ಜಿಲ್ಲೆ

ಕೃಷಿಗೆ ಅನುಗುಣವಾಗಿ ನೀರು ಪೂರೈಸಿ : ಶಾಸಕ ಎಂ.ಆರ್. ಮಂಜುನಾಥ್ ಸೂಚನೆಉಡುತೊರೆ ಜಲಾಶಯಕ್ಕೆ ಭೇಟಿ

ಚಾಮರಾಜನಗರ: ನಾಲೆಗಳಿಗೆ ನೀರು ಬಿಡುವುದರ ಮೂಲಕ ಕೃಷಿಗೆ ಅನುಕೂಲವಾಗುವಂತೆ ನೀರಾವರಿ ಸೌಕರ್ಯ ಒದಗಿಸಬೇಕು ಎಂದು ಶಾಸಕ ಎಂ.ಆರ್ ಮಂಜುನಾಥ್ ಕಾವೇರಿ ನೀರಾವರಿ ನಿಗಮದ ಇಂಜಿನಿಯರ್‌ಗೆ ಸೂಚಿಸಿದರು.

ಹನೂರು ತಾಲೂಕಿನ ಅಜ್ಜೀಪುರ ಸಮೀಪದ ಉಡುತೊರೆ ಜಲಾಶಯಕ್ಕೆ ಭಾನುವಾರ ಭೇಟಿ ನೀಡಿ ಜಲಾನಯನದ ಪ್ರದೇಶವನ್ನು ವೀಕ್ಷಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.


ಈ ಸಂದರ್ಭ ಸ್ಥಳೀಯ ರೈತರು ಶಾಸಕರ ಬಳಿ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು. ಈ ಭಾಗದಲ್ಲಿನ ಹೆಚ್ಚಿನ ರೈತರು ಉಡುತೊರೆ ಜಲಾಶಯದ ನೀರನ್ನು ನಂಬಿ ಕೃಷಿ ಮಾಡುತ್ತಿದ್ದಾರೆ. ಆದರೆ, ನಾಲೆಗಳ ಮೂಲಕ ಸಮರ್ಪಕವಾಗಿ ನೀರಾವರಿ ಸೌಕರ್ಯ ದೊರೆಯುತ್ತಿಲ್ಲ. ಈ ಹಿಂದೆ ಅರಣ್ಯ ಪ್ರದೇಶದಲ್ಲಿ ಜಾನುವಾರುಗಳನ್ನು ಮೇಯಲು ಬಿಡಲಾಗುತ್ತಿತ್ತು. ಆದರೀಗ ಅರಣ್ಯ ಇಲಾಖೆ ಅಡ್ಡಿ ಪಡಿಸುತ್ತಿದೆ. ಪರಿಣಾಮ ಮೇವಿಗಾಗಿ ಸಮಸ್ಯೆ ಎದುರಿಸುತ್ತಿದ್ದೇವೆ. ಅಂಬಿಕಾಪುರ ಭಾಗದಲ್ಲಿ ಚಿರತೆಯೊಂದು ಆಗಾಗ ಕಾಣಿಸಿಕೊಳ್ಳುತ್ತಿದ್ದು, ಜನರು ಜೀವಭಯದಲ್ಲಿದ್ದಾರೆ ಎಂದು ತಿಳಿಸಿದರು.


ಇದಕ್ಕೆ ಸ್ಪಂದಿಸಿದ ಶಾಸಕ ಮಂಜುನಾಥ್, ರೈತರ ಸಭೆ ನಡೆಸಿ ನೀರು ಬಳಕೆಯ ಸಲಹಾ ಸಮಿತಿ ರಚಿಸಬೇಕು. ನಾಲೆಗಳಲ್ಲಿ ತುಂಬಿರುವ ಹೂಳು-ಗಿಡಗಂಟಿಗಳನ್ನು ತೆರವುಗೊಳಿಸಿ ಕೃಷಿಗೆ ಅನುಗುಣವಾಗಿ ನೀರು ಒದಗಿಸುವಂತೆ ಕಾವೇರಿ ನಿಗಮದ ಇಂಜಿನಿಯರ್ ಬಸವೇಶ್ ಅವರಿಗೆ ಸೂಚಿಸಿದರು. ದೂರವಾಣಿ ಮೂಲಕ ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ, ಜಾನುವಾರುಗಳ ಮೇವಿಗೆ ಅರಣ್ಯ ಪ್ರದೇಶದ ಬಳಿ ಅವಕಾಶ ನೀಡುವಂತೆ ಹಾಗೂ ಚಿರತೆ ಸೆರೆಗೆ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿದರು. ಜಿಪಂ ಮಾಜಿ ಉಪಾಧ್ಯಕ್ಷ ಶಿವಮೂರ್ತಿ, ಮುಖಂಡರಾದ ಮಂಜೇಶ್, ಬಸವರಾಜು ಇತರರು ಇದ್ದರು.