ಮೂರ್ತಿ ಟಿ.ಸಿ.ಎಸ್. ತಿಪಟೂರು
ತಾಲೂಕಿನಲ್ಲಿ ಪ್ರಸಕ್ತ ಪೂರ್ವ ಮುಂಗಾರಿನಲ್ಲಿ ಕೇವಲ ಶೇ.35 ದ್ವಿದಳ ಧಾನ್ಯ ಬಿತ್ತನೆಯಾಗಿದೆ. 2020&21ರಲ್ಲಿ ಬಿತ್ತನೆಯಾಗಿದ್ದ ಹೆಸರುಕಾಳಿನ ಪ್ರಮಾಣ 5304 ಹೆಕ್ಟೇರ್ಗೆ ಹೋಲಿಸಿದರೆ, ಈ ಸಾರಿ ಕೇವಲ 1855 ಹೆಕ್ಟೇರ್ನಲ್ಲಿ ಹೆಸರು ಕಾಳು ಬಿತ್ತನೆಯಾಗಿದ್ದು, ಅನ್ನದಾತ ಕ್ರಮೇಣ ಕೃಷಿ ೇತ್ರದಲ್ಲಿ ಆಸಕ್ತಿ ಕಳೆದುಕೊಳ್ಳುತ್ತಿರುವುದು ಸ್ಪಷ್ಟವಾದಂತಿದೆ. ಸತತ ಅತಿವೃಷ್ಟಿ ಮತ್ತು ಅನಾವೃಷ್ಟಿಯ ಜತೆಗೆ ವಿಮಾ ಕಂಪನಿಗಳ ಇನ್ನಿಲ್ಲದ ರಗಳೆಗಳೂ ಇದಕ್ಕೆ ಕಾರಣ ಎನ್ನಬಹುದಾಗಿದೆ.
2020&21ನೇ ಸಾಲಿನಲ್ಲಿ ತಾಲೂಕಿನಲ್ಲಿ 5304 ಹೆಕ್ಟೇರಿನಲ್ಲಿ ಹೆಸರು, 287 ಹೆಕ್ಟೇರಿನಲ್ಲಿ ತೊಗರಿ, 310 ಹೆಕ್ಟೇರಿನಲ್ಲಿ ಉದ್ದು ಹಾಗೂ 362 ಹೆಕ್ಟೇರಿನಲ್ಲಿ ಅಲಸಂದೆ ಬಿತ್ತನೆ ಮಾಡುವ ಮೂಲಕ ವಾಡಿಕೆ ಗುರಿ 5650 ಹೆಕ್ಟೇರ್ ಬದಲಿಗೆ ಒಟ್ಟು 6268 ಹೆಕ್ಟೇರ್ನಲ್ಲಿ ವಿವಿಧ ಬೆಳೆ ಬಿತ್ತನೆ ಮಾಡುವ ಮೂಲಕ ಬಿತ್ತನೆಯಲ್ಲಿ ಶೇ.110.94 ಗುರಿ ಸಾಧಿಸಲಾಗಿತ್ತು.
ಆದರೆ ಏಪ್ರಿಲ್ ಕಡೇ ವಾರದಿಂದ ಶುರುವಾಗಿರುವ ಭರಣಿ ಮಳೆಯ ಪೂರ್ವ ಮುಂಗಾರಿನಲ್ಲಿ ತಾಲೂಕಿನ ಬಿತ್ತನೆ ಪ್ರಮಾಣ ಪರಿಗಣಿಸಿದರೆ 1855 ಹೆಕ್ಟೇರಿನಲ್ಲಿ ಹೆಸರು, 210 ಹೆಕ್ಟೇರಿನಲ್ಲಿ ಅಲಸಂದೆ, 95 ಹೆಕ್ಟೇರಿನಲ್ಲಿ ಉದ್ದು, 05 ಹೆಕ್ಟೇರಿನಲ್ಲಿ ತೊಗರಿ ಹಾಗೂ 72 ಹೆಕ್ಟೇರಿನಲ್ಲಿ ಎಳ್ಳು, 15 ಹೆಕ್ಟೇರಿನಲ್ಲಿ ಅರಳು ಬಿತ್ತನೆಯಾಗಿದೆ. ಕಳೆದ ಸಾಲಿನ ಬಿತ್ತನೆಗೆ ಹೋಲಿಸಿದರೆ ಶೇ.65 ಬಿತ್ತನೆ ಕಡಿಮೆ ಆಗಿದೆ. ತಾಲೂಕಿನ ಕೃಷಿ ಇಲಾಖೆ ವತಿಯಿಂದ ಇಲ್ಲಿವರೆಗೂ ಕೇವಲ 58.4 ಕ್ವಿಂಟಾಲ್ ಹೆಸರು ಮತ್ತು 10 ಕ್ವಿಂಟಾಲ್ ಉದ್ದಿನ ಬಿತ್ತನೆ ಕಾಳುಗಳನ್ನು ಖರೀದಿಸಲಾಗಿದ್ದು, ಅಗತ್ಯ ದಾಸ್ತಾನಿದ್ದರೂ ಕೇಳುವವರಿಲ್ಲದಂತಾಗಿದೆ.
ಕಳೆದ 4&5 ವರ್ಷಗಳಿಂದ ಸತತವಾಗಿ ಬೆಳೆ ತೆಗೆಯುವ ಹಂತದಲ್ಲಿ ಕಾಡಿದ ಅತಿವೃಷ್ಟಿ, ಅನಾವೃಷ್ಟಿಯಿಂದ ಬಿತ್ತನೆಗೆ ಹೂಡಿದ ಬಂಡವಾಳವೂ ದಕ್ಕದ ಸ್ಥಿತಿ ಒಂದೆಡೆಯಾದರೆ ಇನ್ನೊಂದೆಡೆ, ಒಂದು ವರ್ಷ ಉತ್ತಮ ಫಸಲು ಬಂದು, ಉಳಿದ 4 ವರ್ಷಗಳಲ್ಲಿ ಉತ್ತಮ ಫಸಲು ಬಾರದಿದ್ದರೂ ಒಟ್ಟಾರೆ 6&7 ವರ್ಷಗಳ ಇಳುವರಿ ಸರಾಸರಿಯ ಅಂದಾಜಿನಲ್ಲಿ ವಿಮೆ ಪರಿಹಾರ ನಿರ್ಧರಿಸುವ ವಿಮಾ ಕಂಪನಿಗಳ ಇನ್ನಿಲ್ಲದ ರಗಳೆಯಿಂದ ಸತತವಾಗಿ ಬೆಳೆ ವಿಮೆ ಪರಿಹಾರದಿಂದ ವಂಚಿತನಾದ ರೈತ ಇದೀಗ ದ್ವಿದಳ ಧಾನ್ಯ ಬಿತ್ತುವುದೂ ಬೇಡ, ಕಡೆಗೆ ನಷ್ಟ ಅನುಭವಿಸುವುದೂ ಬೇಡ ಎಂಬ ರ್ನಿಣಯಕ್ಕೆ ಬಂದಿರುವುದೂ ಕೂಡ ಬಿತ್ತನೆ ಕುಂಠಿತವಾಗಲು ಕಾರಣ.
ಹೈಬ್ರಿಡ್ ಬೆಳೆಗಳ ರೀತಿ ಪರಾಗಸ್ಪರ್ಶ ಇಲ್ಲದೇ, ಕೇವಲ ಸ್ವ&ಪರಾಗ ಸ್ಪರ್ಶದಿಂದ ಉತ್ಪತ್ತಿಯಾಗುವ ಹೆಸರು, ಉದ್ದು, ತೊಗರಿ, ಅಲಸಂದೆ ಕಾಳುಗಳನ್ನು ಮೂರು ವರ್ಷಗಳವರೆಗೂ ಬಿತ್ತನೆಗೆ ಬಳಸಬಹುದಾಗಿದ್ದು, ಮೂರು ವರ್ಷಕ್ಕೊಮ್ಮೆ ಮಾತ್ರ ಬಿತ್ತನೆ ಬೀಜಗಳಿಗೆ ಸಹಾಯ ಧನ ಎಂಬ ನೀತಿಯನ್ನು ಕಳೆದ 4&5 ವರ್ಷಗಳಿಂದ ಸರ್ಕಾರ ಜಾರಿಗೆ ತಂದಿರುವ ಪರಿಣಾಮ ಕೃಷಿ ಇಲಾಖೆಯಲ್ಲಿ ಇತ್ತೀಚೆಗೆ ಬಿತ್ತನೆ ಬೀಜಕ್ಕೆ ಬೇಡಿಕೆ ಕಡಿಮೆಯಾಗಿದೆ.
ಸದ್ಯಕ್ಕೆ ಕೃಷಿ ಇಲಾಖೆಯಲ್ಲಿ ಅಗತ್ಯ ಬಿತ್ತನೆ ಬೀಜ ದಾಸ್ತಾನಿದ್ದು, ಪ್ರತಿ ಕಿ.ಲೋಗೆ 112 ರೂ. ಮುಖ ಬೆಲೆಯ ಹೆಸರು ಕಾಳು ಬೀಜವನ್ನು ಸಾಮಾನ್ಯ ವರ್ಗದ ರೈತರಿಗೆ ಕಿಲೋಗೆ 87 ರಂತೆ, ಹಾಗೂ ಕೆಟಗರಿ ವರ್ಗದ ರೈತರಿಗೆ ಕಿಲೋಗೆ 74.50 ರಂತೆ, 92 ರೂ. ಮುಖಬೆಲೆಯ ಅಲಸಂದೆಯನ್ನು ಕ್ರಮವಾಗಿ 72 ಹಾಗೂ 54,50, ಮತ್ತು 111 ಮುಖ ಬೆಲೆಯ ಉದ್ದನ್ನು ಕ್ರಮವಾಗಿ 86, 73.50 ರಂತೆ ನೀಡಲಾಗುತ್ತಿದೆ.
ಭರಣಿ ಮಳೆ ಸತತವಾಗಿ ಆಗುತ್ತಿರುವುದರಿಂದ ಬಿತ್ತನೆ ಕಡಿಮೆ ಆಗಿರಬಹುದು. ಅಶ್ವಿನಿ ಮಳೆವರೆಗೂ ಬಿತ್ತನೆಗೆ ಅವಕಾಶವಿದೆ. ಪೂರ್ವ ಮುಂಗಾರು ಬಿತ್ತನೆಗೆ ಇನ್ನೂ 10 ದಿನ ಕಾಲಾವಕಾಶವಿದೆ. > ಚನ್ನಕೇಶವ ಮೂರ್ತಿ ಸಹಾಯಕ ಕೃಷಿ ನಿರ್ದೇಶಕ ತಿಪಟೂರು