ಮೈಸೂರು: ಕೃಷಿ ಮೇಳದಲ್ಲಿ ‘ಶಾಶ್ವತ ಯೋಗಿಕ ಬೇಸಾಯ ಪದ್ಧತಿ’ ಗಮನ ಸೆಳೆಯಲಿದೆ.
ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಇಂತಹದ್ದೊಂದು ವಿಶಿಷ್ಟ ಪರಿಕಲ್ಪನೆ ಕಟ್ಟಿಕೊಡಲಿದೆ.
ನಂ.1 ಕನ್ನಡ ದಿನಪತ್ರಿಕೆ ‘ವಿಜಯವಾಣಿ’ ಹಾಗೂ ‘ದಿಗ್ವಿಜಯ’ ಸುದ್ದಿವಾಹಿನಿ ವತಿಯಿಂದ ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಜ.27, 28 ಮತ್ತು 29ರಂದು ಆಯೋಜಿಸಿರುವ ರಾಜ್ಯಮಟ್ಟದ ‘ಕೃಷಿ ಮೇಳ’ದಲ್ಲಿ ‘ಶಾಶ್ವತ ಯೋಗಿಕ ಬೇಸಾಯ ಪದ್ಧತಿ’ ಪ್ರದರ್ಶನ ಪ್ರಮುಖ ಆಕರ್ಷಣೆಯಾಗಿದೆ.
ಕೃಷಿ ಮೇಳವನ್ನು ಜ. 27ರಂದು ಬೆಳಗ್ಗೆ 11ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸುವರು. ಇದೇ ಸಂದರ್ಭದಲ್ಲಿ ‘ಶಾಶ್ವತ ಯೋಗಿಕ ಬೇಸಾಯ ಪದ್ಧತಿ’ ಪ್ರದರ್ಶನವೂ ಉದ್ಘಾಟನೆಗೊಳ್ಳಲಿದೆ. ಇದರೊಂದಿಗೆ ವಿಜ್ಞಾನ ಮತ್ತು ಅಧ್ಯಾತ್ಮಗಳ ಒಗ್ಗೂಡಿಕೆಯಾದ ‘ಯೋಗಿಕ ಕೃಷಿ’ ಚಿತ್ರಣ ಅನಾವರಣಗೊಳ್ಳಲಿದೆ. ಈ ವಿಶಿಷ್ಟ ಪದ್ಧತಿಯನ್ನು ಪರಿಚಯಿಸಿ, ಜನರಲ್ಲಿ ಜಾಗೃತಿ ಮೂಡಿಸಲಾಗುತ್ತದೆ.
ಅತಿಯಾದ ರಾಸಾಯನಿಕ ಗೊಬ್ಬರ ಬಳಕೆಯಿಂದ ಮಣ್ಣು, ಭೂಮಿ ಮೇಲೆ ಅನೇಕ ರೀತಿಯ ದುಷ್ಪರಿಣಾಮ ಉಂಟಾಗಿದೆ. ಪರಿಸರದ ಮೇಲೂ ವ್ಯತಿರಿಕ್ತ ಹಾನಿ ಆಗಿದೆ. ಇದನ್ನು ತಡೆಯಲು ಪರಿಸರಕ್ಕೆ ಪೂರಕವಾದ ಕೃಷಿ ಪದ್ಧತಿ ಕೈಗೊಳ್ಳಬೇಕಾಗಿದೆ.
ಪರಮಾತ್ಮನೇ ಪ್ರಕೃತಿಯ ಅಧಿಪತಿ. ಪರಿಸರದ ಪ್ರತಿ ಕಣ ಕಣದಲ್ಲೂ ಪರಮಾತ್ಮನ ಶಕ್ತಿ ಅಡಗಿದೆ. ಕೃಷಿಯಲ್ಲೂ ಅದರ ಅಳವಡಿಕೆಯೇ ಶಾಶ್ವತ ಯೋಗಿಕ ಬೇಸಾಯ ಪದ್ಧತಿಯಾಗಿದೆ ಎಂದು ಬ್ರಹ್ಮಕುಮಾರಿ ಮಂಜುಳಾ ಅಕ್ಕ ತಿಳಿಸಿದರು.
ಗಂಜಲ, ಎರೆಹುಳು ಗೊಬ್ಬರ ಇನ್ನಿತರ ವಸ್ತುಗಳ ಮೂಲಕ ಸಾವಯವ ಗೊಬ್ಬರ ಉತ್ಪಾದನೆ ಮಾಡಬೇಕು. ಅದನ್ನು ಬೇಸಾಯದಲ್ಲಿ ಬಳಕೆ ಮಾಡಿ ಮಣ್ಣಿನ ಫಲವತ್ತತೆ ಹೆಚ್ಚಿಸುವುದು ಈ ಪದ್ಧತಿಯ ಆದ್ಯತೆ. ಭೂತಾಯಿಯೇ ನಿನ್ನ ಉಡಿಯಲ್ಲಿ ಬೀಜಗಳನ್ನು ಹಾಕುತ್ತಿದ್ದೇವೆ. ಅವುಗಳನ್ನು ಸಂರಕ್ಷಿಸು ಎಂಬ ಶುಭ ಭಾವನೆಯೊಂದಿಗೆ ಬಿತ್ತನೆ ಮಾಡಬೇಕು. ಬೀಜಾಮೃತ, ಜೀವಾಮೃತ ನೀಡಬೇಕು. ನಿತ್ಯ ಒಂದಷ್ಟು ಸಮಯ ರಾಜಯೋಗ, ಧ್ಯಾನದ ಮೂಲಕ ಬೆಳೆಗಳಲ್ಲಿ ಶುದ್ಧ ಭಾವನೆ ಮೂಡಿಸಬೇಕು. ಇದರಿಂದ ಉತ್ತಮ ಫಸಲು ಪಡೆಯಬಹುದು. ಕೀಟಬಾಧೆ ಕಡಿಮೆಯಾಗಿ ಉತ್ತಮ ಫಸಲು ದೊರೆಯಲಿದೆ ಎಂದು ಹೇಳಿದರು.
ಯೋಗಿಕ ಬೇಸಾಯದ ಪರಿಕಲ್ಪನೆಯನ್ನು ಮೇಳದಲ್ಲಿ ಕಟ್ಟಿಕೊಡಲಾಗುವುದು. ಕೃಷಿ ಬೆಳೆಗಳು, ಧಾನ್ಯ, ತರಕಾರಿ, ಹಣ್ಣಗಳ ಪ್ರದರ್ಶನ ಇರಲಿದೆ. ನಾಟಿ, ನೀರು, ಕೊಯ್ಲು ಮಾದರಿ ಸಹ ನೋಡಬಹುದು. ರೈತಾಪಿ ಕುಟುಂಬ, ಗ್ರಾಮೀಣ ಜೀವನ ಚಿತ್ರಣವೂ ಇಲ್ಲಿ ಅನಾವರಣಗೊಳ್ಳಲಿದೆ ಎಂದು ತಿಳಿಸಿದರು.