ಸಿ.ಎ.ಮುರಳೀಧರ್ ಗೌರಿಬಿದನೂರು
ಮುಂಗಾರು ಹಂಗಾಮು ಪ್ರಾರಂಭವಾಗಿ ಬಿತ್ತನೆ ಕೆಲಸಗಳು ನಡೆಯುತ್ತಿದ್ದರೂ ತೊಂಡೇಬಾವಿ ಹೋಬಳಿಯಲ್ಲಿ ಕೃಷಿ ಯಂತ್ರಧಾರೆ ಯೋಜನೆಗೆ ಗ್ರಹಣ ಹಿಡಿದಿದೆ.
ರಾಜ್ಯ ಸರ್ಕಾರ ಕೃಷಿ ಯಂತ್ರಗಳನ್ನು ಖರೀದಿಸಲು ಸಾಧ್ಯವಾಗದ ಬಡವರಿಗೆ ಕಡಿಮೆ ದರದಲ್ಲಿ ಕೃಷಿ ಯಂತ್ರಗಳನ್ನು ಬಾಡಿಗೆಗೆ ನೀಡುವ ಉದ್ದೇಶದಿಂದ ಕೃಷಿ ಯಂತ್ರಧಾರೆ ಯೋಜನೆ ಜಾರಿಗೊಳಿಸಿದೆ. ಉಳುಮೆಗೆ ಟ್ರ್ಯಾಕ್ಟರ್, ರೋಟವೇಟರ್, 5 ಮಡಿಕೆ ಸಾಲು ಒಡೆಯುವ ಯಂತ್ರ ಸೇರಿ ಇನ್ನಿತರ ಉಪಕರಣಗಳನ್ನು ರೈತರಿಗೆ ಕಡಿಮೆ ದರದಲ್ಲಿ ಬಾಡಿಗೆಗೆ ನೀಡಲಾಗುತ್ತದೆ. ಇದರಿಂದ ಬಡ ರೈತರಿಗೆ ಅನುಕೂಲವಾಗಲಿದೆ. ಆದರೆ ತೊಂಡೇಬಾವಿ ಹೋಬಳಿಯ ಕೃಷಿ ಯಂತ್ರಧಾರೆ ಕೇಂದ್ರಗಳಿಗೆ ಬೀಗ ಜಡಿಯಲಾಗಿದೆ. ಇದರಿಂದ ಪ್ರಸಕ್ತ ಸಾಲಿನ ಮುಂಗಾರು ಹಂಗಾಮು ಅರ್ಧ ಮುಗಿಯುತ್ತಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ರೈತರು ಈ ಯೋಜನೆಯ ಲಾಭದಿಂದ ವಂಚಿತರಾಗುತ್ತಿದ್ದಾರೆ.
ಮುಂಗಾರು ಹಂಗಾಮಿನಲ್ಲಿ ರೈತರಿಗೆ ಅಗತ್ಯವಿರುವ ಕೃಷಿ ಯಂತ್ರೋಪಕರಣಗಳ ಕೊರತೆ ಕಾಡುತ್ತಿದೆ. ಆದರೆ ಕೃಷಿ ಯಂತ್ರಧಾರೆ ಯೋಜನೆಯ ನಿರ್ವಹಣೆ ಹೊಣೆ ಹೊತ್ತಿರುವ ಪದ್ಮಾವತಿ ಅಗ್ರೋ ಸಲ್ಯೂಷನ್ ಕೇಂದ್ರಗಳಿಗೆ ಬೀಗಜಡಿದು ಕುಳಿತಿದ್ದಾರೆ.
ಉಚಿತ ಉಳುಮೆ ವರದಾನ : ಸರ್ಕಾರದ ಯೋಜನೆಗೆ ಗ್ರಹಣ ಹಿಡಿದಿದ್ದರೂ ಸಮಾಜ ಸೇವಕ ಡಾ.ಕೆ.ಕೆಂಪರಾಜು ತಮ್ಮ ಟ್ರಸ್ಟ್‌ನಿಂದ ಚಾಲನೆ ನೀಡಿರುವ ಉಚಿತ ಉಳುಮೆ ಯೋಜನೆ ರೈತರ ಪಾಲಿಗೆ ವರದಾನವಾಗಿದೆ. ತಾಲೂಕಿನ ಬಡ ರೈತರಿಗೆ ಸೇರಿದ ಎರಡು ಎಕರೆ ಜಮೀನನ್ನು ಉಚಿತವಾಗಿ ಉಳುಮೆ ಮಾಡಿಕೊಡಲಾಗುತ್ತಿದೆ. ಅದಕ್ಕಾಗಿ ಪ್ರತ್ಯೇಕ ಆ್ಯಪ್ ಸಿದ್ಧಪಡಿಸಿದ್ದು, ಸಹಸ್ರಾರು ರೈತರು ನೋಂದಾಯಿಸಿಕೊಂಡು ಯೋಜನೆಯ ಲಾಭ ಪಡೆದುಕೊಳ್ಳುತ್ತಿದ್ದಾರೆ.