ಚಿಕ್ಕಮಗಳೂರು: ಲಾಭದಾಯಕವಲ್ಲ ಎಂದುಕೊಂಡು ಕೃಷಿಯಿಂದ ದೂರ ಉಳಿಯುತ್ತಿರುವ ಯುವಜನರನ್ನು ಕೃಷಿಯತ್ತ ಆಕರ್ಷಿತರಾಗುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸೂಕ್ತ ರೀತಿ ಉತ್ತೇಜನ, ಮಾರ್ಗದರ್ಶನ ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ ಹೇಳಿದರು. ಸಖರಾಯಪಟ್ಟಣದ ತಮ್ಮ ತೋಟದ ಜಮೀನಿನಲ್ಲಿ ಸೋಮವಾರ ಕೃಷಿ ಯಂತ್ರೋಪಕರಣಗಳ ಪ್ರಾತ್ಯಕ್ಷಿಕೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ತೋಟಗಾರಿಕೆ ಹಾಗೂ ಕೃಷಿ ಇಲಾಖೆ ಮೂಲಕ ಕೃಷಿ ಪಂಡಿತರನ್ನು ಕರೆದು ಗ್ರಾಮ ಮಟ್ಟದಲ್ಲಿ ವಿಶೇಷ ತರಗತಿಗಳನ್ನು ನಡೆಸಬೇಕು. ಪಶು ಸಂಗೋಪನೆಗೆ ಸಹಾಯಧನ ನೀಡಬೇಕು ಎಂದರು.
ಕೃಷಿಯಲ್ಲಿ ಬದುಕು ಕಟ್ಟಿಕೊಳ್ಳಲು ಅವಕಾಶ:
ಪದವಿ ಗಳಿಸಿದ ವಿದ್ಯಾವಂತ ಯುವಕರಿಗೆ ಕೈಗಾರಿಕೆಗಳಲ್ಲಿ ಮಾತ್ರವಲ್ಲದೆ ಕೃಷಿಯಲ್ಲೂ ಬದುಕು ಕಟ್ಟಿಕೊಳ್ಳಲು ಸಾಕಷ್ಟು ಅವಕಾಶವಿದೆ. ಹೊಸ ಪದ್ಧತಿಯಲ್ಲಿ ಕೃಷಿ ಮಾಡಿ ಹೆಚ್ಚು ಇಳುವರಿ ಪಡೆಯಲು ಸಾಧ್ಯವಿದೆ. ಸಹಾಯಧನದ ಆಧಾರದಲ್ಲಿ ದೊರೆಯುವ ಕುರಿ, ಕೋಳಿಗಳು ಮಾತ್ರವಲ್ಲದೆ ಬಿತ್ತನೆ ಬೀಜವನ್ನು ಕೂಡ ಮಾರಾಟ ಮಾಡಿಕೊಳ್ಳುವುದನ್ನು ಕೆಲವರು ರೂಢಿಸಿಕೊಂಡಿದ್ದಾರೆ. ಇದಕ್ಕೆ ಅಧಿಕಾರಿಗಳು ನಿಯಂತ್ರಣ ಹೇರಬೇಕು ಎಂದು ಹೇಳಿದರು. ಕೃಷಿ ಉತ್ಪನ್ನಗಳ ಬೆಲೆ ಹತ್ತು ವರ್ಷಗಳ ಹಿಂದಿನಷ್ಟೇ ಇದೆ. ಆದರೆ ಉತ್ಪಾದನಾ ವೆಚ್ಚ ಮಾತ್ರ ಹತ್ತು ಪಟ್ಟು ಹೆಚ್ಚಾಗಿದೆ. ಕೀಟನಾಶಕಗಳ ಬಳಕೆಯಿಂದ ಭೂಮಿ ಸತ್ವ ಕಳೆದುಕೊಂಡಿದೆ. ಕೂಲಿ ಕಾರ್ಮಿಕರ ಕೊರತೆ ಹೆಚ್ಚಾಗಿರುವ ಈ ಪರಿಸ್ಥಿತಿಯಲ್ಲಿ ಗುಣಮಟ್ಟದ ಕಂಪನಿಗಳ ಕೃಷಿ ಯಂತ್ರೋಪಕರಣಗಳಿಗೆ ಸಹಾಯಧನ ಒದಗಿಸಿ ಸೂಕ್ತ ಪ್ರೋತ್ಸಾಹ ನೀಡಬೇಕು ಎಂದು ಸಲಹೆ ನೀಡಿದರು. ಕನಿಷ್ಠ ತಾಲೂಕು ಮಟ್ಟದಲ್ಲಿ ಕೃಷಿ ಉತ್ಪನ್ನಗಳ ಶೀಥಲೀಕರಣ ಘಟಕ ಸ್ಥಾಪಿಸಬೇಕು. ಸರ್ಕಾರದ ಮಟ್ಟದಲ್ಲೇ ಇದನ್ನು ನಿರ್ವಹಿಸಬೇಕು. ಭತ್ತ, ಊಟದ ಜೋಳ, ರಾಗಿ, ಮೆಣಸಿನಕಾಯಿ ಬೆಳೆಯಲು ಸರ್ಕಾರ ಉತ್ತೇಜನ ನೀಡಬೇಕು. ಸೂಕ್ತ ಬೆಲೆ ಸಿಗದ ಕಾರಣಕ್ಕೆ ರೈತರು ದಿನಸಿ ಪದಾರ್ಥ, ಬೇಳೆಕಾಳು ಮತ್ತಿತರ ಬೆಳೆ ಬೆಳೆಯುವುದು ಶೇ.90ರಷ್ಟು ಕಡಿಮೆಯಾಗುತ್ತಿದೆ. ಈಗ ವಾಣಿಜ್ಯ ಬೆಳೆಗಳಿಗೆ ಮಾರು ಹೋಗುವುದು ರೂಢಿಯಾಗಿದೆ ಎಂದರು.
ರೈತ ಸ್ನೇಹಿ ಕೀಟನಾಶಕ ಯಂತ್ರ:
ನಾನು ಆವಿಷ್ಕರಿಸಿದ ಸೋಲಾರ್ ಕೀಟನಾಶಕ ಯಂತ್ರ ಹೆಚ್ಚು ಜನಪ್ರಿಯವಾಗುತ್ತಿದೆ. ಸಂಜೆ 6ರಿಂದ ರಾತ್ರಿ 10ರವರೆಗೆ ಎಲ್ಲ ರೀತಿಯ ಕೀಟಗಳನ್ನು ಆಕರ್ಷಿಸಿ ನಾಶಪಡಿಸುವ ಈ ಯಂತ್ರ ರಾತ್ರಿ 10 ಗಂಟೆ ಬಳಿಕ ಮಿತ್ರ ಕೀಟಗಳು ಬರುವ ವೇಳೆಗೆ ಸ್ವಯಂ ನಿಷ್ಕ್ರಿಯವಾಗುತ್ತದೆ ಎಂದು ಸೋಲಾರ್ ಕೀಟನಾಶಕ ಹಾಗೂ ಕಳೆನಾಶಕ ಯಂತ್ರದ ಸಂಶೋಧಕ ದಾವಣಗೆರೆಯ ರೈತ ಎಂ.ಬಿ.ಕರಿಬಸಪ್ಪ ಮಾಹಿತಿ ನೀಡಿದರು. ಅಡಕೆ ಬೆಳೆಯಲ್ಲಿ ಬೇರುಗಳ ರಸ ಹೀರುವ ಕೀಟಗಳಿಗೆ ಕೂಡ ಈ ಯಂತ್ರ ಕಡಿವಾಣ ಹಾಕುತ್ತದೆ. ಕೃಷಿ ಇಲಾಖೆಯಿಂದ ಕೃಷಿ ಪಂಡಿತ ಪ್ರಶಸ್ತಿ ಕೂಡ ಇದಕ್ಕೆ ಸಿಕ್ಕಿದೆ. ಕೃಷಿ ವಿಶ್ವವಿದ್ಯಾಲಯಗಳು ಈ ಯಂತ್ರಗಳನ್ನು ಖರೀದಿಸಿವೆ. ಈ ನಿಟ್ಟಿನಲ್ಲಿ ಆದಷ್ಟು ರಿಯಾಯಿತಿ ದರದಲ್ಲಿ ರೈತರಿಗೆ ಒದಗಿಸಲಾಗುತ್ತಿದ್ದು, ಇದರಿಂದ ಸಾಕಷ್ಟು ಹಣ, ಸಮಯ ಉಳಿತಾಯವಾಗುತ್ತದೆ ಎಂದರು. ಜಂಟಿ ಕೃಷಿ ನಿರ್ದೇಶಕ ಎಂ.ತಿರುಮಲೇಶ್, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ವೇದಮೂರ್ತಿ, ತರೀಕೆರೆಯ ಉಪ ಕೃಷಿ ನಿರ್ದೇಶಕ ಲೋಕೇಶ್ ಕಾರ್ಯಕ್ರಮದಲ್ಲಿದ್ದರು.