ಮೈಸೂರು: ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ಜಾರಿಯಾದ ಮೇಲೆ ಕೃಷಿ ಭೂಮಿಯು ಬಂಡವಾಳ ಶಾಹಿಗಳ ಮತ್ತು ಭೂ ಮಾಫಿಯಾದ ಕೈ ವಶವಾಗುತ್ತಿದೆ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಕಿಡಿಕಾರಿದರು.
ಮೈಸೂರು ತಾಲೂಕಿನ ಮಾರ್ಬಳ್ಳಿಯ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ಭಾನುವಾರ ಕರೆದಿದ್ದ ರೈತರ ಜಾಗೃತಿ ಸಭೆಯಲ್ಲಿ ಮಾತನಾಡಿದರು.
ಜಮೀನು ಮಾರಿದ ರೈತರು ಕೆಲ ವರ್ಷಗಳ ನಂತರ ಹಣ ಕಳೆದುಕೊಂಡು ಭದ್ರತಾ ಸೇವಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಲವರು ಕೃಷಿ ತೊರೆದು ನಗರಗಳಿಗೆ ವಲಸೆ ಹೋಗುತ್ತಿದ್ದಾರೆ.
ಹಲವಾರು ವರ್ಷಗಳಿಂದ ರೈತರ ಸಾಗುವಳಿ ಭೂಮಿಗೆ ದರಕಾಸ್ತು ಅನುಮತಿ ಸಾಗುವಳಿ ಪತ್ರ ಕೊಡದೆ ನಿರ್ಲಕ್ಷೃ ಮಾಡುತ್ತಿದ್ದಾರೆ. ಈ ಬಗ್ಗೆ ಸರ್ಕಾರ ಗಂಭೀರವಾಗಿ ಚಿಂತನೆ ನಡೆಸುತ್ತಿಲ್ಲ. ಕೃಷಿ ಉಳಿವಿಗಾಗಿ ರೈತರೇ ಜಾಗೃತರಾಗಿ ಸಂಘಟಿತರಾಗಿರಬೇಕು ಎಂದು ತಿಳಿಸಿದರು
ನಗರಗಳ ಸುತ್ತ ಭೂಮಾಫಿಯಾ ರೈತರನ್ನು ಒಕ್ಕಲೆಬ್ಬಿಸುತ್ತಿದ್ದಾರೆ. ರೈತರು 50 ವರ್ಷಗಳಿಂದ ಕೃಷಿ ಚಟುವಟಿಕೆ ನಡೆಸುತ್ತಿದ್ದರೂ ಸಾಗುವಳಿ ಪತ್ರ ಕೊಡದೆ ಸರ್ಕಾರ ವಿಳಂಬ ಮಾಡುತ್ತಿರುವುದು ಸರಿಯಲ್ಲ ಎಂದೂ ಅಸಮಾಧಾನ ವ್ಯಕ್ತಪಡಿಸಿದರು.
ಸಂಘದ ಜಿಲ್ಲಾ ಉಪಾಧ್ಯಕ್ಷ ಮಾರ್ಬಳ್ಳಿ ನೀಲಕಂಠಪ್ಪ, ತಾಲೂಕ ಅಧ್ಯಕ್ಷ ಪೈಲ್ವಾನ್ ವೆಂಕಟೇಶ್, ರಾಜ್ಯ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಜಿಲ್ಲಾ ಕಾರ್ಯದರ್ಶಿ ಬರಡನಪುರ ನಾಗರಾಜ್, ಮುಖಂಡರಾದ ವೀರಣ್ಣ, ಶಿವಣ್ಣ ನಾಯಕ್, ಚಿನ್ನ ಅಂಕನಾಯಕ, ಲಿಂಗಣ್ಣ, ಮಹದೇವಸ್ವಾಮಿ, ನಾಗೇಶ್, ಬಸವರಾಜು, ಮಹಲಿಂಗನಾಯ್ಕ, ರಾಜು, ಮಹದೇವ, ಶ್ರೀಕಂಠ ಇನ್ನಿತರರಿದ್ದರು.