ಜಿಲ್ಲೆ

ಕೃಷಿ ರಂಗದಲ್ಲಿ ಗ್ರಾಮೀಣ ಬ್ಯಾಂಕ್ ಪಾತ್ರ ಮಹತ್ವ

ವಿಜಯವಾಣಿ ಸುದ್ದಿಜಾಲ ಧಾರವಾಡ
ಸುಮಾರು 45 ವರ್ಷಗಳ ಅವಧಿಯಲ್ಲಿ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳು (ಆರ್‌ಆರ್‌ಬಿ) ಬಡವರು ಮತ್ತು ಸೌಲಭ್ಯ ವಂಚಿತರ ಜೀವನ ಮಟ್ಟ ಎತ್ತರಿಸುವ ಮೂಲಕ ಗ್ರಾಮೀಣ ಭಾಗದ ಆರ್ಥಿಕತೆಯ ಬೆಳವಣಿಗೆಯಲ್ಲಿ ಮಹತ್ವದ ಕೊಡುಗೆ ನೀಡಿವೆ ಎಂದು ಕೆನರಾ ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕ ಅಶೋಕ ಚಂದ್ರ ಹೇಳಿದರು.
ನಗರದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ ಪ್ರಧಾನ ಕಚೇರಿಗೆ ಬುಧವಾರ ಭೇಟಿ ನೀಡಿ ಮಾತನಾಡಿದ ಅವರು, ರಾಷ್ಟ್ರದ ಆರ್ಥಿಕತೆ ಉತ್ತಮವಾಗಿ ಬೆಳೆಯುತ್ತಿರುವ ಕಾರಣ ಗ್ರಾಮೀಣ ಮತ್ತು ಅರೆ-ಪಟ್ಟಣ ಪ್ರದೇಶಗಳಲ್ಲಿ ವ್ಯಾಪಾರ ವಹಿವಾಟು ವಿಸ್ತರಿಸಲು ಜನರಿಗೆ ಸಾಕಷ್ಟು ಅವಕಾಶಗಳು ಪ್ರಾಪ್ತವಾಗುತ್ತಿದೆ. ಈ ಕಾರಣಕ್ಕೆ ಗ್ರಾಮೀಣ ಬ್ಯಾಂಕ್‌ಗಳು ತಮ್ಮ ಸಾಲದ ವಿಭಾಗದಲ್ಲಿ ವೈವಿಧ್ಯತೆ ತಂದುಕೊಳ್ಳುವ ಮೂಲಕ ಈ ಅವಕಾಶವನ್ನು ಪ್ರಾದೇಶಿಕ ಅಭಿವೃದ್ಧಿ ಹಾಗೂ ಬ್ಯಾಂಕಿನ ಬೆಳವಣಿಗೆಗೆ ಬಳಸಿಕೊಳ್ಳಬೇಕು ಎಂದರು.
ಕೃಷಿ ರಂಗಕ್ಕೆ ಸಕಾಲಿಕ ಸಾಲ ನೀಡುವ ಮೂಲಕ ಕೃಷಿರಂಗದ ಒಟ್ಟಾರೆ ಬೆಳವಣಿಗೆಯಲ್ಲಿ ಗ್ರಾಮೀಣ ಬ್ಯಾಂಕ್‌ಗಳು ಮಹತ್ತರ ಪಾತ್ರ ವಹಿಸಿವೆ. ಇದರ ಜತೆಗೆ ಗ್ರಾಮೀಣ ಬ್ಯಾಂಕ್ ಸಿಬ್ಬಂದಿ ಕೃಷಿಯೇತರ ಸಾಲ ಯೋಜನೆಗಳ ಮೂಲಕ ತಮ್ಮ ಸೇವಾ ವಲಯದ ಒಟಾರೆ ಸಾಮಾಜಿಕ, ಆರ್ಥಿಕ ಅಭಿವೃದ್ಧಿಗೂ ಮುಂದಾಗಬೇಕು ಎಂದರು.
ಬ್ಯಾಂಕಿನ ಅಧ್ಯಕ್ಷ ಶ್ರೀಕಾಂತ ಭಂಡಿವಾಡ ಬ್ಯಾಂಕಿನ ಕಾರ್ಯವೈಖರಿ ಮತ್ತು ಅದರ ಸಾಮಾಜಿಕ ಒಳಗೊಳ್ಳುವಿಕೆ ಕುರಿತು ಮಾಹಿತಿ ನೀಡಿದರು. ಇದಕ್ಕೂ ಪೂರ್ವದಲ್ಲಿ ಬ್ಯಾಂಕಿನ ಉದ್ಯಾನದಲ್ಲಿ ಸಸಿ ನೆಡಲಾಯಿತು. ಕೆವಿಜಿ ಬ್ಯಾಂಕ್ ನಿರ್ದೇಶಕ ಎಂ. ವಿಜಯಕುಮಾರ, ಬ್ಯಾಂಕಿನ ಮಹಾ ಪ್ರಬಂಧಕರುಗಳು, ಇತರರು ಇದ್ದರು.