ಜಿಲ್ಲೆ

ಕೃಷಿಕರ ಪ್ರಗತಿಗೆ ಬೇಕು ಬಲಾಢ್ಯ ಸಹಕಾರಿ ಕ್ಷೇತ್ರ

ಚಿತ್ರದುರ್ಗ: ಸಹಕಾರಿ ಕ್ಷೇತ್ರದ ವ್ಯಾಪಕ ಸುಧಾರಣೆ, ರೈತರ ಆರ್ಥಿಕ ಬಲವರ್ಧನೆಗೆ ನೆರವಾಗಲಿದೆ ಎಂದು ಸಂಸದ ಗೋವಿಂದ ಎಂ.ಕಾರಜೋಳ ಹೇಳಿದರು.
ಚಿತ್ರದುರ್ಗ ತಾಲೂಕು ವ್ಯವಸಾಯೋತ್ಪನ್ನಗಳ ಮಾರಾಟ ಸಹಕಾರ ಸಂಘ ಬುಧವಾರ ಆಯೋಜಿಸಿದ್ದ ಸಂಘದ ಅಮೃತ ಮಹೋತ್ಸವ ನೆನಪಿಗಾಗಿ ನಗರದ ಎಪಿಎಂಸಿ ಆವರಣದಲ್ಲಿ ನಿರ್ಮಿಸಿರುವ ಆಡಳಿತ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಪ್ರತ್ಯೇಕ ಸಚಿವಾಲಯದೊಂದಿಗೆ, ಸಹಕಾರಿ ಕ್ಷೇತ್ರದ ಅಭಿವೃದ್ಧಿಗೆ ಕೇಂದ್ರ ಹಲವು ಕ್ರಮಗಳನ್ನು ಕೈಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ, ಸಹಕಾರಿ ಸಚಿವ ಅಮಿತ್ ಶಾ ಈ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಆಸಕ್ತಿ ವಹಿಸಿದ್ದಾರೆ. ಒಂದು ಕಾಲದಲ್ಲಿ ಸೊಸೈಟಿಗಳಿಂದ 500 ರೂ. ಸಾಲ ಸಿಗುವುದು ದುಸ್ತರವಾಗಿತ್ತು. ಆದರೆ, ಇಂದು ಬ್ಯಾಂಕ್‌ಗಳಿಗೆ ಸರಿಸಮನಾಗಿ ಸಹಕಾರಿ ಸಂಘಗಳು ಕೋಟ್ಯಂತರ ರೂ. ವಹಿವಾಟು ನಡೆಸುತ್ತಿವೆ ಎಂದರು.
ಮಾಜಿ ಪ್ರಧಾನಿ ದಿ. ಇಂದಿರಾಗಾಂಧಿ ಬ್ಯಾಂಕ್‌ಗಳ ರಾಷ್ಟ್ರೀಕರಣಗೊಳಿಸಿದ್ದರಿಂದ ಜನರಿಗೆ ಅನುಕೂಲವಾಗಿದೆ. ಬಿ.ಎಸ್.ಯಡಿಯೂರಪ್ಪ ಸಿಎಂ ಆಗಿದ್ದಾಗ ಶೇ.0 ಬಡ್ಡಿದರದಲ್ಲಿ ಕೃಷಿ ಸಾಲದಿಂದಾಗಿ ರೈತರ ಮೇಲೆ ಮೀಟರ್ ಬಡ್ಡಿ ಸಾಲದ ಹೊರೆ ತಪ್ಪಿದೆ. ರಾಜ್ಯದ ಎಲ್ಲ ಟಿ ಎಪಿಸಿಎಂಎಸ್‌ಗಳೂ ಈಗಾಗಲೇ ನಡೆಸುತ್ತಿರುವ ವ್ಯವಹಾರಗಳೊಂದಿಗೆ, ಪಡಿತರ ವಿತರಣೆಗೂ ಮುಂದಾಗಬೇಕು. ಸಂಘದ ಸದಸ್ಯರ ಸಂಖ್ಯೆ, ಠೇವಣಿ, ವಹಿವಾಟು ವೃದ್ಧಿಯಾದರೆ ರೈತರು, ಬಡವರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಎಂಎಲ್‌ಸಿ ಕೆ.ಎಸ್.ನವೀನ್ ಮಾತನಾಡಿ, ಈ ಸಂಘ ಶತಮಾನೋತ್ಸವ ಆಚರಿಸುವಂತಾಗಲಿ. ರೈತರಿಗೆ ಇನ್ನೂ ಹೆಚ್ಚಿನ ನೆರವು ಸಿಗಲಿ ಎಂದರು.
ಸಹಕಾರ ಸಂಘಗಳ ಅಪರ ನಿಬಂಧಕ ಜಿ.ಎಂ.ರವೀಂದ್ರ ಮಾತನಾಡಿ, ವಿವಿಧ ಇಲಾಖೆಗಳು ರೈತರಿಗೆ ಒದಗಿಸುತ್ತಿರುವ ಸವಲತ್ತುಗಳನ್ನು ಸಿಂಗಲ್ ವಿಂಡೋ ಸಹಕಾರ ಸಂಘಗಳಿಂದ ಒದಗಿಸಿದರೆ ರೈತರು, ವಿನಾಕಾರಣ ಕಚೇರಿಗಳಿಗೆ ಅಲೆದಾಡುವುದು ತಪ್ಪುತ್ತದೆ. ಈ ನಿಟ್ಟಿನಲ್ಲಿ ಸಹಕಾರಿಗಳು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು, ವಹಿವಾಟು ವಿಸ್ತರಣೆಗೆ ನಿಗಾ ವಹಿಸಬೇಕೆಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಚಿತ್ರದುರ್ಗ ಟಿಎಪಿಸಿಎಂಎಸ್ ಅಧ್ಯಕ್ಷ ಎಚ್.ಎಂ.ಮಂಜುನಾಥಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು.
ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ ಉಪಾಧ್ಯಕ್ಷ ಶಿವಕುಮಾರ ಗೌಡ ಪಾಟೀಲ, ನಿರ್ದೇಶಕ ಕೆ.ಎಸ್.ಸುರೇಶ್, ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಎಚ್.ಎಂ.ದ್ಯಾಮಣ್ಣ, ಡಿಸಿಸಿ ಬ್ಯಾಂಕ್ ಎಂಡಿ ಇಲ್ಯಾಸ್ ಉಲ್ಲಾ ಷರೀಫ್, ಸಹಕಾರ ಸಂಘಗಳ ಉಪನಿಬಂಧಕ ಆರ್.ಎಸ್.ದಿಲೀಪ್‌ಕುಮಾರ್, ಜಂಟಿ ಕೃಷಿ ನಿರ್ದೇಶಕ ಬಿ.ಮಂಜುನಾಥ್, ಎಪಿಎಂಸಿ ಕಾರ‌್ಯದರ್ಶಿ ಬಿ.ಎಲ್.ಕೃಷ್ಣಪ್ಪ, ಸಹಕಾರ ಸಂಘಗಳ ನಿಬಂಧಕ ಬಾಹುಬಲಿ ಹಂಜೆ, ಆಹಾರ ಇಲಾಖೆ ಜಂಟಿ ನಿರ್ದೇಶಕ ಕೆ.ಪಿ.ಮಧುಸೂದನ್, ಸಂಘದ ಉಪಾಧ್ಯಕ್ಷ ಜಿ.ಆರ್.ಧನಂಜಯ ಇದ್ದರು.

ಬಾಕ್ಸ್*ನಾನು ನಿರುದ್ಯೋಗಿ, ಪಪ್ಪಿ ಉದ್ಯಮಿ
ನಾನು ನಿರುದ್ಯೋಗಿ, ಹಾಗಾಗಿ ಯಾರಾದರೂ ಕರೆದರೆ ತಕ್ಷಣ ಬರುತ್ತೇನೆ. ಆದರೆ, ಪಪ್ಪಿ ಉದ್ಯಮಿ, ಅವರು ಯಾವಾಗಲೂ ಬಿಜಿ ಇರುತ್ತಾರೆಂದು ಕಾರಜೋಳ ಅವರು, ಕಾರ‌್ಯಕ್ರಮಕ್ಕೆ ತಡವಾಗಿ ಆಗಮಿಸಿದ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಅವರನ್ನು ಉದ್ದೇಶಿಸಿ ಹೇಳಿದರು. ಸಂಸದರ ಮಾತನ್ನು ನಗುತ್ತಲೇ ಸ್ವೀಕರಿಸಿದ ಪಪ್ಪಿ, ಚಳ್ಳಕೆರೆ ಪಿಎಲ್‌ಡಿ ಬ್ಯಾಂಕ್ ಸಭೆಗೆ ಹಾಜರಾಗಿದ್ದರಿಂದ ಇಲ್ಲಿಗೆ ಬರುವುದು ವಿಳಂಬವಾಯಿತು ಎಂದು ತಿಳಿಸಿದರು.

*ಮೆಕ್ಕೆಜೋಳ ಖರೀದಿ ಕೇಂದ್ರ
ನನ್ನ ರಾಜಕೀಯ ಶುರುವಾಗಿದ್ದೇ ಸಹಕಾರಿ ಕ್ಷೇತ್ರದಿಂದ. ಚಳ್ಳಕೆರೆ ಪಿಎಲ್‌ಡಿ ಬ್ಯಾಂಕ್, ಜಿಲ್ಲಾ ಸಹಕಾರಿ ಯೂನಿಯನ್‌ನಲ್ಲಿ ಸೇವೆ ಸಲ್ಲಿ ಸಿದ್ದೇನೆ. ರೈತರ ಬೇಡಿಕೆಯಂತೆ ಬೆಂಬಲಬೆಲೆ ಯೋಜನೆಯಡಿ ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಕ್ಕೂ ಕ್ರಮ ವಹಿಸಲಾಗುವುದು.
ಕೆ.ಸಿ.ವೀರೇಂದ್ರ ಪಪ್ಪಿ