ಜಿಲ್ಲೆ

‘ಕೃಷಿ ಪ್ರಯತ್ನ’ಕ್ಕೆ ವಯಸ್ಸಿನ ಹಂಗಿಲ್ಲ

ಚಾಮರಾಜನಗರ: ‘ವಯಸ್ಸು ಕೇವಲ ಒಂದು ಸಂಖ್ಯೆಯಷ್ಟೆ, ಹೊಸ ಪ್ರಯತ್ನ, ಪ್ರಯೋಗ ಮತ್ತು ಸಾಧನೆ ಮಾಡಲು ವಯಸ್ಸು ಅಡ್ಡಿಯಲ್ಲ’..

ಈ ಮಾತು ತಾಲೂಕಿನ ಬಿ.ಮಲ್ಲಯ್ಯನಪುರದ 62 ವರ್ಷ ವಯಸ್ಸಿನ ರೈತ ಎಂ.ಪಿ.ಮಹದೇವಪ್ಪಗೆ ಒಪ್ಪುತ್ತದೆ. ಏಕೆಂದರೆ ಮಕ್ಕಳಿಗೆ ಕೃಷಿ ಭೂಮಿ ಬಿಟ್ಟುಕೊಟ್ಟು ಮನೆಯಲ್ಲಿ ಕೂರುವ ಕಾಲದಲ್ಲಿ ಅವರೇ ವ್ಯವಸಾಯ ಮುಂದುವರೆಸಿದ್ದಾರೆ. ಯುವ ರೈತರೇ ಸಾವಯವ ಕೃಷಿ ಮಾಡಲು ಹಿಂದೇಟು ಹಾಕುವ ಈ ದಿನಗಳಲ್ಲಿ ಮಹದೇವಪ್ಪ ಮೂರು ವರ್ಷಗಳಿಂದ ಸಾವಯವ ಪದ್ಧತಿಯನ್ನು ಅಳಡಿಸಿಕೊಂಡು ಯಶಸ್ಸು ಕಾಣುತ್ತಿದ್ದಾರೆ.

ಉತ್ಸಾಹದಿಂದ ಆರಂಭ: ಎಸ್‌ಎಸ್‌ಎಲ್‌ಸಿ ಓದಿ ಬಳಿಕ ಮಹದೇವಪ್ಪ ಕೃಷಿಗೆ ಇಳಿದರು. 10 ಎಕರೆ ಜಮೀನಿನಲ್ಲಿ ಕೃಷಿ ಮಾಡುತ್ತಿದ್ದರು. ಇಷ್ಟು ವರ್ಷಗಳ ಸುದೀರ್ಘ ಕಾಯಕದಲ್ಲಿ ಬದಲಾವಣೆಯ ಅಗತ್ಯತೆ ಮಹದೇವಪ್ಪಗೆ ಅರಿವಾಯಿತು. ಹಾಗಾಗಿ ಕಳೆದ 2 ವರ್ಷಗಳ ಹಿಂದೆ ಸಾವಯವ ಪದ್ಧತಿಯಲ್ಲಿ ಕೃಷಿ ಆರಂಭಿಸಿದರು. ಚಾಮರಾಜನಗರ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ತೋಟಕ್ಕೆ ಭೇಟಿ ನೀಡಿ ಸಾವಯವ ಪದ್ಧತಿಯನ್ನು ಅಳವಡಿಸಿಕೊಂಡಿರುವುದನ್ನು ಗಮನಿಸಿದ್ದರು. ಪ್ರಮಾಣಪತ್ರವನ್ನೂ ಸಹ ನೀಡಿದ್ದಾರೆ.

ಪ್ರಸ್ತುತ 3ನೇ ವರ್ಷ ಉತ್ಸಾಹದಿಂದ ಕೃಷಿ ಕಾಯಕ ಮಾಡುತ್ತಿದ್ದಾರೆ. ಮೊದಲ ವರ್ಷ ಸಾವಯವ ವಿಧಾನದಲ್ಲಿ ಅರಿಶಿಣ ಬೆಳೆದರು. ಪ್ರಾರಂಭದಲ್ಲಿ ಕಡಿಮೆ ಇಳುವರಿ ಸಿಕ್ಕರೂ ಎರಡನೇ ವರ್ಷಕ್ಕೆ ಸಾವಯವ ಕೃಷಿಯನ್ನು ಮುಂದುವರೆಸಿದರು. ಬಳಿಕ ಬಾಳೆ ಹಾಕಿ ಉತ್ತಮ ಇಳುವರಿ ಪಡೆದರು. ಪ್ರಸ್ತುತ ಎರಡು ಮುಕ್ಕಾಲು ಎಕರೆಗೆ ಸಾವಯವ ವಿಧಾನದ ಕೃಷಿಯನ್ನು ವಿಸ್ತರಿಸಿದ್ದಾರೆ. 1 ಎಕರೆಯಲ್ಲಿ ಕಬ್ಬು ಹಾಕಿದ್ದಾರೆ. 1 ಎಕರೆಯಲ್ಲಿ ಅರಿಶಿಣ ಬೆಳೆದಿದ್ದಾರೆ. ಮುಕ್ಕಾಲು ಎಕರೆಯಲ್ಲಿ ನೇಂದ್ರ ಬಾಳೆ ಬೆಳೆದಿದ್ದಾರೆ. ತೋಟದಲ್ಲಿ ಹಲಸು, ಸೀಬೆ, ತೆಂಗಿನ ಮರಗಳಿವೆ. ಹುಲುಸಾಗಿ ಮೇವಿನ ಹುಲ್ಲು ಬೆಳೆದಿದೆ.

ಸಮೃದ್ಧಿಯ ಸಂಕೇತದಂತಿರುವ ಬೆಳೆಗಳು: ರೋಗ ಬಾಧೆ ಇಲ್ಲದ ಬಾಳೆ ಬೆಳೆ ನಳನಳಿಸುತ್ತಿದೆ. ಕಬ್ಬು ಸಹ ಚೆನ್ನಾಗಿ ಬರುತ್ತಿದೆ. ಅರಿಶಿಣ ಬೆಳೆಯು ಸಮೃದ್ಧವಾಗಿ ಬೆಳೆಯುತ್ತಿದೆ. ಇವುಗಳಿಗೆ ರಾಸಾಯನಿಕ ಗೊಬ್ಬರ, ಔಷಧಿ ಹಾಕಿಲ್ಲ. ಆದರೂ ಸಹ ಉತ್ತಮ ಬೆಳೆ ಬೆಳೆಬಹುದು ಎನ್ನುವುದನ್ನು ನೋಡಲು ರೈತ ಮಹದೇವಪ್ಪ ಅವರ ಜಮೀನು ಸಾಕ್ಷಿ. ಹನಿ ನೀರಾವರಿ ಮೂಲಕ ಬೆಳೆಗಳಿಗೆ ಜಲ ನೀಡುತ್ತಿದ್ದಾರೆ. ಜೀವಾಮೃತ, ಪಂಚಗವ್ಯವನ್ನು ಹನಿ ನೀರಾವರಿ ವ್ಯವಸ್ಥೆಯ ಮೂಲಕ ವಾರಕ್ಕೆ ಒಮ್ಮೆ ಬೆಳೆಗಳಿಗೆ ನೀಡುತ್ತಿದ್ದಾರೆ. ಹಸುಗಳಿಲ್ಲದ ಹಿನ್ನೆಲೆಯಲ್ಲಿ ಸಾವಯವ ದ್ರಾವಣಗಳನ್ನು ಹೊರಗಿನಿಂದಲೇ ತಂದು ಬೆಳೆಗಳಿಗೆ ನೀಡುತ್ತಿದ್ದಾರೆ.

ಆಸಕ್ತಿಯಲ್ಲಿ ಯುವ ಉತ್ಸಾಹಿ:

ರೈತ ಮಹದೇವಪ್ಪ ಇಳಿ ವಯಸ್ಸಿನ ರೈತನಾಗಿದ್ದರೂ ಸಾವಯವ ಕೃಷಿಯ ಬಗೆಗಿನ ಆಸಕ್ತಿಯಲ್ಲಿ ಅತ್ಯಂತ ಉತ್ಸಾಹಿ. ಹಾಗಿಯೇ ಇವರು ಸಾವಯವ ಕೃಷಿಯ ತರಬೇತಿಗಳಲ್ಲಿ ಕಡ್ಡಾಯವಾಗಿ ಭಾಗವಹಿಸುತ್ತಾರೆ. ಬೆಂಗಳೂರು, ಶಿವಮೊಬ್ಬ, ಚನ್ನರಾಯಪಟ್ಟಣ ಮತ್ತು ಇನ್ನಿತರೆ ಕಡೆಗಳಲ್ಲಿ ನಡೆದಿರುವ ತರಬೇತಿಗಳಲ್ಲಿ ಪಾಲ್ಗೊಂಡು ಜ್ಞಾನ ಹೆಚ್ಚಿಸಿಕೊಂಡಿದ್ದಾರೆ. ಪ್ರಗತಿ ಪರ ರೈತರ ಜಮೀನುಗಳಿಗೆ ಭೇಟಿ ನೀಡಿ ಅವರು ಬೆಳೆಗಳನ್ನು ಬೆಳೆಯುವ ವಿಧಾನಗಳನ್ನು ಗಮನಿಸಿ ತಾವೂ ಸಹ ಕೃಷಿ ಮಾಡಲು ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ. ಮುಖ್ಯವಾಗಿ ಚಾಮರಾಜನಗರದ ಕೃಷಿ ವಿಜ್ಞಾನ ಕೇಂದ್ರದ ತರಬೇತಿಗಳಲ್ಲಿ ಭಾಗವಹಿಸಿ ಸಾವಯವ ವಿಧಾನದಲ್ಲಿ ಕೃಷಿ ಮಾಡಲು ಶುರು ಮಾಡಿದರು. ಅಂತೆಯೇ ಇವರ ತೋಟಕ್ಕೆ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಭೇಟಿ ನೀಡಿ ಸಲಹೆ, ಮಾರ್ಗದರ್ಶನವ ನೀಡಿದ್ದಾರೆ. ಅರಿಶಿಣವನ್ನು ಸಾವಯವ ವಿಧಾನದಲ್ಲಿ ಬೆಳೆದ ಹಿನ್ನೆಲೆಯಲ್ಲಿ ಪ್ರಮಾಣ ಪತ್ರವೂ ಸಿಕ್ಕಿದೆ.

ಹಂತ ಹಂತವಾಗಿ ಅಳವಡಿಕೆ: ರೈತ ಮಹದೇವಪ್ಪ 10 ಎಕರೆ ಜಮೀನಿನಲ್ಲಿ ಹಂತ ಹಂತವಾಗಿ ಸಾವಯವ ಪದ್ಧತಿಯಲ್ಲಿ ಕೃಷಿ ಮಾಡಲು ಮುಂದಾಗಿದ್ದಾರೆ. 2 ವರ್ಷಗಳ ಹಿಂದೆ 1 ಎಕರೆ ಜಮೀನಿನಲ್ಲಿ ಅರಿಶಿಣ ಬೆಳೆದು ನೋಡಿದರು. ಬಳಿಕ ಎರಡನೇ ಎಕರೆಗೆ ಬಾಳೆ ಹಾಕಿದರು. ಈಗ ಮೂರನೇ ವರ್ಷದಲ್ಲಿ ಬಾಳೆ, ಅರಿಶಿಣ, ಕಬ್ಬು ಬೆಳೆದು ವ್ಯಾಪ್ತಿಯನ್ನು ವಿಸ್ತಾರ ಮಾಡಿಕೊಳ್ಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇಳಿದ ಎಕರೆಗಳಲ್ಲೂ ಸಾವಯವ ವಿಧಾನದಲ್ಲಿ ಬೆಳೆಗಳನ್ನು ಹಾಕುವ ಗುರಿಯನ್ನು ಹೊಂದಿದ್ದಾರೆ. ಗುಂಪು ಬಾಳೆ ಬೆಳೆಯಬೇಕೆಂದು ಚಿಂತನೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ನೆಲ ಹದಗೊಳಿಸಿಕೊಳ್ಳುತ್ತಿದ್ದಾರೆ. ಗುಂಪು ಬಾಳೆ ಬೆಳೆದಿರುವ ರೈತರ ಜಮೀನುಗಳಿಗೆ ಭೇಟಿ ನೀಡಿ ಮಾಹಿತಿ ಮತ್ತು ಸಲಹೆ, ಸೂಚನೆಗಳನ್ನು ಪಡೆದುಕೊಂಡಿದ್ದಾರೆ.

ಗೊಬ್ಬರದ ದರ ದುಬಾರಿಯಾಗಿದೆ. ಕೃಷಿ ಕೂಲಿ ಕಾರ್ಮಿಕರು ಕೆಲಸಕ್ಕೆ ಸಿಗುತ್ತಿಲ್ಲ. ಇಂತಹ ಹತ್ತಾರು ಸಮಸ್ಯೆಗಳಿಗೆ ಸಾವಯವ ವಿಧಾನದ ಅಳವಡಿಕೆ ಸರಳ ಪರಿಹಾರ. ರಾಸಾಯನಿಕ ಕೃಷಿ ಮಾಡುತ್ತಿರುವವರು ನೈಸರ್ಗಿಕ ಪದ್ಧತಿಯನ್ನು ಹಂತ ಹಂತವಾಗಿ ಅಳವಡಿಸಿಕೊಳ್ಳಬೇಕು. ಪ್ರಾರಂಭದಲ್ಲಿ ಕಡಿಮ ಇಳುವರಿ ಸಿಕ್ಕರೂ ಮುಂದಿನ ದಿನಗಳಲ್ಲಿ ಕಡಿಮೆ ಖರ್ಚು, ಉತ್ತಮ ಲಾಭ ದೊರೆಯುತ್ತದೆ. ಎಂ.ಪಿ.ಮಹದೇವಪ್ಪ, ಪ್ರಗತಿ ಪರ ರೈತ, ಬಿ.ಮಲ್ಲಯ್ಯನಪುರ