ಮೂಡಿಗೆರೆ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಆಯೋಜಿಸಿರುವ ಕೃಷಿ ಮೇಳದಲ್ಲಿ ಮಾಜಿ ಸಚಿವ ಬಿ.ಬಿ.ನಿಂಗಯ್ಯ ಮಾತನಾಡಿದರು. ಡಾ. ಎಚ್.ಟಿ.ಮೋಹನ್‌ಕುಮಾರ್, ಡಾ. ಚಂದ್ರೇಗೌಡ, ಡಾ. ಎ.ಟಿ.ಕೃಷ್ಣಮೂರ್ತಿ, ಡಾ. ಸಿ.ಕೆ.ಪ್ರಮೀಳಾ, ಡಾ. ಎ.ವಿ.ಸ್ವಾಮಿ, ಗಜೇಶ್ ಇತರರಿದ್ದರು. 
ಜಿಲ್ಲೆ

ಕೃಷಿ ಯಂತ್ರೋಪಕರಣ ಕಾರ್ಮಿಕರ ಕೊರತೆಗೆ ಪರಿಹಾರ

ಮೂಡಿಗೆರೆ: ಕೃಷಿ ಚಟುವಟಿಕೆಗೆ ಕಾರ್ಮಿಕರ ಕೊರತೆ ಎದುರಿಸುತ್ತಿರುವ ಕಾರಣ ರೈತರು ಕೃಷಿಯನ್ನು ಕೈಬಿಡುವ ಹಂತಕ್ಕೆ ತಲುಪಿದ್ದಾರೆ. ಹೀಗೆಯೇ ಮುಂದುವರಿದರೆ ಮುಂದೆ ಬಾರಿ ಸಮಸ್ಯೆ ಎದುರಿಸಬೇಕಾಗುತ್ತದೆ. ಕಾರ್ಮಿಕರ ಕೊರತೆ ನೀಗಿಸುವ ಸಲುವಾಗಿ ಯಂತ್ರಗಳು ಮಾರುಕಟ್ಟೆಯನ್ನು ಪ್ರವೇಶಿಸಿವೆ. ರೈತರು ಮತ್ತು ಕಾಫಿ ಬೆಳೆಗಾರರು ಇದರ ಸದುಪಯೋಗ ಪಡೆಸಿಕೊಳ್ಳುವುದರೊಂದಿಗೆ ಕೃಷಿಯನ್ನು ಸಂಮೃದ್ಧವಾಗಿ ಮಾಡಬೇಕು ಎಂದು ಮಾಜಿ ಸಚಿವ ಬಿ.ಬಿ.ನಿಂಗಯ್ಯ ತಿಳಿಸಿದರು.

ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಕೃಷಿ ಮತ್ತು ತೋಟಗಾರಿಕಾ ಮೇಳ 2 ದಿನದ ಕಾರ್ಯಾಗಾರದಲ್ಲಿ ಶನಿವಾರ ಡ್ರೋನ್ ಮೂಲಕ ತೋಟಗಳಿಗೆ ರಾಸಾಯನಿಕ ಸಿಂಪಡಣೆ ಪ್ರಾತ್ಯಕ್ಷಿಕೆಗೆ ಚಾಲನೆ ನೀಡಿ ಮಾತನಾಡಿದರು.

ಡ್ರೋನ್ ತೆಂಗು, ಅಡಕೆ, ಕಾಳುಮೆಣಸಿನ ಬಳ್ಳಿ ಹಬ್ಬಿರುವ ಮರಕ್ಕೆ ಸೇರಿದಂತೆ ವಿವಿಧ ಕೃಷಿಗಳಿಗೆ ಸರಾಗವಾಗಿ ಔಷಧ ಸಿಂಪಡಿಸುತ್ತದೆ. ಒಂದು ಗಂಟೆಗೆ 5 ಎಕರೆ ಜಾಗದಲ್ಲಿ ಸಿಂಪಡಣೆ ಮಾಡುವ ಸಾಮರ್ಥ್ಯ ಹೊಂದಿದೆ. ಹತ್ತಾರು ಕಾರ್ಮಿಕರು ಮಾಡುವ ಕೆಲಸವನ್ನು ಡ್ರೋನ್ ಮೂಲಕ ಮಾಡಲು ಸಾಧ್ಯವಿದೆ ಎನ್ನುವುದನ್ನು ಸಾಬೀತುಪಡಿಸುತ್ತಿದೆ. ಕೃಷಿಕರು ಯಂತ್ರಗಳನ್ನು ಬಳಸುವುದರಿಂದ ಹೆಚ್ಚು ಲಾಭಗಳಿಸಬಹುದು. ಮೂಡಿಗೆರೆ ಕೃಷಿ ವಿಜ್ಞಾನ ಕೇಂದ್ರದಿಂದ ರೈತರಿಗೆ ಬೆಳೆಗಳ ಬಗ್ಗೆ ಉತ್ತಮ ಮಾಹಿತಿ ನೀಡುವುದರೊಂದಿಗೆ ಇಳುವರಿ ಹೆಚ್ಚಿಸಲು ರೈತರಿಗೆ ತರಬೇತಿ ನೀಡುತ್ತಿರುವುದು ವಿಜ್ಞಾನಿಗಳ ಮತ್ತು ರೈತರ ನಡುವಿನ ಬಾಂಧವ್ಯಕ್ಕೆ ಸಾಕ್ಷಿ ಎಂದು ತಿಳಿಸಿದರು.

ಬೆಂಗಳೂರಿನ ಪ್ರಧಾನ ಕೃಷಿ ವಿಜ್ಞಾನಿ ಡಾ. ಚಂದ್ರೇಗೌಡ ಮಾತನಾಡಿ, ರೈತರಿಗೆ ಮಾಹಿತಿ ಕೊಡುವ ಸಲುವಾಗಿ ಕೃಷಿ ಮತ್ತು ತೋಟಗಾರಿಕೆ ಮೇಳ ಹಮ್ಮಿಕೊಳ್ಳಲಾಗಿದೆ. ಮೇಳದಿಂದ ಹಲವು ರೈತರು ಮಾಹಿತಿ ಪಡೆಯುವ ಮೂಲಕ ಕೃಷಿಯಲ್ಲಿ ಹೆಚ್ಚಿನ ಆಸಕ್ತಿ ಬೆಳೆಸಿಕೊಳ್ಳಬೇಕು. ರೈತರು ಕೃಷಿಯಿಂದ ದೂರ ಸರಿಯುವ ಆಲೋಚನೆ ಬೆಳೆಸಿಕೊಳ್ಳಬಾರದು. ರೈತರು ಸೈನಿಕರಿದ್ದಂತೆ. ಕೃಷಿ ಚಟುವಟಿಕೆ ಹೋರಾಟವಿದ್ದಂತೆ. ಆ ಹೋರಾಟದಲ್ಲಿ ಯಶಸ್ವಿಯಾಗುವುದು ಉತ್ತಮ ಇಳುವರಿಯ ಬೆಳೆ ಕೈ ಸೇರಿದಾಗ ಎಂದು ತಿಳಿದುಕೊಳ್ಳಬೇಕು. ಹಾಗಾದರೆ ಮಾತ್ರ ಗುಣಮಟ್ಟದ ಬೆಳೆ, ಬೆಳೆಯಲು ಸಾಧ್ಯವಿದೆ ಎಂದು ತಿಳಿಸಿದರು.

ಕೆವಿಕೆ ಮುಖ್ಯಸ್ಥ ಡಾ. ಎ.ಟಿ.ಕೃಷ್ಣಮೂರ್ತಿ, ಡಾ. ಸಿ.ಕೆ.ಪ್ರಮಿಳಾ, ಡಾ. ಎ.ವಿ.ಸ್ವಾಮಿ, ಗಜೇಶ್ ಇತರರಿದ್ದರು.