ಶೃಂಗೇರಿ: ದೇಶದಲ್ಲಿ ಜನಸಂಖ್ಯೆಗೆ ಆಹಾರ ಒದಗಿಸಲು ಕೃಷಿಕರು ಬೆಳೆಗಳಿಗೆ ರಾಸಾಯನಿಕ ಗೊಬ್ಬರ, ಕೀಟನಾಶಕ ಬಳಸುವ ಅನಿವಾರ್ಯತೆ ಎದುರಾಗಿದೆ ಎಂದು ಕೊಪ್ಪ ಪ್ರಗತಿಪರ ಕೃಷಿಕ ಅರವಿಂದ ಸಿಗದಾಳು ತಿಳಿಸಿದರು.
ಭಾನುವಾರ ಹೊನಕೋಡು ಎಚ್.ಎನ್.ವಿಶ್ವೇಶ್ವರ್ ಅವರ ಮನೆಯಂಗಳದಲ್ಲಿ ಆದರ್ಶ ರೈತಮಿತ್ರಕೂಟ, ಜೆಸಿಐ ಮತ್ತು ಲಯನ್ಸ್ ಕ್ಲಬ್ ಆಯೋಜಿಸಿದ್ದ ಆದರ್ಶ ರೈತಮಿತ್ರಕೂಟ ವಾರ್ಷಿಕೋತ್ಸವದಲ್ಲಿ ಮಾತನಾಡಿದರು.
ಆಧುನಿಕ ಜೀವನಶೈಲಿ, ಕಡಿಮೆಯಾದ ದೈಹಿಕ ಶ್ರಮ, ಆಹಾರಪದ್ಧತಿ ಮನುಷ್ಯನ ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ. ಆಹಾರದಲ್ಲಿ ಕಲಬೆರೆಕೆ ಪ್ರಮಾಣ ಜಾಸ್ತಿಯಾಗಿದ್ದು ಇದು ನಗರ ಸಂಸ್ಕೃತಿ ಆಗಿದೆ. ಹಳ್ಳಿಯ ರೈತರು ಬೆಳೆದ ಬೆಳೆಗಳನ್ನು ಖರೀದಿಸುವ ಮಧ್ಯವರ್ತಿಗಳು ಕಲಬೆರೆಕೆ ಮಾಡಿ ಮಾರುಕಟ್ಟೆಗೆ ಮಾರುತ್ತಾರೆ. ಯುವಜನಾಂಗ ಕೃಷಿಯಿಂದ ವಿಮುಖವಾಗಿ ನಗರದತ್ತ ಉದ್ಯೋಗ ಅರಸಿ ಹೋಗುತ್ತಿದ್ದಾರೆ. ರೈತರು ಮಕ್ಕಳಿಗೆ ಕೃಷಿ ಕುರಿತು ಆಸಕ್ತಿ ಬೆಳೆಸಬೇಕು. ಪ್ರಪಂಚದಲ್ಲಿ ಕೃಷಿಗೆ ಪ್ರಾಧ್ಯಾನ ನೀಡದ ಪಾಕಿಸ್ತಾನ, ಶ್ರೀಲಂಕಾ, ನೇಪಾಳ ಇತರ ದೇಶಗಳು ಆರ್ಥಿಕವಾಗಿ ಹಿಂದುಳಿದಿವೆ. ಕೃಷಿ ಕ್ಷೇತ್ರದಲ್ಲಿ ಇಸ್ರೇಲ್ ಪ್ರಥಮ ಸ್ಥಾನದಲ್ಲಿದ್ದು ಜಗತ್ತಿಗೆ ಮಾದರಿಯಾಗಿದೆ ಎಂದು ಹೇಳಿದರು.
ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ಸರ್ಕಾರ ರೈತರಿಗೆ ಸವಲತ್ತು ನೀಡಿದ್ದರೂ ಕೃಷಿಕರ ಸ್ಥಿತಿ ಹಾಗೆಯೇ ಇದೆ. ಎಲೆಚುಕ್ಕಿ ರೋಗಕ್ಕೆ ಸರ್ಕಾರದಿಂದ ಕೀಟನಾಶಕ ಉಚಿತವಾಗಿ ನೀಡಲಾಗುತ್ತಿದೆ. ರೈತರ ಆರ್ಥಿಕ ಸಬಲತೆಗಾಗಿ ಪರ್ಯಾಯ ಬೆಳೆಗಳಿಗೆ ಸರ್ಕಾರ ನೆರವು ನೀಡುತ್ತಿದೆ ಎಂದರು.
ಗುತ್ತಿಗೆದಾರ ಋಷ್ಯಶೃಂಗ ಹೆಗಡೆ, ಶಾಸಕ ಟಿ.ಡಿ.ರಾಜೇಗೌಡ ಹಾಗೂ ಅರವಿಂದ ಸಿಗದಾಳು ಅವರನ್ನು ಸಮಾರಂಭದಲ್ಲಿ ಗೌರವಿಸಲಾಯಿತು. ಮೆಣಸೆ ಗ್ರಾಪಂ ಅಧ್ಯಕ್ಷೆ ಸಂಧ್ಯಾ ಮರಿಯಪ್ಪ, ಜೆಸಿಐ ಅಧ್ಯಕ್ಷ ಅಶೋಕ್, ಕಾರ್ಯದರ್ಶಿ ಶ್ರೀಕಾಂತ್, ಲಯನ್ಸ್ ಕ್ಲಬ್ ಅಧ್ಯಕ್ಷ ಧರ್ಮಪ್ಪ ಹೆಗಡೆ, ಕಾರ್ಯದರ್ಶಿ ಬೇಗಾನೆ ಮಂಜುನಾಥ್, ಆದರ್ಶ ರೈತ ಮಿತ್ರಕೂಟದ ಅಧ್ಯಕ್ಷ ಗೋಪಾಲಕೃಷ್ಣರಾವ್, ಕೃಷಿಕ ಹೆಬ್ಬಿಗೆ ಕೃಷ್ಣಮೂರ್ತಿ ಇದ್ದರು.