ಕಿಕ್ಕೇರಿ: ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಸುರೇಶ್, ಉಪಾಧ್ಯಕ್ಷರಾಗಿ ಹರೀಶ್‌ನಾಯಕ್ ಅವಿರೋಧವಾಗಿ ಆಯ್ಕೆಯಾದರು.
ಈ ಮೊದಲು ಅಧ್ಯಕ್ಷರಾಗಿದ್ದ ತಾರಾನಾಥ್, ಉಪಾಧ್ಯಕ್ಷರಾಗಿದ್ದ ಶ್ರೀನಾಥ್ ಒಪ್ಪಂದದ ಅನ್ವಯ ರಾಜೀನಾಮೆ ನೀಡಿದ್ದರು. ಶುಕ್ರವಾರ ನಡೆದ ಚುನಾವಣೆಯಲ್ಲಿ ಸುರೇಶ್ ಅಧ್ಯಕ್ಷ ಸ್ಥಾನಕ್ಕೆ, ಹರೀಶ್‌ನಾಯಕ್ ಉಪಾಧ್ಯಕ್ಷ ಸ್ಥಾನಕ್ಕೆ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಬೇರೆ ನಿರ್ದೇಶಕರು ನಾಮಪತ್ರ ಸಲ್ಲಿಸಿರಲಿಲ್ಲ. ಚುನಾವಣಾಧಿಕಾರಿಯಾದ ಜಿಲ್ಲಾ ಸಹಕಾರ ಸಂಘ ಕಚೇರಿ ಉಪನಿಬಂಧಕಿ ಆಶಾ ಅವರು ಸುರೇಶ್ ಅಧ್ಯಕ್ಷರಾಗಿ, ಹರೀಶನಾಯಕ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವುದನ್ನು ಘೋಷಿಸಿದರು.
ಒಟ್ಟು 13 ನಿರ್ದೇಶಕರಲ್ಲಿ 9 ನಿರ್ದೇಶಕರು ಹಾಜರಿದ್ದು, 4 ನಿರ್ದೇಶಕರು ಗೈರಾಗಿದ್ದರು. ಅಭಿಮಾನಿಗಳು ಪಟಾಕಿ ಸಿಡಿಸಿ, ಪುಷ್ಪಮಾಲೆ ಹಾಕಿ, ಸಿಹಿ ಹಂಚಿ ಸಂಭ್ರಮಿಸಿದರು.
ನಿರ್ದೇಶಕರಾದ ತಾರಾನಾಥ್, ಎಂ.ಕೆ. ಶ್ರೀನಾಥ್, ಮನೋಜ್‌ಕುಮಾರ್, ಪಾಪೇಗೌಡ, ಕೋಮಲಾ ಪುಟ್ಟೇಗೌಡ, ಭಾರತಿ ಪ್ರಕಾಶ್, ಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ರಘು, ಸಿಇಒ ಪುಟ್ಟರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ್, ಮುಖಂಡರಾದ ಸಾಸಲು ಈರಪ್ಪ, ಕೆ.ಜಿ. ತಮ್ಮಣ್ಣ, ಲಕ್ಷ್ಮೀಪುರ ಚಂದ್ರು, ಸೊಳ್ಳೇಪುರ ಜಯರಾಂ, ಕೆ.ಜೆ. ರಾಜಣ್ಣ, ದಯಾನಂದ್, ಕಿರಣ್, ಗೋಪಾಲಕೃಷ್ಣ, ರಮೇಶ್, ಮಂಜೇಗೌಡ, ಗ್ರಾಪಂ. ಸದಸ್ಯರು ಮುಂತಾದವರು ಹಾಜರಿದ್ದರು.