ಜಿಲ್ಲೆ

ಕೃಷಿಂಗ್ ಮುನ್ನವಿಲ್ಲ ಬೆಲೆ ನಿಗದಿ

ಸ.ದಾ. ಜೋಶಿ ಬೀದರ್

ಜಿಲ್ಲೆ ರೈತರಿಗೆ ಕಬ್ಬು ಸಿಹಿಗಿಂತಲೂ ಕಹಿ ಅನುಭವವೇ ಹೆಚ್ಚು ನೀಡುತ್ತಿದೆ. ಮಾರುಕಟ್ಟೆಯಲ್ಲಿ 25 ಪೈಸೆಯ ಚಾಕೋಲೆಟ್ ಸೇರಿದಂತೆ ಪ್ರತಿ ವಸ್ತುವಿಗೂ ದರ ಫಿಕ್ಸ್ ಇರುತ್ತದೆ. ಆದರೆ ರೈತರು ವರ್ಷವಿಡೀ ಕಷ್ಟಪಟ್ಟು ಬೆಳೆದ ಕಬ್ಬಿಗೆ ಪ್ರತಿ ಟನ್‌ಗೆ ಎಷ್ಟು ಬೆಲೆ ಎಂಬುದೇ ಗೊತ್ತಿಲ್ಲ! ಕಬ್ಬಿನ ಬೆಲೆ ನಿಗದಿಪಡಿಸದೆ ಕೃಷಿಂಗ್ ಆರಂಭಿಸುವ ಪರಂಪರೆ ಇಲ್ಲಿನ ಸಹಕಾರ ಮತ್ತು ಖಾಸಗಿ ಸಕ್ಕರೆ ಕಾರ್ಖಾನೆಗಳು ಈ ವರ್ಷವೂ ಮುಂದುವರಿಸಿವೆ. ಹೀಗಾಗಿ ರೈತರ ಕೈಗೆ ಎಷ್ಟು ಹಣ ಬರುತ್ತದೆ ಎಂಬುದು ಹೇಳದ ಸ್ಥಿತಿ ಎದುರಾಗಿದೆ.

ಅತಿವೃಷ್ಟಿಯಿಂದ ಬಹುತೇಕ ಬೆಳೆಗಳು ಹಾಳಾಗಿವೆ. ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಕಬ್ಬಿಗೂ ಮಳೆಯು ಭಾರಿ ಪೆಟ್ಟು ಕೊಟ್ಟಿದ್ದು, ರೈತರನ್ನು ಸಂಕಷ್ಟಕ್ಕೆ ತಳ್ಳಿದೆ. ಈ ಸ್ಥಿತಿಯಲ್ಲಿ ಸೂಕ್ತ ಬೆಲೆ ಮುಂಚಿತವಾಗಿ ನಿಗದಿಪಡಿಸಿ ರೈತರಿಗೆ ಅಭಯ ನೀಡಬೇಕಾದ ಸಕ್ಕರೆ ಕಾರ್ಖಾನೆಯವರು ಮಾತ್ರ ತೆಪ್ಪಗೆ ಕುಳಿತಿದ್ದಾರೆ. ಸಹಕಾರ ಕ್ಷೇತ್ರದಲ್ಲಿ ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆ(ಎನ್ನೆಸ್ಸೆಸ್ಕೆ), ಮಹಾತ್ಮಗಾಂಧಿ ಸಹಕಾರ ಸಕ್ಕರೆ ಕಾರ್ಖಾನೆ (ಎಂಜಿಎಸ್ಸೆಸ್ಕೆ) ಚಾಲ್ತಿಯಲ್ಲಿದ್ದು, ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ (ಬಿಎಸ್ಸೆಸ್ಕೆ) ಬಂದ್ ಆಗಿದೆ. ಖಾಸಗಿಯಲ್ಲಿ ಭಾಲ್ಕೇಶ್ವರ, ಬೀದರ್ ಕಿಸಾನ್ ಸಕ್ಕರೆ ಕಾರ್ಖಾನೆ, ಭವಾನಿ ಶುಗರ್ಸ್ ಪ್ರಮುಖವಾಗಿವೆ. ಬಹುತೇಕ ಕಾರ್ಖಾನೆ ಕೃಷಿಂಗ್ ಆರಂಭಿಸಿ ಒಂದು ತಿಂಗಳಾಗುತ್ತಿದೆ. ಆದರೆ ಯಾರೊಬ್ಬರೂ ಕಬ್ಬಿನ ದರ ನಿಗದಿಪಡಿಸಿಲ್ಲ. ಕೃಷಿಂಗ್ ಆರಂಭಕ್ಕೆ ಮುನ್ನ ಟನ್‌ಗೆ 3 ಸಾವಿರ ರೂ. ಬೆಲೆ ನಿಗದಿ ಮಾಡಬೇಕೆಂಬ ರೈತರ ಬೇಡಿಕೆಗೆ ಯಾರೂ ಕ್ಯಾರೇ ಎನ್ನಲಿಲ್ಲ.

ಜಿಲ್ಲೆಯಲ್ಲಿ ಸಕ್ಕರೆ ಕಾರ್ಖಾನೆ ನಡೆಸುವವರು ಪ್ರಭಾವಿ ಜತೆಗೆ ವಿವಿಧ ರಾಜಕೀಯ ಪಕ್ಷಗಳೊಂದಿಗೆ ಗುರುತಿಸಿಕೊಂಡಿದ್ದಾರೆ. ಇವರ ಮೇಲೆ ಜಿಲ್ಲಾಡಳಿತ, ಸರ್ಕಾರದ ಹಿಡಿತ ಇಲ್ಲದಂತಾಗಿ ತಾವಾಡಿದ್ದೇ ಆಟ, ನಡೆಸಿದ್ದೇ ಕಾರುಬಾರು ಎನ್ನುವ ಧೋರಣೆ ತಳೆದಿದ್ದಾರೆ. ಒಂದೆಡೆ ಉಸ್ತುವಾರಿ ಸಚಿವರು, ಶಾಸಕರು ಇತ್ತ ಕಣ್ಣೆತ್ತಿ ನೋಡುತ್ತಿಲ್ಲ. ಇನ್ನೊಂದೆಡೆ ರಾಜಕೀಯ ನಾಯಕರು ಅಡ್ಜಸ್ಟ್ಮೆಂಟ್ ಪಾಲಿಟಿಕ್ಸ್ ಗೆ ಸೈ ಎನ್ನುತ್ತಿದ್ದಾರೆ. ಹೀಗಾಗಿ ರೈತರು ಕಾರ್ಖಾನೆಯವರಿಂದ ಏನೇ ಸಮಸ್ಯೆ ಎದುರಿಸಿದರೂ ಕೇಳುವರೇ ದಿಕ್ಕಿಲ್ಲದಂತಾಗಿದೆ. ಬೆಲೆ ನಿಗದಿಪಡಿಸಿಯೇ ಕೃಷಿಂಗ್ ಆರಂಭಿಸಿ ಎಂದು ಹೇಳಿ, ಅದನ್ನು ಕಾರ್ಯಗತಗೊಳಿಸಿ ತೋರಿಸುವಷ್ಟು ಧೈರ್ಯ ಯಾರಿಗೂ ಇಲ್ಲ ಎಂಬುದಕ್ಕೆ ಈವರೆಗಿನ ಬೆಳವಣಿಗೆ ಸಾಕ್ಷಿ ಎನಿಸಿವೆ.

ರಾಜ್ಯದ ವಿವಿಧೆಡೆ, ಅಕ್ಕ-ಪಕ್ಕದ ನೆರೆ ರಾಜ್ಯಗಳಲ್ಲಿ ಒಂದು ದರವಿದ್ದರೆ ಇಲ್ಲಿ ಮಾತ್ರ ಬೇರೆ ಇರುತ್ತದೆ. ಸದ್ಯಕ್ಕೆ ಎನ್ನೆಸ್ಸೆಸ್ಕೆ ಮಾತ್ರ ಮುಂಗಡವಾಗಿ ಟನ್‌ಗೆ 1950 ರೂ. ಘೋಷಿಸಿ, ರೈತರಿಗೆ ಈ ಲೆಕ್ಕದಲ್ಲಿ ಹಣ ಪಾವತಿಯೂ ಮಾಡುತ್ತಿದೆ. ದರ ನಿಗದಿ ನಂತರ ಬಾಕಿ ಹಣ ಪಾವತಿಸುವುದಾಗಿ ಪ್ರಕಟಿಸಿದೆ. ಆದರೆ ಉಳಿದ ಕಾರ್ಖಾನೆಗಳು ಯಾವುದೇ ಬೆಲೆ ಘೋಷಣೆ ಮಾಡಿಲ್ಲ. ತಮಗಿಷ್ಟ ಬಂದಷ್ಟು ಮುಂಗಡ ಹಣ ಕೊಡುತ್ತಿವೆ. ನಾವು ರೈತ ಪರ ಎಂದು ಹೇಳಿಕೊಳ್ಳುವ ಬಹುತೇಕ ರಾಜಕಾರಣಿಗಳು ಕಬ್ಬು ಬೆಳೆಗಾರರ ಸಮಸ್ಯೆ ಮತ್ತು ಕಾರ್ಖಾನೆಯವರ ಧೋರಣೆ ಬಗ್ಗೆ ಚಕಾರ ಎತ್ತುತ್ತಿಲ್ಲ. ಜಿಲ್ಲೆ ಜನಪ್ರತಿನಿಧಿ, ನಾಯಕರು ಈವರೆಗೆ ಕಬ್ಬಿನ ದರ ಏಕೆ ನಿಗದಿಪಡಿಸಿಲ್ಲ ಎಂದು ಕೇಳಿಲ್ಲ. ಕನಿಷ್ಠ ಒಂದು ಹೇಳಿಕೆ ಸಹ ನೀಡಿಲ್ಲ. ಇನ್ನು ರೈತ ಸಂಘಟನೆಯವರು ಟನ್‌ಗೆ 3 ಸಾವಿರ ರೂ. ಕೊಡಿ ಎಂದು ಹೇಳಿಕೆ ನೀಡಿ, ಟೋಕನ್ ಹೋರಾಟ ನಡೆಸುವುದಕ್ಕೆ ಸೀಮಿತರಾಗಿದ್ದಾರೆ. ಕಾರ್ಖಾನೆಯವರಿಗೆ ಬಿಸಿ ಮುಟ್ಟಿಸುವ ಕೆಲಸ ಇವರಿಂದಲೂ ನಡೆಯುತ್ತಿಲ್ಲ. ಇಂಥದರಲ್ಲಿ ನಮ್ಮ ಗೋಳು ಕೇಳೋರ್ಯಾರು ಎಂಬುದು ರೈತರ ಪ್ರಶ್ನೆ.

ಹೇಳಿಕೆಗೆ ಸೀಮಿತವಾಯ್ತು
ರಿಕವರಿ ಗೋಲ್ಮಾಲ್ !

ಜಿಲ್ಲೆಯ ಸಹಕಾರ ಸಕ್ಕರೆ ಕಾರ್ಖಾನೆಗಳಲ್ಲಿ ಸಕ್ಕರೆ ಇಳುವರಿ (ರಿಕವರಿ) ಗೋಲ್ಮಾಲ್ ನಡೆಯುತ್ತಿದೆ ಎಂಬ ಆರೋಪ ಪ್ರತಿ ಹಂಗಾಮಿನಲ್ಲೂ ಕೇಳಿಬರುತ್ತವೆ. ಉದ್ದೇಶಪೂರ್ವಕವಾಗಿ ರಿಕವರಿ ಕಮ್ಮಿ ತೋರಿಸಿ, ಹೆಚ್ಚಿನ ಸಕ್ಕರೆ ಇತರೆ ಉತ್ಪನ್ನಗಳನ್ನು ಕಾಳಸಂತೆಗೆ ಮಾರಾಟ ಮಾಡಲಾಗುತ್ತಿದೆ ಎಂಬ ದೂರು ಸಾಮಾನ್ಯವಾಗಿವೆ. ಆದರೆ ಈವರೆಗೆ ಯಾರೂ ಇದರ ಹಕೀಕತ್ತೇನಿದೆ ಎಂದು ಅರಿಯುವ ಗೋಜಿಗೆ ಹೋಗಿಲ್ಲ. ಇದರ ಆಳಕ್ಕಿಳಿಯುವ ಪ್ರಯತ್ನವೂ ಮಾಡಿಲ್ಲ. ಹೀಗಾಗಿ ಈ ವಿಷಯ ಕೇವಲ ಹೇಳಿಕೆಗೆ ಸೀಮಿತವಾಗಿದೆ. ಸಂಸದ ಭಗವಂತ ಖೂಬಾ ಅವರೇ ಕಳೆದ ಹಂಗಾಮಿನ ವೇಳೆ ರಿಕವರಿ ಸಂಬಂಧ ಹೇಳಿಕೆ ಕೊಟ್ಟಿದ್ದರು. ರಿಕವರಿ ಹೆಸರಿನಲ್ಲಿ ರೈತರಿಗೆ ಧೋಖಾ ಮಾಡಲಾಗುತ್ತಿದೆ. ಹೆಚ್ಚು ರಿಕವರಿ ಬಂದರೂ ಕಮ್ಮಿ ತೋರಿಸಿ ಹೇರಾಫೇರಿ ನಡೆಸಲಾಗುತ್ತಿದೆ ಎಂಬ ಗಂಭೀರ ಆರೋಪ ಹೊರಿಸಿ, ಈ ಬಗ್ಗೆ ಸಮಗ್ರ ತನಿಖೆ ನಡೆಸುವ ಅಗತ್ಯವಿದೆ ಎಂದು ಆಗ್ರಹಿಸಿದ್ದರು. ಆದರೆ ಒಂದು ಹಂಗಾಮು ಕಳೆದು, ಮತ್ತೊಂದು ಹಂಗಾಮು ಆರಂಭವಾದರೂ ಈ ದೂರಿನ ಬಗ್ಗೆ ಸರ್ಕಾರ ಹಾಗೂ ಜಿಲ್ಲಾಡಳಿತದ ಮಟ್ಟದಲ್ಲಿ (ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದ್ದರೂ) ಯಾವುದೇ ಬೆಳವಣಿಗೆ ನಡೆದಿಲ್ಲ. ಹೀಗಾಗಿ ಸಂಸದರ ಹೇಳಿಕೆ ಸಹ ಹತ್ತರಲ್ಲಿ ಹನ್ನೊಂದಾಗಿ ಉಳಿದಿದೆ. ಬಿಜೆಪಿ ಮುಖಂಡ ಡಿ.ಕೆ. ಸಿದ್ರಾಮ ಅವರು ಸಹ ಈ ಹಿಂದೆ ರಿಕವರಿ ಗೋಲ್ಮಾಲ್ ಬಗ್ಗೆ ಹೇಳಿಕೆ ಕೊಟ್ಟಿದ್ದರು. ಈಗ ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆಗೆ ಇವರೇ ಅಧ್ಯಕ್ಷರು. ಇವರ ನೇತೃತ್ವದಲ್ಲಿ ರಿಕವರಿ ಹೇಗೆ ಬರಬಹುದು? ಇದರಲ್ಲೇನಾದರೂ ಹೇರಾಫೇರಿ ಇದ್ದರೆ ನಿವಾರಣೆ ಮಾಡುತ್ತಾರಾ ಕಾದು ನೋಡಬೇಕು. ಜಿಲ್ಲೆಯಲ್ಲಿ ಸಕ್ಕರೆ ರಿಕವರಿ ಪ್ರಮಾಣ ಸರಾಸರಿ ಶೇ.10ರಷ್ಟಿದೆ. ಆದರೆ ಕಾರ್ಖಾನೆಗಳು ಶೇ.9ರಷ್ಟು ಮಾತ್ರ ತೋರಿಸುತ್ತಾರೆ ಎಂಬ ಗಂಭೀರ ಆರೋಪ ರೈತರದ್ದಾಗಿದೆ.

ಅತಿವೃಷ್ಟಿಯಿಂದ ಕುಗ್ಗಿದ ಕಬ್ಬು ಉತ್ಪನ್ನ
ಈ ಸಲ ಸುರಿದ ವ್ಯಾಪಕ ಮಳೆಯಿಂದಾಗಿ ಜಿಲ್ಲೆಯಲ್ಲಿ ಸಾಕಷ್ಟು ಕಬ್ಬು ಬೆಳೆ ಹಾನಿಯಾಗಿದ್ದು, ಉತ್ಪಾದನೆ ಗಣನೀಯ ಕುಸಿಯಲಿದೆ. ಹೀಗಾಗಿ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳಿಗೆ ಪ್ರಸಕ್ತ ಕಬ್ಬಿನ ಕೊರತೆ ಕಾಡಲಿದೆ. ಈ ವರ್ಷ ವಾಡಿಕೆಗಿಂತ ಶೇ. 25ರಷ್ಟು ಮಳೆ ಹೆಚ್ಚಾಗಿದೆ. ಸೆಪ್ಟೆಂಬರ್, ಅಕ್ಟೋಬರ್ ನಲ್ಲಿ ಬಿರುಗಾಳಿಯೊಂದಿಗೆ ಸುರಿದ ಮಳೆ ಸಮೃದ್ಧವಾಗಿ ಬಂದ ಕಬ್ಬು ಬೆಳೆಯನ್ನು ಮಕಾಡೆ ಮಲಗಿಸಿದೆ. ಅತಿವೃಷ್ಟಿಯಿಂದ ಶೇ. 30ಕ್ಕೂ ಹೆಚ್ಚು ಕಬ್ಬು ಹಾಳಾಗಿದ್ದು. ರೈತರಿಗೆ ಇನ್ನಷ್ಟು ಆರ್ಥಿಕ ನಷ್ಟ ತಂದಿದೆ. ಜಿಲ್ಲೆಯಲ್ಲಿ ಪ್ರಸಕ್ತ 25 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗಿದೆ. ಪ್ರತಿ ಎಕರೆ ಇಳುವರಿ ಸರಾಸರಿ 25-30 ಟನ್ ಇದೆ. ಆದರೆ ಮಳೆ ಹಾನಿಯಿಂದ ಈ ಪ್ರಮಾಣ 15-20 ಟನ್‌ಗೆ ಕುಸಿದಿದೆ. ಈ ಲೆಕ್ಕಾಚಾರದಲ್ಲಿ 11-13 ಲಕ್ಷ ಟನ್ ನಷ್ಟು ಕಬ್ಬು ಬರಬಹುದು. ಹೀಗಾಗಿ ಇಲ್ಲಿನ ಎಲ್ಲ ಕಾರ್ಖಾನೆಗಳು ಸರಾಸರಿ 3 ಲಕ್ಷ ಟನ್ ಕಬ್ಬು ನುರಿಸುವುದು ಕಷ್ಟಕರ ಎನಿಸಿದೆ.

ರೈತರ ಬೇಡಿಕೆಗೆ ಸಿಗದ ಮನ್ನಣೆ
ಸಹಕಾರ ಸೇರಿ ಜಿಲ್ಲೆಯ ಎಲ್ಲ ಸಕ್ಕರೆ ಕಾರ್ಖಾನೆಯವರು ಕಬ್ಬಿನ ಬೆಲೆ ಟನ್‌ಗೆ ಎಷ್ಟು? ಎಂಬುದು ಕೃಷಿಂಗ್ಗೆ ಮುನ್ನ ಘೋಷಿಸಬೇಕೆಂಬ ರೈತರ ಬೇಡಿಕೆಗೆ ಇಲ್ಲಿ ಯಾವತ್ತೂ ಮನ್ನಣೆ ಸಿಕ್ಕಿಲ್ಲ. ಕಳೆದೊಂದು ದಶಕದಿಂದ ಯಾವೊಂದು ಕಾರ್ಖಾನೆ ಇಲ್ಲಿ ಕಬ್ಬಿನ ದರ ಮುಂಚಿತ ನಿಗದಿಪಡಿಸುತ್ತಿಲ್ಲ. ಹೀಗಾಗಿ ಕಾರ್ಖಾನೆಯವರು ಕೊಟ್ಟಷ್ಟೇ ದರ ಎಂಬಂತಾಗಿದೆ. ಮುಂಗಡವಾಗಿ ಒಂದಿಷ್ಟು ಹಣ ಫಿಕ್ಸ್ ಮಾಡುತ್ತಿದ್ದರಿಂದ ರೈತರಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ಮುಕ್ತ ಮಾರುಕಟ್ಟೆಯಲ್ಲಿ ಸಕ್ಕರೆ ಧಾರಣೆ ಏರುಪೇರಾಗುತ್ತಿದ್ದಂತೆ ಅದರ ಪ್ರತಿಕೂಲ ಪರಿಣಾಮ ಕಬ್ಬು ಬೆಳೆಗಾರರ ಮೇಲಾಗುತ್ತಿದೆ. ಹೀಗಾಗಿ ಎಷ್ಟು ಹಣ ಅಂತಿಮವಾಗಿ ರೈತರ ಕೈಸೇರಲಿದೆ ಎಂಬುದೇ ಗೊತ್ತಾಗದು. ಹೀಗಾಗಿ ಅನೇಕರು ತೆಲಂಗಾಣ, ಮಹಾರಾಷ್ಟ್ರ ಕಾರ್ಖಾನೆಗಳತ್ತ ಅನಿವಾರ್ಯವಾಗಿ ಮುಖ ಮಾಡುತ್ತಿದ್ದಾರೆ. ಅಲ್ಲಿನವರು ಟನ್‌ಗೆ 2500-2600 ರೂ. ಕೊಡುವ ಆಫರ್ ಸಹ ನೀಡಿ ರೈತರಿಗೆ ಸೆಳೆಯುತ್ತಿದ್ದಾರೆ.

ಕಬ್ಬಿನ ಬೆಲೆ ನಿಗದಿ ಸಂಬಂಧ ಎಲ್ಲ ಕಾರ್ಖಾನೆಗಳ ಪ್ರಮುಖರ ಸಭೆ ಕರೆಯಲಾಗಿತ್ತು. ಆದರೆ ಗ್ರಾಪಂ ಚುನಾವಣೆ ಘೋಷಣೆಯಾದ ಕಾರಣ ಸಭೆ ನಡೆಸಲಿಲ್ಲ. ಚುನಾವಣೆ ಮುಗಿಯುತ್ತಲೇ ಸಭೆ ನಡೆಸಿ ನ್ಯಾಯಸಮ್ಮತ ಬೆಲೆ ಕೊಡಿಸಲು ಪ್ರಯತ್ನಿಸುವೆ. ಕಳೆದ ಸಲ ಎಲ್ಲರ ಸಮ್ಮತಿಯಿಂದ 2250 ರೂ. ನಿಗದಿಪಡಿಸಲಾಗಿತ್ತು.| ಪ್ರಭು ಚವ್ಹಾಣ್, ಜಿಲ್ಲಾ ಉಸ್ತುವಾರಿ ಸಚಿವ
ಟನ್ ಕಬ್ಬಿಗೆ 3000 ರೂ.ದರ ನಿಗದಿಪಡಿಸಬೇಕು. ಕೂಡಲೇ ಎಲ್ಲ ಕಾರ್ಖಾನೆಗಳ ಸಭೆ ನಡೆಸಿ ಬೆಲೆ ಘೋಷಿಸಬೇಕು. ಇನ್ಮುಂದೆ ಕಬ್ಬಿನ ಬೆಲೆ ಮುಂಚಿತವಾಗಿ ಘೋಷಣೆ ಮಾಡದ ಕಾರ್ಖಾನೆಗಳಿಗೆ ಕೃಷಿಂಗ್ ಆರಂಭಿಸುವುದಕ್ಕೆ ಅವಕಾಶ ನೀಡುವುದಿಲ್ಲ.| ಸಿದ್ರಾಮಪ್ಪ ಆಣದೂರೆ, ರೈತ ಸಂಘ ಜಿಲ್ಲಾಧ್ಯಕ್ಷ