ಜಿಲ್ಲೆ

ಕೃಷಿ ವಿಶ್ವವಿದ್ಯಾನಿಲಯ ಶಾಶ್ವತ ಕೊಡುಗೆ: ತಾಪಂ ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು ಬಣ್ಣನೆ

ಮಂಡ್ಯ: ಜಿಲ್ಲೆಯ ಜನರು ಬಹುದಿನದ ಬೇಡಿಕೆಯಂತೆ ಸಮಗ್ರ ಕೃಷಿ ವಿಶ್ವವಿದ್ಯಾನಿಲಯ ಪ್ರಾರಂಭಿಸುವಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಯಶಸ್ವಿಯಾಗಿದ್ದಾರೆ. ಇದು ಮಂಡ್ಯಕ್ಕೆ ನೀಡಿದ ಶಾಶ್ವತ ಕೊಡುಗೆ ಎಂದು ಮಂಡ್ಯ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು ಹೇಳಿದರು.

ತಾಲೂಕಿನ ವಿ.ಸಿ ಫಾರ್ಮ್‌ನ ಕೃಷಿ ಮಹಾವಿದ್ಯಾಲಯದಲ್ಲಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ, ರಕ್ತನಿಧಿ ಕೇಂದ್ರ ಮಿಮ್ಸ್, ಡಿಆರ್‌ಪಿಬಿ ಫೌಂಡೇಷನ್ ಟ್ರಸ್ಟ್ ಸಹಯೋಗದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಮಾತನಾಡಿದ ಅವರು, ಕೃಷಿ ಶಿಕ್ಷಣಕ್ಕಾಗಿ ಹಿಂದೆಲ್ಲ ಬೆಂಗಳೂರಿಗೆ ಹೋಗಬೇಕಿತ್ತು. ಇದರಿಂದ ಹೆಚ್ಚಿನ ಆರ್ಥಿಕ ಹೊರೆಯಾಗುತ್ತಿತ್ತು. ಇದನ್ನು ಮನಗಂಡು ರೈತರ ಮಕ್ಕಳಿಗೆ ಅನುಕೂಲವಾಗಲೆಂದು ಸಮಗ್ರ ಕೃಷಿ ವಿಶ್ವವಿದ್ಯಾನಿಲಯ ಪ್ರಾರಂಭಿಸಿದ್ದು ಹೆಮ್ಮೆ ವಿಚಾರ. ಇದಕ್ಕೆ ಪಕ್ಷಾತೀತವಾಗಿ ಅವರನ್ನು ಅಭಿನಂದಿಸಬೇಕು ಎಂದರು.

ಜಿಲ್ಲೆಯಿಂದ ಸಚಿವರಾಗಿ ಹಲವು ಅಭಿವೃದ್ಧಿ ಕೆಲಸವನ್ನು ಮಾಡಿದ್ದಾರೆ. ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಸಾರಿಗೆ ಸಚಿವರಾಗಿದ್ದಾಗ ಜಿಲ್ಲೆಯ ಬಸ್ ನಿಲ್ದಾಣಗಳನ್ನು ಆಧುನೀಕರಣಗೊಳಿಸಿದರು. ಆರೋಗ್ಯ ಸಚಿವರಾಗಿ ಮಂಡ್ಯಕ್ಕೆ ಮೆಡಿಕಲ್ ಕಾಲೇಜು ತಂದು ಸಾವಿರಾರೂ ವೈದ್ಯ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿದರು. ಮುಂದೆ ಇನ್ನಷ್ಟು ಅಭಿವೃದ್ಧಿ ಕೆಲಸ ಮಾಡಲಿ ಎಂದು ಹಾರೈಸಿದರು.

ಕೃಷಿ ವಿಶ್ವವಿದ್ಯಾಲಯ ವಿಶೇಷಾಧಿಕಾರಿ ಡಾ.ಕೆ.ಎಂ.ಹರಿಣಿಕುಮಾರ್ ಮಾತನಾಡಿ, ಮೈಸೂರು ಪ್ರಾಂತ್ಯದ ಕಂದಾಯ ವಿಭಾಗದಲ್ಲಿ ಕೃಷಿ ವಿವಿ ಪ್ರಾರಂಭಿಸಲು ಸಚಿವ ಚಲುವರಾಯಸ್ವಾಮಿ ಅವರು ಶ್ರಮವಹಿಸಿ ಕೆಲಸ ಮಾಡಿದ್ದಾರೆ. ಇದಕ್ಕಾಗಿ ಮೈಸೂರು ಪ್ರಾಂತ್ಯದ ರೈತರ ಪರವಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಜಿಲ್ಲೆಯಲ್ಲಿ ಯುವ ರೆಡ್‌ಕ್ರಾಸ್ ಮೂಲಕ ಶಿಬಿರಗಳಲ್ಲಿ ಹೆಚ್ಚು ವಿದ್ಯಾರ್ಥಿಗಳು ರಕ್ತದಾನ ಮಾಡಿದ್ದಾರೆ. ರಕ್ತದಾನ ಬಹಳ ಮುಖ್ಯವಾದದ್ದು, ಇದರಿಂದ ದಾನ ಮಾಡಿದವರ ಆರೋಗ್ಯಕ್ಕೂ ಅನುಕೂಲವಾಗುತ್ತದೆ ಎಂದು ಹೇಳಿದರು.

ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಸಭಾಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ ಮಾತನಾಡಿ, ರಕ್ತಕ್ಕೆ ಪರ್ಯಾಯ ವಸ್ತು ಯಾವುದು ಇಲ್ಲ. ರಕ್ತದಾನದಿಂದ ಮಾನವೀಯತೆ ಬೆಳೆಯಲು ಸಹಾಯ ಮಾಡುತ್ತದೆ. ಮಾನವೀಯತೆ, ಸಮಾನತೆ ರಕ್ತದಾನದ ಉದ್ದೇಶವಾಗಿದೆ ಎಂದು ತಿಳಿಸಿದರು.

ಕೃಷಿ ಮಹಾವಿದ್ಯಾಲಯದ ಡೀನ್(ಕೃಷಿ) ಡಾ.ಪಿ.ಎಸ್.ಫಾತಿಮಾ, ಮಾಜಿ ಶಾಸಕ ಎಚ್.ಬಿ.ರಾಮು, ಕೆಪಿಸಿಸಿ ಸದಸ್ಯ ಸಿ.ಕೆ.ನಾಗರಾಜು, ಮೇಲುಕೋಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉಮೇಶ್ ಸಂಪಳ್ಳಿ, ಟ್ರಸ್ಟ್ ಅಧ್ಯಕ್ಷ ಸಿ.ಎಂ.ದ್ಯಾವಪ್ಪ, ರೆಡ್‌ಕ್ರಾಸ್ ಸಂಸ್ಥೆ ನಿರ್ದೇಶಕ ಮಂಗಲ ಎಂ.ಯೋಗೇಶ್, ವಕೀಲ ಸುಂಡಹಳ್ಳಿ ಮಂಜುನಾಥ್, ಎಲ್.ಸಂದೇಶ್, ವೆಂಕಟೇಶ್, ಸೋಮಶೇಖರ್, ಶ್ರೀಕಂಠಯ್ಯ ಇತರರಿದ್ದರು. ಇದೇ ವೇಳೆ 56 ಯೂನಿಟ್ ರಕ್ತಸಂಗ್ರಹಿಸಿ ಮಿಮ್ಸ್‌ಗೆ ಹಸ್ತಾಂತರ ಮಾಡಲಾಯಿತು.