ಜಿಲ್ಲೆ

ಕೃಷಿ ವಿವಿಗೆ ಬಾಬು ಜಗಜೀವನರಾಮ್ ಹೆಸರು

ಹುಬ್ಬಳ್ಳಿ: ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನರಾಮ್ ಅವರ ಹೆಸರನ್ನು ಧಾರವಾಡ ಕೃಷಿ ವಿಶ್ವವಿದ್ಯಾಲಯಕ್ಕೆ ಇಡಬೇಕೆಂಬ ಬೇಡಿಕೆಯಂತೆ ಸರ್ಕಾರದ ಮಟ್ಟದಲ್ಲಿ ಪ್ರಸ್ತಾಪಿಸಿ ಶೀಘ್ರವೇ ಅನುಮೋದನೆ ಕೊಡಿಸಲಾಗುವುದು ಎಂದು ಶಾಸಕ, ಸ್ಲಮ್ ಬೋರ್ಡ್ ಅಧ್ಯಕ್ಷ ಪ್ರಸಾದ ಅಬ್ಬಯ್ಯ ಹೇಳಿದರು.

ಅವರು, ಡಾ.ಬಾಬು ಜಗಜೀವನರಾಮ್ ಅವರ 118ನೇ ಜನ್ಮದಿನದ ಅಂಗವಾಗಿ ಶನಿವಾರ ಇಲ್ಲಿನ ಇಂದಿರಾ ಗಾಜಿನ ಮನೆ ಆವರಣದಲ್ಲಿರುವ ಡಾ.ಜಗಜೀವನರಾಮ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದರು.

ಸ್ವತಂತ್ರ್ಯ ಭಾರತದ ಮೊದಲ ಪ್ರಧಾನಿ ನೆಹರು ಅವರ ಪಂಚವಾರ್ಷಿಕ ಯೋಜನೆ ಮತ್ತು ಡಾ.ಬಾಬು ಜಗಜೀವನರಾಮ್ ಅವರ ಕೃಷಿ ನೀತಿಯಿಂದ ಇಂದು ಭಾರತವು ವಿದೇಶಗಳಿಗೆ ಆಹಾರ ರಫ್ತು ಮಾಡುವಷ್ಟು ಸದೃಢವಾಗಿದೆ. 70ವರ್ಷಗಳ ಸತತ ಪರಿಶ್ರಮದಿಂದ ದೇಶ ಕಟ್ಟಲಾಗಿದೆ. ಇದರಲ್ಲಿ ಕಾಂಗ್ರೆಸ್ ಸರ್ಕಾರಗಳ ಕೊಡುಗೆ ಅಪಾರ ಎಂದರು.

ಬಾಬು ಜಗಜೀವನ್ ರಾಮ್ ಅವರು ಜಾತಿ ಇರುವವರೆಗೂ ಮೀಸಲಾತಿ ಇರಬೇಕು ಎಂದು ಸ್ಪಷ್ಟವಾದ ನಿಲುವು ಹೊಂದಿದ್ದರು. ಬಾಬುಜೀ ಅವರದ್ದು ಜಾತಿ ಮೀರಿದ ವ್ಯಕ್ತಿತ್ವ. ಮತ್ತೊಬ್ಬ ಅಂಬೇಡ್ಕರ್, ಜಗಜೀವನ ರಾಮ್ ನಮಗೆ ಸಿಗುವುದಿಲ್ಲ. ಹೀಗಾಗಿ ಇವರು ಬಿಟ್ಟು ಹೋಗಿರುವ ಚಿಂತನೆ ಮತ್ತು ಕಾಳಜಿಗಳನ್ನು ಪಾಲಿಸಬೇಕೆಂದು ಹೇಳಿದರು.

ಮಾಜಿ ಸಂಸದ ಐ.ಜಿ.ಸನದಿ, ತಹಶೀಲ್ದಾರ್ ಆರ್.ಕೆ. ಪಾಟೀಲ, ಹು-ಧಾ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಾಕೀರ್ ಸನದಿ, ದಲಿತ ಮುಖಂಡರಾದ ಗುರುನಾಥ ಉಳ್ಳಿಕಾಶಿ, ಪ್ರಭು ಪ್ರಭಾಕರ, ಶ್ರೀನಿವಾಸ ಬೆಳದಡಿ, ಬಸವರಾಜ ತೇರದಾಳ, ಪ್ರೇಮನಾಥ ಚಿಕ್ಕತುಂಬಳ, ಪ್ರಮುಖರಾದ ಅಲ್ತಾಫ್ ಕಿತ್ತೂರ, ಗಂಗಾಧರ ದೊಡ್ಡವಾಡ, ಇತರರು ಇದ್ದರು.