ಬೀದರ್: ಇಲ್ಲಿಯ ಮಾಧವನಗರದ ಜನಸೇವಾ ಶಿಶು ಮಂದಿರ ಹಾಗೂ ಪ್ರಾಥಮಿಕ ಶಾಲೆಯು ಕೃಷ್ಣ ಜನ್ಮಾಷ್ಟಮಿಯನ್ನು ವಿಶಿಷ್ಟವಾಗಿ ಆಚರಿಸಿತು.
ಕೃಷ್ಣ-ರಾಧೆ ವೇಷಧಾರಿಗಳ ಶೋಭಾಯಾತ್ರೆ, ಮೊಸರು ಗಡಿಗೆ ಒಡೆಯುವ, ಬೆಣ್ಣೆ ತಿನ್ನುವ ಸ್ಪರ್ಧೆ, ಕೃಷ್ಣನ ತೊಟ್ಟಿಲು, ಮಕ್ಕಳು, ಮಾತೆಯರ ಕೋಲಾಟ ಕೃಷ್ಣ ಜನ್ಮಾಷ್ಟಮಿಗೆ ಮೆರುಗು ತಂದುಕೊಟ್ಟವು.
ಶಾಲೆಯ ರಾಧಾ ಮತ್ತು ಕೃಷ್ಣ ವೇಷಧಾರಿ ಮಕ್ಕಳು ಭಗವಾನ ಕೃಷ್ಣ ಅವರಿಗೆ ಜಯಕಾರ ಹಾಕುತ್ತ ಶಾಲೆಯಿಂದ ಶೋಭಾಯಾತ್ರೆ ಆರಂಭಿಸಿ, ಮಾಧವನಗರ, ಪ್ರತಾಪನಗರದ ಪ್ರಮುಖ ಬೀದಿಗಳ ಮೂಲಕ ಹಾಯ್ದು ಪುನಃ ಶಾಲೆಗೆ ಮರಳಿ ಸಮಾರೋಪಗೊಳಿಸಿದರು.
ಶಾಲೆಯಲ್ಲಿ ಮಾತೆಯರು ಕೃಷ್ಣ ಪಾತ್ರಧಾರಿ ಮಗುವಿನ ತೊಟ್ಟಿಲು ಇಟ್ಟರು. ಕೃಷ್ಣ ವೇಷಧಾರಿ ಮಕ್ಕಳಿಂದ ಮೊಸರು ಗಡಿಗೆ ಒಡೆಯುವ, ಬೆಣ್ಣೆ ತಿನ್ನುವ ಸ್ಪರ್ಧೆ ನಡೆಯಿತು. ಭಗದ್ಗೀತೆ, ಶ್ಲೋಕ ಪಠಣಗಳೂ ಜರುಗಿದವು.
ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶಾಲೆಯ ಆಡಳಿತಾಧಿಕಾರಿ ಸೌಭಾವ್ಯವತಿ ಅವರು, ಕೃಷ್ಣ ಧರ್ಮದ ಪ್ರತೀಕ. ಅಧರ್ಮ ಹೆಚ್ಚಾದ ಕಡೆ ಕೃಷ್ಣ ಅವತರಿಸಿ ಧರ್ಮ ಮರು ಸ್ಥಾಪಿಸುತ್ತಾನೆ. ಕೃಷ್ಣನ ನೆನೆದರೆ ಎಲ್ಲ ಕಷ್ಟಗಳು ಪರಿಹಾರಗೊಳ್ಳುತ್ತವೆ ಎಂದು ಹೇಳಿದರು.
ಜನಸೇವಾ ಪ್ರತಿಷ್ಠಾನದ ಕಾರ್ಯದರ್ಶಿ ರೇವಣಸಿದ್ದಪ್ಪ ಜಲಾದೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರತಿಷ್ಠಾನದ ಅಧ್ಯಕ್ಷ ಬಸವರಾಜ ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಸದಸ್ಯೆ ಮಹಾದೇವಿ ಹುಮನಾಬಾದೆ, ಉಪನ್ಯಾಸಕಿ ಚೈತನ್ಯಾ ಧನರಾಜ ಉಪಸ್ಥಿತರಿದ್ದರು. ಜನಸೇವಾ ಶಿಶು ಮಂದಿರದ ಮುಖ್ಯಶಿಕ್ಷಕಿ ನೀಲಮ್ಮ ಚಾಮರೆಡ್ಡಿ ನಿರೂಪಿಸಿದರು. ಪ್ರೌಢಶಾಲೆ ಮುಖ್ಯಶಿಕ್ಷಕ ಶಿವಾನಂದ ಮಲ್ಲ ವಂದಿಸಿದರು. ವಿದ್ಯಾರ್ಥಿಗಳು, ನೂರಾರು ಪಾಲಕರು ಪಾಲ್ಗೊಂಡಿದ್ದರು.