ಜಿಲ್ಲೆ

ಕೃಷಿಕರ ಬದುಕಿಗೆ ಸಹಕಾರ ಸಂಘಗಳೇ ಆಧಾರ, ಸಂಸದ ಡಿ.ಕೆ. ಸುರೇಶ್ ಅಭಿಪ್ರಾಯ, ವ್ಯವಸಾಯೋತ್ಪನ್ನ ಮಾರುಕಟ್ಟೆ ಮಳಿಗೆಗಳ ಉದ್ಘಾಟನೆ

ಆನೇಕಲ್: ವ್ಯವಸಾಯ ಸೇವಾ ಸಹಕಾರ ಸಂಘಗಳಿಂದ ನಾಗರಿಕರಿಗೆ ಅನೇಕ ಅನುಕೂಲ ಒದಗಿಸಲಾಗುತ್ತಿದೆ. ಇದನ್ನು ಎಲ್ಲರೂ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಂಸದ ಡಿ.ಕೆ. ಸುರೇಶ್ ಹೇಳಿದರು.

ಪಟ್ಟಣದ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ಸೋಮವಾರ ಆಯೋಜಿಸಿದ್ದ ವಾಣಿಜ್ಯ ಮಳಿಗೆಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು. ರೈತರ ಬದುಕನ್ನು ಹಸನಾಗಿಸಲು ವ್ಯವಸಾಯೋತ್ಪನ್ನ ಸಹಕಾರ ಸಂಘದಿಂದ ಕಾನೂನು ರೂಪಿಸಬೇಕು. ಸರ್ಕಾರದಲ್ಲಾಗಲಿ, ಸಾರ್ವಜನಿಕ ಕ್ಷೇತ್ರದಲ್ಲಾಗಲಿ ಕಾರ್ಯಕ್ರಮ ರೂಪಿಸಲು ನಿಮ್ಮದೇ ಆದ ಅಧಿಕಾರ ಇದೆ. ಇದನ್ನು ಸಮರ್ಪಕವಾಗಿ ಬಳಸಿಕೊಳ್ಳಿ ಎಂದರು.

ವ್ಯವಸಾಯ ಹಾಗೂ ಸಾರ್ವಜನಿಕ ಕ್ಷೇತ್ರಕ್ಕೆ ಬೇಕಾದ ಮಳಿಗೆಗಳು ಹಾಗೂ ಪರಿಕರಗಳು, ಗೊಬ್ಬರ ಸೇರಿ ಯೋಜನೆಗಳನ್ನು ಸಮರ್ಪಕವಾಗಿ ರೂಪಿಸಬೇಕು. ಬಮುಲ್, ವಿಎಸ್‌ಎಸ್‌ಎನ್ ಎಂದರೆ ಅಧಿಕಾರಕ್ಕೋಸ್ಕರ ಬಳಸಿಕೊಳ್ಳುವ ಸಂಸ್ಥೆಗಳಾಗುತ್ತಿವೆ. ಇದು ಬದಲಾಗಬೇಕು ಎಂದು ಹೇಳಿದರು.

ಶಾಸಕ ಬಿ. ಶಿವಣ್ಣ ಮಾತನಾಡಿ, ಸರ್ಕಾರದಿಂದ ಹೆಚ್ಚಿನ ಅನುದಾನ ತಂದು ಇನ್ನಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಬೇಕು. ನಾವು ನಿಮ್ಮ ಜತೆ ಕೈಜೋಡಿಸುತ್ತೇವೆ. ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ಶಾಸಕರ ನಿಧಿಯಿಂದ ಅನುದಾನ ಬಿಡುಗಡೆ ಮಾಡಿ ಸಹಕರಿಸಲಾಗುವುದು ಎಂದು ಭರವಸೆ ನೀಡಿದರು.

ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷ ನೊಸೇನೂರು ಮಂಜುನಾಥ್ ಮಾತನಾಡಿ, ಟಿಎಪಿಸಿಎಂಎಸ್ ಕಚೇರಿಯಲ್ಲಿ ಸಭೆ ನಡೆಸಲು ಜಾಗ ಇರಲಿಲ್ಲ. ನಾವು ಸುಸಜ್ಜಿತವಾದ ಸಭಾಂಗಣ ಅದಕ್ಕೆ ಬೇಕಾದ ಆಸನಗಳು, ಸಂಘದ ಅಭಿವೃದ್ಧಿಗಾಗಿ ಅಂಗಡಿ ಮಳಿಗೆಗಳನ್ನು ನಿರ್ಮಿಸಿದ್ದೇವೆ. ಇನ್ನಷ್ಟು ಹೊಸ ಯೋಜನೆಗಳನ್ನು ಜಾರಿಗೊಳಿಸಲಿದ್ದೇವೆ ಎಂದು ಹೇಳಿದರು.

ಬಮುಲ್ ಮಾಜಿ ಅಧ್ಯಕ್ಷರಾದ ಆರ್.ರಮೇಶ್, ಬಿ.ಜಿ. ಆಂಜಿನಪ್ಪ, ಕಾಂಗ್ರೆಸ್ ಮುಖಂಡರಾದ ಎನ್‌ಬಿಐ ನಾಗರಾಜು, ಕೆ.ಎಸ್. ನಟರಾಜ್, ವಿ.ಎಸ್.ಆರ್ ಬಾಬು, ನಿರ್ದೇಶಕರಾದ ದಿನ್ನೂರು ರಾಜು, ಎಂ. ಕೃಷ್ಣಪ್ಪ, ಎ. ವೆಂಕಟಸ್ವಾಮಿ, ಜಿಗಳ ರವಿಕುಮಾರ್, ರೂಪಾ, ರೂಪಾ ರೆಡ್ಡಿ, ಎ. ಅಶೋಕ್, ಮುನಿರಾಜು, ಸೋಮಶೇಖರ ರೆಡ್ಡಿ ಮತ್ತಿತರರು ಇದ್ದರು.