್ಯರಸ್ತೆ ಡಾಂಬರಿಕಾರಣಕ್ಕೆ ಚಾಲನೆ ದೊರೆಯಿತು.
ಈ ಸಂದರ್ಭ ಮಾತನಾಡಿದ ಶಾಸಕ ಎಸ್.ಎ. ರಾಮದಾಸ್, ವಾರ್ಡ್ ನಂ.51ರ ಭಾಗದಲ್ಲಿ ಮಳೆ ಬಂದಂತಹ ಸಂದರ್ಭ ಸಾಕಷ್ಟು ಸಮಸ್ಯೆ ಎದುರಾಗುತಿತ್ತು. ಸಮಸ್ಯೆಯನ್ನು ಮನಗಂಡು ಆ ಭಾಗದಲ್ಲಿ ಮಳೆ ನೀರು ಚರಂಡಿಯನ್ನು ಹಾಗೂ ಯುಜಿಡಿ ಲೈನ್‌ಅನ್ನು ಪೂರ್ಣ ಪ್ರಮಾಣದಲ್ಲಿ ಮಾಡಿದ ನಂತರ ರಸ್ತೆ ಡಾಂಬರೀಕರಣಕ್ಕೆ ಚಾಲನೆಯನ್ನು ನೀಡುತ್ತಿದ್ದೇವೆ ಎಂದು ಹೇಳಿದರು.
ಕ್ಷೇತ್ರದಲ್ಲಿ ಇರುವಂತ 482 ಕಿ.ಮೀ. ರಸ್ತೆಗಳಿಗೆ ಎರಡು ತಿಂಗಳ ಒಳಗೆ ಪೂರ್ಣಪ್ರಮಾಣದಲ್ಲಿ ಡಾಂಬರೀಕರಣ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇನೆ. ಕ್ಷೇತ್ರದ ನಗರ ಪಾಲಿಕೆ ಸದಸ್ಯರು ಪಕ್ಷಬೇಧವಿಲ್ಲದೆ ನಗರದ ಅಭಿವೃದ್ಧಿ ಸಹಕಾರ ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಕ್ಷೇತ್ರದ ಎಲ್ಲ ರಸ್ತೆಗಳನ್ನು ಅಭಿವೃದ್ಧಿಗೊಳಿಸಲಾಗುವುದು ಎಂದು ಹೇಳಿದರು.
ಹೆಚ್ಚು ಅಪಘಾತಗಳು ಸಂಭವಿಸುತ್ತಿರುವ ಸ್ಥಳಗಳಲ್ಲಿ ಟ್ರಾಫಿಕ್ ಸಿಗ್ನಲ್ ಅಳವಡಿಕೆ, ವೈಟ್‌ಲೈನ್ ಬಳಿಯಲು ಕ್ರಮ ವಹಿಸಲಾಗುತ್ತಿದೆ. ಆ ಮೂಲಕ ಕ್ಷೇತ್ರದಲ್ಲಿ ಅಪಘಾತ ತಡೆಯುವ ನಿಟ್ಟಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೇವೆ ಎಂದರು.
ಈ ಸಂದರ್ಭ ನಗರಪಾಲಿಕೆ ಸದಸ್ಯರಾದ ಬಿ.ವಿ. ಮಂಜುನಾಥ್, ಮಾ.ವಿ. ರಾಮ್‌ಪ್ರಸಾದ್, ಶೋಭಾ ಸುನಿಲ್, ಪಿ.ಟಿ. ಕೃಷ್ಣ, ಸ್ಥಳೀಯ ಮುಖಂಡರಾದ ಬಾಲಕೃಷ್ಣ, ಪುರುಷೋತ್ತಮ್, ಶಿವಪ್ಪ, ಉಮಾಶಂಕರ್, ರಾಜ್‌ಕುಮಾರ್, ಶಿವರಾಜ್, ಮುರಳಿಧರ್, ಶಿವಪ್ರಸಾದ್, ಚಂದ್ರಶೇಖರ್, ನಾಗರಾಜ್, ಮೋಹನ್, ಸಂದೀಪ್, ಕೇಬಲ್ ಉಮೇಶ್, ಶಿವಲಿಂಗ ಸ್ವಾಮಿ, ಮಹದೇವಣ್ಣ ,ಹರಿಯಪ್ಪ, ರಾಮಣ್ಣ, ಶಿಂಧೆ, ಶ್ರೀಕಂಠ, ವಿನಯ್, ಉಮಾ, ಶಾಂತ, ಮುರುಳಿ, ಮಧುಸೂದನ್, ರವಿ, ರಾಜೀವ, ರಾಜಣ್ಣ ಹಾಗೂ ಇತರರು ಇದ್ದರು.