ತರೀಕೆರೆ ಕೃಷಿಕ ಸಮಾಜ ಪರಿಷತ್ ಬಿಜೆಪಿ ಬೆಂಬಲಿತ ಸದಸ್ಯರು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಲೋಕೇಶ್‌ಗೆ ಮನವಿ ಸಲ್ಲಿಸಿದರು. ಎಂ.ಕೃಷ್ಣಮೂರ್ತಿ, ಕೆ.ಗಿರೀಶ್ ಚವ್ಹಾಣ್, ಜಿ.ಸಿ.ಸಿದ್ರಾಮಪ್ಪ, ಡಿ.ಪಿ.ಪರಮೇಶ್ವರ ಇತರರಿದ್ದರು. 
ಜಿಲ್ಲೆ

ಕೃಷಿಕ ಸಮಾಜ ಪರಿಷತ್ ಚುನಾವಣೆ ಮುಂದೂಡಿಕೆ

ತರೀಕೆರೆ: ಅಜ್ಜಂಪುರದಲ್ಲಿ ತಾಲೂಕು ಕೃಷಿಕ ಸಮಾಜ ಪರಿಷತ್ ಪದಾಧಿಕಾರಿಗಳ ಆಯ್ಕೆಗಾಗಿ ಗುರುವಾರ ನಿಗದಿಯಾಗಿದ್ದ ಚುನಾವಣೆ ಅನಿರ್ದಿಷ್ಟಾವಧಿಗೆ ಮಂದೂಡಲಾಗಿದೆ.

ಅಜ್ಜಂಪುರ ಕೃಷಿ ಕೇಂದ್ರದಲ್ಲಿ ಗುರುವಾರ ಬೆಳಗ್ಗೆ 11.30ಕ್ಕೆ ನಿಗದಿಯಾಗಿದ್ದ ಚುನಾವಣೆಗೆ ಬಿಜೆಪಿ ಬೆಂಬಲಿತ 8 ಸದಸ್ಯರು ಹಾಜರಾಗಿದ್ದರು. ಆದರೆ ಚುನಾವಣಾಧಿಕಾರಿ ಶಿವಕುಮಾರ್ ಗೈರಿನಿಂದ ಚುನಾವಣೆ ಮುಂದೂಡಲ್ಪಟ್ಟಿತು. ಇದರಿಂದ ಕೆರಳಿದ ಬಿಜೆಪಿ ಬೆಂಬಲಿತ ಸದಸ್ಯರು ಪ್ರತಿಭಟನೆಗಿಳಿದು ಚುನಾವಣಾಧಿಕಾರಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಆರೋಗ್ಯ ಸಮಸ್ಯೆ ಕಾರಣ ನೀಡಿ ಚುನಾವಣಾಧಿಕಾರಿ ಗೈರಾಗಿರುವುದರ ಹಿಂದೆ ಶಾಸಕ ಜಿ.ಎಚ್.ಶ್ರೀನಿವಾಸ್ ಅವರ ಕೈವಾಡವಿದೆ. ತಾಲೂಕು ಕೃಷಿಕ ಸಮಾಜದ ಪರಿಷತ್‌ನಲ್ಲಿ ಕಾಂಗ್ರೆಸ್ ಬೆಂಬಲಿತ ಕೇವಲ 6 ಸದಸ್ಯರು ಇರುವುದರಿಂದ ಅವರಿಗೆ ಹಿನ್ನಡೆಯಾಗಬಹುದೆಂಬ ಕಾರಣಕ್ಕೆ ಚುನಾವಣೆ ಮುಂದೂಡಲಾಗಿದೆ ಎಂದು ಆರೋಪಿಸಿದರು.

ಚುನಾವಣಾಧಿಕಾರಿ ಶಿವಕುಮಾರ್ ನಡೆ ಅನುಮಾನಾಸ್ಪದವಾಗಿದ್ದು, ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಲೋಕೇಶ್ ಅವರಿಗೆ ಮನವಿ ಸಲ್ಲಿಸಿದರು.

ಜಿಪಂ ಮಾಜಿ ಸದಸ್ಯ ಎಂ.ಕೃಷ್ಣಮೂರ್ತಿ, ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ಗಿರೀಶ್ ಚವ್ಹಾಣ್, ಪ್ರಮುಖರಾದ ರಂಗಸ್ವಾಮಿ, ಮಧುಸೂದನ್, ಟಿ.ಸಿ.ತಿಮ್ಮೇಗೌಡ, ಡಿ.ಎಚ್.ಸಂಗಪ್ಪ, ರೇವಣಸಿದ್ದಪ್ಪ, ಜಿ.ಸಿ.ಸಿದ್ರಾಮಪ್ಪ, ಡಿ.ಪಿ.ಪರಮೇಶ್ವರ, ಎಂ.ಶಾಂತಪ್ಪ ಇತರರಿದ್ದರು.