ರೈತರ ಜಮೀನುಗಳಲ್ಲೇ ತಯಾರಿಸಿ ಉಚಿತ ವಿತರಣೆ | ನಗರಸಭೆ ಕಸ ವಿಲೇವಾರಿ ತಲೆನೋವು ಸ್ವಲ್ಪ ಕಡಿಮೆ
ಚಿಕ್ಕಬಳ್ಳಾಪುರ : ನಗರದಲ್ಲಿ ಸಂಗ್ರಹವಾದ ತ್ಯಾಜ್ಯವನ್ನು ಆಯಾ ಕೃಷಿ ಜಮೀನುಗಳಲ್ಲಿ ವೈಜ್ಞಾನಿಕವಾಗಿ ಸಂಸ್ಕರಿಸುವ ಮತ್ತು ಸಾವಯವ ಗೊಬ್ಬರ ತಯಾರಿಸಿ ರೈತರಿಗೆ ಉಚಿತವಾಗಿ ಪೂರೈಸುವ ವಿನೂತನ ಯೋಜನೆ ಜಿಲ್ಲಾ ಕೇಂದ್ರದಲ್ಲಿ ಯಶಸ್ವಿಯಾಗಿ ನಡೆಯುತ್ತಿದೆ.
ನಗರಸಭೆಯು ಭಾರತೀಯ ಮಾನವ ವಸಾಹತುಗಳ ಸಂಸ್ಥೆ (ಐಐಎಚ್‌ಎಸ್) ಮತ್ತು ಗೊದ್ರೇಜ್ ಪ್ರಾರ್ಪಟಿಸ್ ಸಂಸ್ಥೆ ಸಹಭಾಗಿತ್ವದಲ್ಲಿ ಕೈಗೊಂಡಿರುವ ನೈರ್ಮಲ್ಯ ರಕ್ಷಣೆ ಮತ್ತು ಕೃಷಿ ಲಾಭದಾಯಕ ವ್ಯವಸ್ಥಿತ ವಿಧಾನದಿಂದ ನಗರದ ತ್ಯಾಜ್ಯ ಸಂಗ್ರಹ, ವಿಲೇವಾರಿ ಕಿರಿಕಿರಿಯ ತಲೆನೋವು ಕಡಿಮೆಯಾಗಿದೆ. ಮತ್ತೊಂದೆಡೆ ರೈತರಿಗೆ ಉಚಿತವಾಗಿ ಸಾವಯವ ಗೊಬ್ಬರವೂ ಸಿಗುತ್ತಿದೆ.
72 ಸಾವಿರ ಜನಸಂಖ್ಯೆ ಹೊಂದಿರುವ ನಗರದಲ್ಲಿ 31 ವಾರ್ಡ್‌ಗಳಿದ್ದು ಪ್ರತಿನಿತ್ಯ 26ರಿಂದ 28 ಟನ್ ಘನತ್ಯಾಜ್ಯ ಸಂಗ್ರಹವಾಗುತ್ತಿದೆ. ಇದರ ನಡುವೆ ಪ್ರತ್ಯೇಕವಾಗಿ ಹಸಿಕಸ ಸಂಗ್ರಹಿಸಿ, ನೇರವಾಗಿ ಕೃಷಿ ಜಮೀನುಗಳಲ್ಲಿ ಸಾವಯವ ಗೊಬ್ಬರ ತಯಾರಿಸಿ ರೈತರಿಗೆ ಉಚಿತವಾಗಿ ನೀಡುವ ಪ್ರಕ್ರಿಯೆ ನಡೆಯುತ್ತಿದೆ. ಈಗಾಗಲೇ ಜಿಲ್ಲಾ ಕೇಂದ್ರಕ್ಕೆ ಸಮೀಪದಲ್ಲಿರುವ ಅಣಕನೂರು, ಅಗಲಗುರ್ಕಿ ಸೇರಿ ವಿವಿಧ ಗ್ರಾಮಗಳಲ್ಲಿ ಯೋಜನೆ ಅನುಷ್ಠಾನಗೊಂಡಿದ್ದು, 225 ರೈತರ ಜಮೀನಿನಲ್ಲಿ ಹಸಿ ಕಸವನ್ನು ಗೊಬ್ಬರವನ್ನಾಗಿಸುವ ಕೆಲಸವಾಗುತ್ತಿದೆ. ಇದಕ್ಕೆ ಪ್ರಸ್ತುತ ನಿತ್ಯ 6ರಿಂದ 7 ಟನ್ ತ್ಯಾಜ್ಯ ಬಳಕೆಯಾಗುತ್ತಿದೆ. ಮುಂಬರುವ ದಿನಗಳಲ್ಲಿ ಯೋಜನೆಯನ್ನು ವಿವಿಧ ಗ್ರಾಮಗಳಿಗೆ ವಿಸ್ತರಿಸುವ ಗುರಿ ಹೊಂದಲಾಗಿದೆ.
ಈಗಾಗಲೇ 2 ಸಾವಿರ್ ಟನ್ ಬಳಕೆ
ನಗರಸಭೆಯು ಭಾರತೀಯ ಮಾನವ ವಸಾಹತುಗಳ ಸಂಸ್ಥೆ (ಐಐಎಚ್‌ಎಸ್) ಮತ್ತು ಗೊದ್ರೇಜ್ ಪ್ರಾರ್ಪಟಿಸ್ ಸಂಸ್ಥೆಯೊಂದಿಗೆ 3 ವರ್ಷದ ಅವಧಿಗೆ ಒಪ್ಪಂದ ಮಾಡಿಕೊಂಡಿದೆ. ಜಿಲ್ಲಾ ಕೇಂದ್ರದಿಂದ 8 ಕಿ.ಮೀ. ಒಳಗೆ ಇರುವ ಗ್ರಾಮಗಳಲ್ಲಿನ ಆಯ್ದ ರೈತರ ಜಮೀನುಗಳಿಗೆ ನಿಗದಿತ ಪ್ರಮಾಣದಲ್ಲಿ ಹಸಿ ಕಸವನ್ನು ಪೂರೈಸಲಾಗುತ್ತದೆ. ಅಲ್ಲಿ ಐಐಎಚ್‌ಎಸ್ ಸಂಸ್ಥೆಯು ನಿರ್ಮಿಸಿರುವ 20 ಚದರ ಮೀಟರ್ ಅಳತೆಯ ತೊಟ್ಟಿಯಲ್ಲಿ ತ್ಯಾಜ್ಯವನ್ನು ಸಂಸ್ಕರಿಸಲಾಗುತ್ತದೆ. ಇದಕ್ಕೆ ಜಾನುವಾರುಗಳ ಸಗಣಿ, ಗಂಜಲವನ್ನು ಇಲ್ಲವೇ ಸಂಸ್ಥೆ ವಿತರಿಸುವ ಬಯೋ ಕಲ್ಚರ್ ಸೇರಿಸಿ ಒಂದು ತಿಂಗಳು ಕೊಳೆಯುವಂತೆ ಮಾಡಲಾಗುತ್ತದೆ. ಗೊಬ್ಬರವಾಗಿ ಪರಿವರ್ತನೆಯಾದ ಬಳಿಕ ಆ ಜಾಗದ ರೈತರು ಕೃಷಿ ಜಮೀನಿನಲ್ಲಿ ಬೆಳೆದಿರುವ ಬೆಳೆಗೆ ಬಳಸಿಕೊಳ್ಳುತ್ತಾರೆ. ಈಗಾಗಲೇ 2 ಸಾವಿರ ಟನ್ ಹಸಿ ಕಸವನ್ನು ಗೊಬ್ಬರವಾಗಿ ಪರಿವರ್ತಿಸಲಾಗಿದೆ.
ಜಾಗೃತಿ ಕಾರ್ಯಕ್ರಮ
ಬೇರ್ಪಡಿಸಿದ ಹಸಿ ತ್ಯಾಜ್ಯವು ರೈತರಿಗೆ ಲಭ್ಯವಾಗುವುದರ ಖಚಿತತೆ ಮತ್ತು ನಗರದಲ್ಲಿ ಮೂಲದಲ್ಲಿಯೇ ಹಸಿ ಮತ್ತು ಒಣ ಕಸವನ್ನು ವಿಂಗಡಣೆ, ನೈರ್ಮಲ್ಯ ಕಾಪಾಡುವಿಕೆ ಬಗ್ಗೆ ಈಗಾಗಲೇ ನಗರದಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ.
ಯೋಜನೆಯ ಅನುಕೂಲ ಈ ಯೋಜನೆಯಡಿ ರೈತರ ಜಮೀನುಗಳಿಗೆ ಹಸಿ ಕಸ ಸಾಗಿಸುವುದರಿಂದ ನಗರಸಭೆಗೆ ಸೇರಿದ ಪುಟ್ಟತಿಮ್ಮನಹಳ್ಳಿಯ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ತ್ಯಾಜ್ಯ ಸಂಗ್ರಹ ಪ್ರಮಾಣ ಕಡಿಮೆಯಾಗಿದೆ. ಹಸಿಕಸ ವಿಲೇವಾರಿ ಹೊರೆ ನಿವಾರಣೆ, ನಗರದಲ್ಲಿ ಮೊದಲಿಗಿಂತಲೂ ವೈಜ್ಞಾನಿಕವಾಗಿ ಕಸ ಸಂಗ್ರಹಣೆ ಹೆಚ್ಚಳ, ರೈತರಿಗೆ ಉಚಿತವಾಗಿ ಸಾವಯವ ಗೊಬ್ಬರ ಪೂರೈಕೆ ಸೇರಿ ವಿವಿಧ ಅನುಕೂಲಗಳಾಗಿದ್ದು ನಗರಸಭೆ ಸಿಬ್ಬಂದಿಗೆ ಒತ್ತಡ ಕಡಿಮೆಯಾಗಿದೆ.
ನಗರಸಭೆ ಮತ್ತು ರೈತರ ಸಹಭಾಗಿತ್ವದಲ್ಲಿ ನತ್ಯಾಜ್ಯ ನಿರ್ವಹಣೆ ಎಂಬ ವಿನೂತನ ಯೋಜನೆಯಡಿ ಚಿಕ್ಕಬಳ್ಳಾಪುರದಲ್ಲಿ ಉತ್ಪತ್ತಿಯಾಗುವ ಹಸಿ ಕಸವನ್ನು, ರೈತರ ಜಮೀನಿನಲ್ಲಿಯೇ ಸಾವಯವ ಗೊಬ್ಬರವನ್ನಾಗಿ ಪರಿವರ್ತಿಸಿ ವಿತರಿಸುವ ಕೆಲಸವಾಗುತ್ತಿದೆ. ಈಗಾಗಲೇ ರೈತರು ಕಳೆದ 8 ತಿಂಗಳಿನಲ್ಲಿ 2000 ಟನ್ ಹಸಿ ಕಸವನ್ನು ಗೊಬ್ಬರವಾಗಿ ಪರಿವರ್ತಿಸಿ, ಬಳಸಿಕೊಂಡಿದ್ದಾರೆ. - ಡಿ.ಎ.ಕಿರಣ್, ಯೋಜನಾ ವ್ಯವಸ್ಥಾಪಕ, ಐಐಎಚ್‌ಎಸ್