ಚಿಕ್ಕಮಗಳೂರಿನ ಶಿರವಾಸೆ ಗ್ರಾಮದಲ್ಲಿ ನಾಗರಿಕರ ಮತ್ತು ರೈತ ಹೋರಾಟ ಸಮಿತಿ, ದಲಿತ, ಜನಪರ, ಕನ್ನಡ, ಕಾರ್ಮಿಕರ ಸಂಘಟನೆಗಳು, ಕಾಫಿ ಬೆಳೆಗಾರರ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ಧ ಜನಜಾಗೃತಿ ಜಾಥಾದಲ್ಲಿ ಭಾಗವಹಿಸಿದ್ದ ಸ್ಥಳೀಯ ನಿವಾಸಿಗಳು. ಎಸ್.ವಿಜಯಕುಮಾರ್, ವಾಸು ಪೂಜಾರಿ, ಕೆ.ಆರ್.ಚಂದ್ರೇಗೌಡ, ರಘುನಾಥ್, ಕೆ.ಕೆ.ರಘು, ಮಲ್ಲೇಶ್, ದೇವಣ್ಣ ಗೌಡ ಮತ್ತಿತರರಿದ್ದರು. 
ಜಿಲ್ಲೆ

ಕೃಷಿ ಭೂಮಿ, ಜನವಸತಿ ಉಳಿಸಿಕೊಳ್ಳಲು ಬೀದಿಗಿಳಿದು ಹೋರಾಡಬೇಕು

ಚಿಕ್ಕಮಗಳೂರು: ಕೃಷಿ ಭೂಮಿ, ಜನವಸತಿ ಹಾಗೂ ಮೂಲಸವಲತ್ತಿನ ಪ್ರದೇಶವನ್ನು ಪರಿಭಾವಿತ ಅರಣ್ಯ ಮತ್ತು ಸೆಕ್ಷನ್ ೪(೧)ರಿಂದ ಉಳಿಸಿಕೊಳ್ಳಲು ಗ್ರಾಮಸ್ಥರು ಬೀದಿಗಿಳಿದು ಹೋರಾಟ ರೂಪಿಸಿದರೆ ಮಾತ್ರ ಅಸ್ಥಿತ್ವ ಉಳಿದುಕೊಳ್ಳಲು ಸಾಧ್ಯ ಎಂದು ನಾಗರೀಕ ಮತ್ತು ರೈತರ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ವಿಜಯ್ ಕುಮಾರ್ ತಿಳಿಸಿದರು.

ತಾಲೂಕಿನ ಶಿರವಾಸೆ ಗ್ರಾಮದಲ್ಲಿ ನಾಗರಿಕರ ಮತ್ತು ರೈತ ಹೋರಾಟ ಸಮಿತಿ, ದಲಿತ, ಜನಪರ, ಕನ್ನಡ, ಕಾರ್ಮಿಕರ ಸಂಘಟನೆಗಳು, ಕಾಫಿ ಬೆಳೆಗಾರರ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ಧ ಜನಜಾಗೃತಿ ಜಾಥಾ ಮತ್ತು ಬೃಹತ್ ಜನಜಾಗೃತಿ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಅರಣ್ಯ ಮತ್ತು ಕಂದಾಯ ಇಲಾಖೆಯಿಂದ ಗ್ರಾಮದ ನಿವಾಸಿಗಳು, ರೈತ ಕಾರ್ಮಿಕರಿಗೆ ಆಗುತ್ತಿರುವ ತೊಂದರೆಗಳು ಸ್ವಾತಂತ್ರö್ಯ ಪೂರ್ವದಿಂದ ಇವೆ. ಈ ಬಗ್ಗೆ ಇಲ್ಲಿಯವರೆಗೂ ಯಾವುದೇ ಆಳುವ ಸರ್ಕಾರಗಳು ಕ್ಯಾರೆ ಎನ್ನದೆ ಪರಸ್ಪರ ಕೆಸರೇರಚುವ ಆಟದಲ್ಲಿ ತೊಡಗಿ ಮೂಲ ನಿವಾಸಿಗಳ ಸ್ವತಂತ್ರÈವನ್ನು ಕಸಿದುಕೊಳ್ಳಲು ಯತ್ನಿಸುತ್ತಿವೆ ಎಂದು ದೂರಿದರು.

ಅರಣ್ಯ ಪ್ರದೇಶದಲ್ಲಿ ಪರಿಸರಕ್ಕೆ ಹಾನಿಯಾಗದಂತೆ ಅಲ್ಪ ಪ್ರಮಾಣದ ಒತ್ತುವರಿ ಮಾಡಿ ಜೀವನ ಕಟ್ಟಿ ಕೊಂಡಿರುವ ನಿವಾಸಿಗಳನ್ನು ಸ್ಥಳಾಂತರಿಸಲು ನಕಲಿ ಪರಿಸರವಾದಿಗಳ ಸೋಗಿನಲ್ಲಿರುವ ಕೆಲವು ಎನ್‌ಜಿಓಗಳು ಡೀಮ್ಡ್ ಫಾರೆಸ್ಟ್, ಹುಲಿ ಸಂರಕ್ಷಣೆ ಯೋಜನೆ ಹೆಸರಿನಲ್ಲಿ ಕೆಲಸ ಮಾಡುವ ಜೊತೆಗೆ ಮುಳ್ಳಯ್ಯನಗಿರಿ ತಪ್ಪಲಿನ ಜನವಸತಿ ಪ್ರದೇಶವನ್ನು ಕಿತ್ತುಕೊಳ್ಳಲು ಹುನ್ನಾರ ನಡೆಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅರಣ್ಯ ವ್ಯಾಪ್ತಿಯಲ್ಲಿ ಜನವಸತಿ, ಕೃಷಿಭೂಮಿಯಲ್ಲಿ ವಾಸಿಸುತ್ತಿರುವವರಿಗೆ ಕಸ್ತೂರಿ ರಂಗನ್ ವರದಿ ತೂಗುಗತ್ತಿಯಂತೆ. ಯಾವುದೇ ವರದಿಗಳು ಜಾರಿಯಾಗದಿದ್ದಲ್ಲಿ ಮತ್ತೆ ತಿರುಗಿ ಬರಲಿವೆ. ಮುಂದಿನ ದಿನಗಳಲ್ಲಿ ಗ್ರಾಪಂ ವ್ಯಾಪ್ತಿಯಲ್ಲಿ ನಿವೇಶನವನ್ನಾಗಿ ಪರಿವರ್ತಿಸಲು ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆ ಅನುಮೋದನೆ ಕಡ್ಡಾಯವಾಗಲಿದೆ ಎಂದು ಎಚ್ಚರಿಸಿದರು.

ಡೀಮ್ಡ್ ಅರಣ್ಯದಲ್ಲಿ ಸಾವಿರಾರು ಕುಟುಂಬಗಳಿದ್ದು, ಸೂಕ್ತ ರೀತಿಯಲ್ಲಿ ಸರ್ವೆ ಕಾರ್ಯ ನಡೆಸಿ ಎಂದು ಸುಪ್ರೀಂ ಕೋರ್ಟ್ ಆದೇಶವಿದ್ದರೂ ಇಂದಿಗೂ ಜಿಲ್ಲಾಡಳಿತ ಕ್ರಮ ವಹಿಸದೇ ಮೌನತಾಳಿದೆ. ಸ್ಥಳೀಯ ಅಧಿಕಾರಿಗಳಿಗೆ ವಿಚಾರಿಸಿದರೆ ಆದೇಶದ ಪ್ರತಿ ಲಭ್ಯವಾಗಿಲ್ಲ ಎಂದು ಸಬೂಬು ಹೇಳಿಕೊಂಡು ಕಾಲಹರಣ ಮಾಡಿರುವ ಕಾರಣ ನಿವಾಸಿಗಳ ಸಮಸ್ಯೆ ಬಗೆಹರಿದಿಲ್ಲ ಎಂದರು.

ಇAದಿಗೂ ೯೪ಸಿ, ನಮೂನೆ ೫೩, ೫೭ ಅರ್ಜಿಗಳು ವಿಲೇವಾರಿಯಾಗುತ್ತಿಲ್ಲ. ಇ-ಖಾತೆ ಮತ್ತು ಪೋಡಿ ಆಗುತ್ತಿಲ್ಲ. ನಿವೇಶನ ರಹಿತರಿಗೆ ನಿವೇಶನಗಳು ಮಂಜೂರಾಗಿಲ್ಲ. ವಸತಿ ರಹಿತರಿಗೆ ನಿವೇಶನ ಇಲ್ಲದೇ ವಸತಿ ಯೋಜಜನೆಗಳಲ್ಲಿ ಮನೆಗಳ ಮಂಜೂರಾಗುತ್ತಿಲ್ಲ. ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಹೆಚ್ಚಿನ ಅನುದಾನಗಳು ನೀಡುತ್ತಿಲ್ಲ ಎಂದು ದೂರಿದರು.

ಹಿರಿಯ ಜನಪರ ಹೋರಾಟಗಾರ ಜಾರ್ಜ್ ಆಸ್ಟಿನ್ ಮಾತನಾಡಿ, ಮನೆ, ಕೃಷಿ ಭೂಮಿಗಳನ್ನು ಉಳಿಸಿಕೊಳ್ಳಲು ನಿವಾಸಿಗಳು ಶತಮಾನದಿಂದಲೇ ಹತ್ತಾರು ಹೋರಾಟಗಳನ್ನು ನಡೆಸಿಕೊಂಡು ಬಂದಿದ್ದಾರೆ. ಇದೀಗ ಅರಣ್ಯ ಇಲಾಖೆ ಕಿರುಕುಳದಿಂದ ಇಂದಿಗೂ ಬಹುತೇಕ ಕುಟುಂಬಗಳು ನೆಮ್ಮದಿಯಿಂದ ಬದುಕಲಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಅರಣ್ಯ ಮಧ್ಯೆ ಬದುಕು ಕಟ್ಟಿಕೊಂಡಿರುವ ಜನರು ಕಾಡಿನ ವಿರೋಧಿಗಳಲ್ಲ. ಪರಿಸರವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಕಾಫಿ ಸಸಿಗಳನ್ನು ಪೋಷಿಸಲಾಗುತ್ತಿದೆ. ಜನವಸತಿ, ಕೃಷಿ ಮತ್ತು ಅರಣ್ಯದ ಮಧ್ಯೆ ಗೆರೆ ಎಳೆಯಲಾಗಿಲ್ಲ. ಇದೀಗ ಕಾಡಿನಲ್ಲಿ ಜಾನುವಾರುಗಳ ಮೇಯಿಸುವಂತಿಲ್ಲ ಎಂಬ ಆದೇಶಗಳಿವೆ. ಮುಂದೆ ಅರಣ್ಯದಲ್ಲಿ ನಡೆದಾಡುವುದು ಕಷ್ಟಸಾಧ್ಯವಾಗಲಿದೆ ಎಂದು ಎಚ್ಚರಿಕೆ ನೀಡಿದರು.

ಶಿರವಾಸೆ ಗ್ರಾಪಂ ಅಧ್ಯಕ್ಷ ವಿ.ಆರ್.ರಘುನಾಥ್ ಮಾತನಾಡಿ, ಡೀಮ್ಡ್ ಫಾರೆಸ್ಟ್ ಸಮಸ್ಯೆ ಕುರಿತು ವಿಶೇಷ ಗ್ರಾಮಸಭೆಯನ್ನು ಆಯೋಜಿಸಲಾಗಿದ್ದು ಸಭೆಯಲ್ಲಿ ನಿವಾಸಿಗಳು ತಮ್ಮ ತಮ್ಮ ಅನಿಸಿಕೆ ಹಾಗೂ ಮೂಲ ದಾಖಲಾತಿ ಸಮೇತ ಸಲ್ಲಿಸಿದರೆ ಎಲ್ಲವೂ ಒಟ್ಟುಗೂಡಿಸಿ ಕೇಂದ್ರ ಹಾಗೂ ರಾಜ್ಯಸರ್ಕಾರಕ್ಕೆ ರವಾನಿಸಲಾಗುವುದು ಎಂದು ತಿಳಿಸಿದರು.

ಇದೇ ವೇಳೆ ಶಿರವಾಸೆ, ಗಾಳಿಗುಡ್ಡೆ, ಕಳವಾಸೆ, ಕೊಂಕಳಮನೆ, ಸಿದ್ದಾಪುರ ಗ್ರಾಮ ವ್ಯಾಪ್ತಿಯ ನೂರಾರು ಜನರು ಸಂತೆ ಮೈದಾನದಿಂದ ಗ್ರಾಮ ಪಂಚಾಯಿತಿ ಕಚೇರಿವರೆಗೆ ಕಾಲ್ನಡಿಗೆ ಜಾಥಾ ನಡೆಸಿ ಡೀಮ್ಡ್ ಫಾರೆಸ್ಟ್ ಹಾಗೂ ಸೆಕ್ಷನ್ ೪(೧) ಜಾರಿ ಮಾಡಲು ಹೊರಟಿರುವ ಸರ್ವೆ ನಂಬರ್‌ಗಳ ಮಾಹಿತಿ ಮನವಿ ಮೂಲಕ ಅಧ್ಯಕ್ಷರಿಗೆ ಸಲ್ಲಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಫಿಬೆಳೆಗಾರ ಕೆ.ಆರ್.ಚಂದ್ರೇಗೌಡ ವಹಿಸಿದ್ದರು. ಈ ಸಂದರ್ಭ ದಲ್ಲಿ ಹೋರಾಟ ಸಮಿತಿ ಪ್ರಧಾನ ಸಂಚಾಲಕ ಕೆ.ಕೆ.ರಘು, ಸಹಕಾರ ಸಂಘದ ಅಧ್ಯಕ್ಷ ಎಚ್.ಎಸ್.ಮಲ್ಲೇಶ್, ವಿವೇಕಾನಂದ ವಿದ್ಯಾಸಂಸ್ಥೆ ಗೌರವ ಕಾರ್ಯದರ್ಶಿ ಎಸ್.ಎಂ.ದೇವಣ್ಣಗೌಡ, ಶಿರವಾಸೆ ಕಸಾಪ ಅಧ್ಯಕ್ಷ ವಾಸುಪೂಜಾರಿ, ಮುಖಂಡರಾದ ಪ್ರಸನ್ನ, ವೆಂಕಟೇಶ್ ಹಾಗೂ ಗ್ರಾಪಂ ಸದಸ್ಯರು ಭಾಗವಹಿಸಿದ್ದರು.