ಮೈಸೂರು: ‘ಕೃಷಿ ಸಖಿ’ ತರಬೇತಿ ಪಡೆದವರು ಹಳ್ಳಿಗಳಲ್ಲಿ ‘ರಾಯಭಾರಿ’ಗಳಂತೆ ಕೆಲಸ ಮಾಡಿ, ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿ ತಲುಪಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕಿ ಬಿ.ಎಂ. ಸವಿತಾ ಹೇಳಿದರು
ಸಂಜೀವಿನಿ- ಕೆಎಸ್‌ಆರ್‌ಎಲ್‌ಪಿಎಸ್, ಕೌಶಲಾಭಿವೃದ್ಧಿ ಉದ್ಯಮಶೀಲತೆ ಮತ್ತ ಜೀವನೋಪಾಯ ಇಲಾಖೆ, ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ಸಹಯೋಗದಲ್ಲಿ ಪರಿಸರ ಕೃಷಿ ವಿಧಾನಗಳು ಕುರಿತು ಕೃಷಿ ಜೀವನನೋಪಾಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳಿಗೆ (ಕೃಷಿ ಸಖಿ) ನಾಗನಹಳ್ಳಿ ಕೃಷಿ ವಿಸ್ತರಣಾ ಶಿಕ್ಷಣ ಘಟಕದಲ್ಲಿ ಏರ್ಪಡಿಸಿದ್ದ ತರಬೇತಿ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪಡೆದ ತರಬೇತಿ ಸದುಪಯೋಗ ಆಗಬೇಕಾದರೆ ಹಳ್ಳಿಗಾಡಿನ ಜನರ ಜೀವನಮಟ್ಟ ಸುಧಾರಿಸುವಂತೆ ಮಾಡಬೇಕು. ವಾರ, ಮಾಸಿಕ ಸಭೆಗಳಲ್ಲಿ ಈ ಬಗ್ಗೆ ಕೃಷಿ ಸಖಿಯರು ಪ್ರಸ್ತಾಪಿಸಬೇಕು. ಸ್ವಸಹಾಯ ಸಂಘಗಳ ಸದಸ್ಯರಿಗೂ ಮಾಹಿತಿ ನೀಡಬೇಕು ಎಂದು ಹೇಳಿದರು.
ಜಿಲ್ಲೆಯ ವಿವಿಧ ಭಾಗಗಳಿಂದ ಬಂದಿದ್ದ 30 ಮಹಿಳೆಯರು ತರಬೇತಿಯಲ್ಲಿ ಪಾಲ್ಗೊಂಡಿದ್ದರು. ಎಲ್ಲರಿಗೂ ಪ್ರಮಾಣಪತ್ರ ವಿತರಿಸಲಾಯಿತು. ಈ ಪೈಕಿ ರಮ್ಯಾ ಹಾಗೂ ಮಹದೇವಮ್ಮ ಅನಿಸಿಕೆ ಹಂಚಿಕೊಂಡರು. ಅದರಲ್ಲೂ ನಂಜನಗೂಡು ತಾಲೂಕಿನ ಮುದ್ದಹಳ್ಳಿಯ ಪ್ರಗತಿಪರ ರೈತ ಚಿಕ್ಕಸ್ವಾಮಿ ಅವರ ತೋಟಕ್ಕೆ ಭೇಟಿ ನೀಡಿದ್ದು,. ಪ್ರಾಯೋಗಕ ಜ್ಞಾನವನ್ನು ನೀಡಿದೆ ಎಂದರು.
ಕೃಷಿ ಮತ್ತು ಪರಿಸರ, ಜೀವನೋಪಾಯ, ಪರಿಣಾಮಕಾರಿ ಹೈನುಗಾರಿಕೆ, ಪೌಷ್ಟಿಕ ಕೈತೋಟದ ಮಹತ್ವ, ಮಣ್ಣು ರಚನೆ, ಸೂಕ್ಷ್ಮ ಜೀವಿಗಳು, ಮಣ್ಣಿನ ಆಹಾರ ಜಾಲ, ಆರೋಗ್ಯ ರಕ್ಷಣೆ, ಸಸ್ಯ ಪೋಷಣೆ, ಕಾಂಪೋಸ್ಟ್ , ಕೊಟ್ಟಿಗೆ, ಎರೆ, ಜೈವಿಕ ಗೊಬ್ಬರ ತಯಾರಿಕೆ, ಬೀಜೋಪಚಾರದ ಮಹತ್ವ, ಕೃಷಿ ಇಲಾಖೆಯ ಯೋಜನೆಗಳು, ಸುಧಾರಿತ ಬೇಸಾಯ ತತ್ವಗಳು, ಬೆಳೆಗಳ ಕೀಟ ರಹಾಗೂ ರೋಗ ಗುರುತಿಸುವಿಕೆ, ರಾಸಾಯನಿಕ ಪೀಡೆನಾಶಕಗಳಿಂದ ಆಗುವ ಪರಿಣಾಮಗಳು, ನೀರಿನ ನಿರ್ವಹಣಾ ವಿಧಾನಗಳನ್ನು ತಿಳಿಸಿಕೊಡಲಾಗಿದೆ.
ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಬೇಸಾಯಶಾಸ್ತ್ರ ಪ್ರಾಧ್ಯಾಪಕ ಹಾಗೂ ವಿಸ್ತರಣಾ ಮುಂದಾಳು ಡಾ.ಸಿ.ರಾಮಚಂದ್ರ, ಮಂಡ್ಯ ವಿ.ಸಿ ಫಾರಂ ವಲಯ ಕೃಷಿ ಸಂಶೋಧನಾ ಕೇಂದ್ರದ ಸಹ ಸಂಶೋಧನಾ ನಿರ್ದೇಶಕ ಡಾ.ಎನ್. ಶಿವಕುಮಾರ್, ನಾಗನಹಳ್ಳಿ ಸಾವಯವ ಕೃಷಿ ಸಂಶೋಧನಾ ಕೇಂದ್ರದ ಹಿರಿಯ ಕ್ಷೇತ್ರಾಧೀಕ್ಷಕ ಡಾ.ಪಿ.ಪ್ರಕಾಶ್, ಸಸ್ಯ ಸಂರಕ್ಷಣೆ- ಕೀಟಶಾಸ್ತ್ರ ಪ್ರಾಧ್ಯಾಪಕ ಡಾ.ಸಿ. ಗೋವಿಂದರಾಜು, ಸಂಜೀವಿನಿ- ಕೆಎಸ್‌ಎಲ್‌ಪಿಎಸ್, ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಜಿಲ್ಲಾ ವ್ಯವಸ್ಥಾಪಕ ಬಸವರಾಜು, ತೋಟಗಾರಿಕೆ ಸಹಾಯಕ ಪ್ರಾಧ್ಯಾಪಕ ರಾಹುಲ್ ದಾಸ್, ಸಸ್ಯ ಸಂರಕ್ಷಣೆ ಸಹಾಯಕ ಪ್ರಾಧ್ಯಾಪಕಿ ಡಾ.ಆರ್.ಎನ್. ಪುಷ್ಪಾ, ಹೈನುಗಾರಿಕೆ ಸಹಾಯಕ ಪ್ರಾಧ್ಯಾಪಕಿ ಡಾ.ಎ. ನಾಗಮಣಿ, ಸಹಾಯಕ ಪ್ರಾಧ್ಯಾಪಕರಾದ ಡಾ.ಕೃಷ್ಣ ಯಾದವ್, ಎಚ್.ಆರ್. ಉಮೇಶ್ ಮೊದಲಾದವರು ಇದ್ದರು.