ಜಿಲ್ಲೆ

ಕೃಷ್ಣನಿಗೆ ಬೆಣ್ಣೆ ಅಲಂಕಾರ

ಕೊಪ್ಪಳ: ನಗರದ ಪ್ರಸಿದ್ಧ ಶ್ರೀ ವಿಠ್ಠಲ ಕೃಷ್ಣ ದೇವಸ್ಥಾನದಲ್ಲಿ ಕೃಷ್ಣ ಜನ್ಮಾಷ್ಠಮಿ ಅಂಗವಾಗಿ ಬುಧವಾರ ಶ್ರೀಕೃಷ್ಣನಿಗೆ ಮಾಡಿದ್ದ ಬೆಣ್ಣೆ ಅಲಂಕಾರ ಭಕ್ತರನ್ನು ಆಕರ್ಷಿಸಿತು.

ಪ್ರಶಾಂತ ಬಡವಾಣೆಯ ಶ್ರೀಮಧ್ಯೋಗೀಶ್ವರ ಯಾಜ್ಞವಲ್ಕೃ ಪ್ರತಿಷ್ಠಾನದಿಂದ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿದವು.

ಬೆಳಗ್ಗೆ ಶ್ರೀಕೃಷ್ಣ ಹಾಗೂ ಪ್ರಾಣ ದೇವರಿಗೆ ಸುಪ್ರಭಾತ, ಅಷ್ಟೋತ್ತರ, ಪಂಚಾಮೃತ ಅಭಿಷೇಕ, ನೈವೇದ್ಯ, ಅಲಂಕಾರ, ವಿಷ್ಣು ಸಹಸ್ರನಾಮ ಪಾರಾಯಣ ಹಾಗೂ ವಿಶೇಷ ಅಲಂಕಾರ ಮಾಡಲಾಯಿತು. ಸಂಜೆ ಚಿಕ್ಕ ಮಕ್ಕಳಿಂದ ವೇಷಭೂಷಣ ಪ್ರದರ್ಶನ ಜರುಗಿತು.

ಕೃಷ್ಣಾಷ್ಠಮಿ ಅಂಗವಾಗಿ ಸಾವಿರಾರು ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದರು. ಬೆಣ್ಣೆ ಅಲಂಕಾರದಲ್ಲಿ ಕೃಷ್ಣನನ್ನು ಕಂಡು ಸಂಭ್ರಮಿಸಿದರು. ಕೃಷ್ಣಾಷ್ಠಮಿ ಅಂಗವಾಗಿ ದೇವಸ್ಥಾನದ ಸುತ್ತಮುತ್ತ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಿದ್ದು ಕಂಡುಬಂತು.

ಇಂದು ಶ್ರಾವಣ ಕೃಷ್ಣ ನವಮಿ ಅಂಗವಾಗಿ ಶ್ರೀಕೃಷ್ಣ ಹಾಗೂ ಮುಖ್ಯ ಪ್ರಾಣ ದೇವರಿಗೆ ಪಂಚಾಮೃತ ಅಲಂಕಾರ, ಸುಪ್ರಭಾತ, ವಿಶೇಷ ಅಲಂಕಾರ, ತೊಟ್ಟಿಲು ಸೇವೆ, ತೀರ್ಥ, ಪ್ರಸಾದ, ಪಂಡಿತರಿಂದ ಪ್ರವಚನ, ಸೇವಾಕರ್ತರಿಗೆ ಮಂತ್ರಾಕ್ಷತೆ ಇರಲಿದೆ. ಸಂಜೆ ವಿಠ್ಠಲ ಕೃಷ್ಣ ದೇವರ ಗ್ರಾಮ ಪ್ರದಕ್ಷಿಣೆ, ಗೋಪಾಲಕಾವಲಿ ಜರುಗಲಿವೆ.