ಕೊಳ್ಳೇಗಾಲ: ಪಟ್ಟಣದ ನೂರ್ ಮೊಹಲ್ಲಾ ಬಡಾವಣೆ ಸಮೀಪದ ಕೃಷ್ಣಯ್ಯನಕಟ್ಟೆ ರಸ್ತೆ ಬದಿಯು ಕಸ, ಅಂಗಡಿ ಮುಂಗಟ್ಟುಗಳ ತ್ಯಾಜ್ಯ ಎಸೆಯುವ ತಾಣವಾಗಿ ಪರಿವರ್ತನೆಯಾಗಿದ್ದರೂ ನಗರಸಭೆ ಯಾವುದೇ ಕ್ರಮ ಕೈಗೊಳ್ಳದೆ ಕಣ್ಮುಚ್ಚಿ ಕುಳಿತಿದೆ.
ಉಪಯೋಗಿಸಿದ ಬಟ್ಟೆಗಳು, ದಿಂಬು, ಹಾಸಿಗೆ, ಸತ್ತ ನಾಯಿಯ ಕಳೇಬರ, ಪ್ಲಾಸ್ಟಿಕ್, ಅಂಗಡಿಗಳ ತ್ಯಾಜ್ಯ ಹೀಗೆ ಮನೆ ಕಸ ಎಲ್ಲವನ್ನೂ ಸುರಿಯಲಾಗುತ್ತಿದೆ. ವಾರಗಟ್ಟಲೆ ತ್ಯಾಜ್ಯ ಕೊಳೆತು ಗಬ್ಬುನಾರುತ್ತಿದೆ. ನಾಯಿ, ಹಂದಿಗಳು ತ್ಯಾಜ್ಯವನ್ನು ಎಳೆದಾಡಿ ರಸ್ತೆಗೆ ಬಿಡುತ್ತಿವೆ.
ಈ ರಸ್ತೆ ಶ್ರೀಕ್ಷೇತ್ರ ಕುರುಬನಕಟ್ಟೆಗೆ ತೆರಳುವ ಮುಖ್ಯ ರಸ್ತೆಯಾಗಿದೆ. ಈ ಮಾರ್ಗದಲ್ಲಿ ಹತ್ತಾರು ಗ್ರಾಮಗಳು ಸಿಗಲಿವೆ. ದಿನ ನಿತ್ಯ ಸಾವಿರಾರು ಜನರು ಸಂಚರಿಸುತ್ತಾರೆ. ರಸ್ತೆಯ ಬದಿಯಲ್ಲಿ ಸುರಿಯುವ ತ್ಯಾಜ್ಯದಿಂದ ವಾತಾವರಣ ಕಲುಷಿತವಾಗಿದೆ. ರಸ್ತೆಯಲ್ಲಿ ಸಂಚರಿಸುವರನ್ನು ವಾಸನೆ ಉಸಿರುಗಟ್ಟಿಸುತ್ತಿದೆ.
ಎಲ್ಲೆಂದರಲ್ಲಿ ಕಸವನ್ನು ಬಿಸಾಡುವವರಿಗೆ ಹಾಗೂ ಕಸಕ್ಕೆ ಬೆಂಕಿ ಹಚ್ಚುವವರಿಗೆ ದಂಡ ವಿಧಿಸುತ್ತೇವೆ ಎಂದು ನಗರಸಭೆ ಅಧಿಕಾರಿಗಳ ಪ್ರಕಟಣೆ ಎಚ್ಚರಿಸುತ್ತಿದೆಯೇ ವಿನಾ ಕಾರ್ಯರೂಪಕ್ಕೆ ತಂದಿಲ್ಲ. ಹೀಗಾಗಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಕಸವನ್ನು ಎಸೆಯುವುದು ಸಾಮಾನ್ಯವಾಗಿ ಬಿಟ್ಟಿದೆ. ನಗರಸಭೆ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.
ನಾಯಿಗಳ ಕಾಟ: ವಿವಿಧ ತ್ಯಾಜ್ಯಗಳನ್ನು ಸುರಿಯುವುದರಿಂದ ನಾಯಿ, ಹಂದಿಗಳ ಕಾಟ ಹೆಚ್ಚಾಗಿದೆ. ಬೈಕಿನಲ್ಲಿ ಹೋಗುವವರನ್ನು ಅಟ್ಟಿಸಿಕೊಂಡು ಹೋಗುತ್ತವೆ. ಜನಸಾಮಾನ್ಯರು ಭಯದಲ್ಲಿ ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಸಣ್ಣ ಮಕ್ಕಳು ಈ ರಸ್ತೆಯಲ್ಲಿ ಸಂಚರಿಸಲು ಸಾಧ್ಯವಾಗುತ್ತಿಲ್ಲ. ರಾತ್ರಿ ವೇಳೆಯಂತೂ ನಾಯಿಗಳ ಕಾಟ ದುಪ್ಪಟ್ಟಾಗಲಿದೆ.
ತ್ಯಾಜ್ಯ ಸುಡುವುದರಿಂದ ವಾತಾವರಣ ಮಲಿನ: ಗೃಹಬಳಕೆ ತ್ಯಾಜ್ಯ, ಅಂಗಡಿ ಮುಂಗಟ್ಟುಗಳ ತ್ಯಾಜ್ಯಗಳನ್ನು ಇಲ್ಲಿ ಬಿಸಾಡಲಾಗುತ್ತಿದ್ದು, ಅಲ್ಲದೆ ಕಸವನ್ನು ಗುಡ್ಡೆ ಹಾಕಿ ಬೆಂಕಿ ಹಚ್ಚಲಾಗುತ್ತಿದೆ. ತ್ಯಾಜ್ಯವನ್ನು ಸುಡುವುದರಿಂದ ವಾತಾವರಣ ಮಲಿನವಾಗುತ್ತಿದೆ. ಸುಟ್ಟ ಹೊಗೆಯಿಂದ ಅಕ್ಕಪಕ್ಕದ ನಿವಾಸಿಗಳಿಗೆ ತೊಂದರೆಯಾಗಿದೆ. ಅವರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ.