ಜಿಲ್ಲೆ

ಕೃಷಿ ಪರಿಕರ ಮಾರಾಟಗಾರರು ವೃತ್ತಿ ಧರ್ಮ ಪಾಲಿಸಬೇಕು

ಚಿತ್ರದುರ್ಗ: ಕಳಪೆ ಬಿತ್ತನೆ ಬೀಜ ಹಾಗೂ ಕಲಬೆರಕೆ ರಸಗೊಬ್ಬರಗಳ ವಂಚನೆ ಜಾಲದಿಂದ ದೂರವಿದ್ದು,ವೃತ್ತಿ ಧರ್ಮಪಾಲಿಸುವಂತೆ ಜಂಟಿ ಕೃಷಿ ನಿರ್ದೇಶಕ ಡಾ.ಬಿ.ಮಂಜುನಾಥ್ ಕೃಷಿ ಪರಿಕರ ಮಾರಾಟಗಾರರಿಗೆ ಸಲಹೆ ನೀಡಿದರು.
ಹೈದರಾಬಾದ್ ಕೃಷಿ ವಿಸ್ತರಣಾ ನಿರ್ವಹಣಾ ರಾಷ್ಟ್ರೀಯ ಸಂಸ್ಥೆ,ಬೆಂಗಳೂರು ಜಿಕೆವಿಕೆ,ಕೃಷಿ ಇಲಾಖೆ,ಚಿತ್ರದುರ್ಗ ಕೃಷಿ ತಂತ್ರಜ್ಞರ ಸಂಸ್ಥೆ ಸಹಯೋಗದಲ್ಲಿ ನಗರದ ಕೃಷಿ ತಂತ್ರಜ್ಞರ ಸಂಸ್ಥೆಯಲ್ಲಿ ಮಂಗಳವಾರ ಏರ್ಪಡಿಸಿದ್ದ,ಕೃಷಿ ಪರಿಕರ ಮಾರಾಟಗಾರರಿಗೆ 2022-23ನೇ ಸಾಲಿನ ಕೃಷಿ ವಿಸ್ತರಣಾ ಸೇವೆ ಡಿಪ್ಲೊಮಾ ದೇಸಿ ಪ್ರಮಾಣ ಪತ್ರ ವಿತರಣಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಬಿತ್ತನೆ ಬೀಜ,ರಸಗೊಬ್ಬರಗಳ ವಿಚಾರದಲ್ಲಿ ರೈತರನ್ನು ವಂಚಿಸುವ ಜಾಲವೇ ಇದೆ. ಇದರಿಂದ ದೂರವುಳಿದು ಗುಣಮಟ್ಟದ ಪರಿ ಕರಗಳನ್ನು ಮಾರಾಟ ಮಾಡಿ. ಇದರಿಂದ ರೈತರು ಉತ್ತಮ ಇಳುವರಿ ಪಡೆಯಲು ಸಾಧ್ಯವಾಗಲಿದೆ. ನಾವು ರೈತರ ಬದುಕನ್ನು ಕಟ್ಟಿ ಕೊಡುವಂತಾಗಬೇಕೆಂದರು.
ರಾಜ್ಯದ ಎಲ್ಲ ಕಡೆ ಮಳೆಯಾಗುತ್ತಿದ್ದರೂ ಚಿತ್ರದುರ್ಗ ಜಿಲ್ಲೆಯಲ್ಲಿ ಮಳೆ ಪ್ರಮಾಣ ಕಡಿಮೆ ಇದೆ. ಪಶ್ಚಿಮ ಮತ್ತು ಪೂರ್ವ ಸಮುದ್ರ ಗಳ ತೀರಗಳ ಕಡೆಗಳಿಂದ ಈ ಜಿಲ್ಲೆ 320 ಕಿ.ಮೀ.ದೂರ ಇರುವುದಿರಂದ ಸೌತ್ ಹಾಗೂ ನಾರ್ತ್‌ವೆಸ್ಟ್ ಮಾನ್‌ಸೂನ್ ತಲುಪುವುದಿಲ್ಲ. ಇದರಿಂದ ಅತೀ ಕಡಿಮೆ ಮಳೆ ಬೀಳುವ ಈ ಪ್ರದೇಶದಲ್ಲಿ ಸಾಕಷ್ಟು ಬೆಳೆ ವೈಫಲ್ಯ ಕಾಣುತ್ತಿದ್ದೇವೆ ಎಂದರು.
ಪ್ರಮಾಣಪತ್ರ ಪಡೆದ ಕೃಷಿ ಪರಿಕರ ಮಾರಾಟಗಾರರಿಗೆ ಪ್ರತಿಜ್ಞಾವಿಧಿ ಬೋಧಿಸಿದ ಜಿಕೆವಿಕೆ ರಾಜ್ಯನೋಡಲ್‌ಅಧಿಕಾರಿ ಡಾ.ಆರ್.ನಾ ರಾಯಣರೆಡ್ಡಿ ಮಾತನಾಡಿ,ಸ್ವಾತಂತ್ರ್ಯನಂತರ ಹಸಿರು ಕ್ರಾಂತಿಯ ಮೂಲಕ ಕೃಷಿ ಉತ್ಪನ್ನಗಳಲ್ಲಿ ಸ್ವಾವಲಂಬನೆ ಸಾಧಿಸಿದ್ದೇವೆ,150 ಕೋಟಿ ಜನರಿಗೆ ಎರಡು ವರ್ಷಗಳಿಗೆ ಸಾಕಾಗುವಷ್ಟು ಧವಸ-ಧಾನ್ಯಗಳ ಸಂಗ್ರಹವಿದೆ ಎಂದರು.
ಪಶುವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕ ಡಾ.ಕುಮಾರ್ ಮಾತನಾಡಿ,ದೇಸಿ ಹಸುಗಳ ಸಂತಾನೋತ್ಪತ್ತಿಗೆ ಆದ್ಯತೆ ಕೊಡಲಾ ಗುತ್ತಿದೆ. ಜಾನುವಾರುಗಳ ಚಿಕಿತ್ಸೆಗೆ ಇಲಾಖೆ 1962 ಸಹಾಯವಾಣಿ ಸಂಖ್ಯೆಗೆ ಕರೆ ಮಾಡುವಂತೆ ರೈತರಿಗೆ ಸಲಹೆ ನೀಡಿದರು.
ಹಿರಿಯೂರು ಬಬ್ಬೂರು ಫಾರಂ ಸಹ ಸಂಶೋಧನಾ ನಿರ್ದೇಶಕ ಡಾ.ಸುರೇಶ್ ಏಕಬೋಟೆ,ತೋಟಗಾರಿಕೆ ಸಹಾಯಕ ನಿರ್ದೇಶಕ ಯಶವಂತ್‌ಕುಮಾರ್,ಚಿತ್ರದುರ್ಗ ಕೃಷಿ ತಂತ್ರಜ್ಞರ ಸಂಸ್ಥೆ ಜಿ.ಸಿ.ರಂಗಸ್ವಾಮಿ, ಉಪಾಧ್ಯಕ್ಷ ಕಟ್ಟ ಶ್ರೀ ನಿವಾಸರೆಡ್ಡಿ,ಕಾರ‌್ಯದರ್ಶಿ ಜಿ.ಟಿ.ವೀರ ಭದ್ರರೆಡ್ಡಿ ಮಾತನಾಡಿದರು. ಕೃಷಿ ಇಲಾಖೆ ಉಪನಿರ್ದೇಶಕರಾದ ಕೆ.ಎಸ್.ಶಿವಕುಮಾರ್,ಡಾ.ಬಿ.ಎನ್.ಪ್ರಭಾಕರ್, ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ಸಹಾಯಕ ನಿರ್ದೇಶಕ ಡಾ.ಸಿ.ತಿಪ್ಪೇಸ್ವಾಮಿ ಇತರರು ಇದ್ದರು.