ವಿಜಯವಾಣಿ ಸುದ್ದಿಜಾಲ ಗದಗ
ತಾಲೂಕಿನ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೃಷಿ ವಿಶ್ವವಿದ್ಯಾಲಯ ಸಹಯೋಗದಲ್ಲಿ ಕೃಷಿ ಪರಿಕರ ಮಾರಾಟಗಾರರಿಗೆ ಮಂಗಳವಾರ ತರಬೇತಿ ಕಾರ್ಯಕ್ರಮ ನೆರವೇರಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಧಾರವಾಡದ ಕೃಷಿ ವಿಸ್ತರಣಾ ನಿರ್ದೇಶಕ ಡಾ. ಆರ್. ಬಸವರಾಜಪ್ಪ, ಮಣ್ಣಿನ ಪೋಷಕಾಂಶದ ನಿರ್ವಹಣೆ, ರೋಗ ಮತ್ತು ಕೀಟಬಾಧೆಗಳ ಸಮಸ್ಯೆ ಹಾಗೂ ವಿವಿಧ ಬೆಳೆಗಳ ಸಮಗ್ರ ಕೃಷಿ ಪದ್ಧತಿಯ ಕುರಿತು ಕೃಷಿ ಪರಿಕರ ಮಾರಾಟಗಾರರು ದೇಸಿ ತರಬೇತಿಯ ಮೂಲಕ ಸಮರ್ಪಕವಾಗಿ ಅಧ್ಯಯನ ಮಾಡಬೇಕು. ರೈತರಿಗೆ ಉಪಯುಕ್ತ ಮಾಹಿತಿಯನ್ನು ನೀಡಬೇಕು ಎಂದರು.
ರಾಜ್ಯ ನೊಡಲ್ ಅಧಿಕಾರಿ ಡಾ. ಎಸ್. ಎನ್. ಜಾಧವ ಮಾತನಾಡಿ, ದೇಸಿ ತರಬೇತಿಯಿಂದ ಕೃಷಿ ಪರಿಕರ ಮಾರಾಟಗಾರರು ಸಂಯುಕ್ತ ರಸಗೊಬ್ಬರಗಳು ಹಾಗೂ ಸಾವಯವ ಗೊಬ್ಬರಗಳ ಬಳಕೆಯ ಕುರಿತು ರೈತರಿಗೆ ಹೆಚ್ಚಿನ ಮಾಹಿತಿ ತಲುಪಿಸಬೇಕು ಹಾಗೂ 40 ವಾರಗಳ ಕಾಲ ನಡೆಯಲಿರುವ ಈ ತರಬೇತಿಯಲ್ಲಿ ಶಿಬಿರಾಥಿರ್ಗಳು ಶ್ರದ್ಧೆ ಮತ್ತು ನಿಷ್ಠೆಯಿಂದ ಭಾಗವಹಿಸಿ ಸದುಪಯೋಗ ಪಡೆಯಬೇಕು ಎಂದು ಹೇಳಿದರು.
ಜಂಟಿ ಕೃನಿರ್ದೇಶಕಿ ತಾರಾಮಣಿ ಜಿ. ಎಚ್ ಮಾತನಾಡಿ, ದೇಸಿ ತರಬೇತಿ ಪಡೆದ ನಂತರ ಶಿಬಿರಾಥಿರ್ಗಳು ಕೃಷಿ ಇಲಾಖೆ, ಕೃಷಿ ವಿಜ್ಞಾನ ಕೇಂದ್ರ ಹಾಗೂ ರೈತರ ನಡುವೆ ಕೊಂಡಿಯಾಗಿ ಸೇವೆ ಸಲ್ಲಿಸಬೇಕು. ಇಲಾಖೆಯ ವಿವಿಧ ಸೌಲಭ್ಯಗಳನ್ನು ರೈತರಿಗೆ ತಲುಪಿಸುವುದು ಹಾಗೂ ಕೃಷಿಯಲ್ಲಿ ಹೊಸ ತಂತ್ರಜ್ಞಾನಗಳ ಕುರಿತು ಮಾಹಿತಿ ನೀಡುವಲ್ಲಿ ವಿಸ್ತರಣಾ ಸಲಹೆಗಾರರಾಗಿ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯತೆ ವಹಿಸಿ ಮಾತನಾಡಿದ ಕೆವಿಕೆ ಮುಖ್ಯಸ್ಥೆ ಸುಧಾ ಮಂಕಣಿ, ದೇಸಿ ತರಬೇತಿ ಪಡೆದ ಜಿಲ್ಲೆಯ ಅನೇಕ ಕೃಷಿ ಪರಿಕರ ಮಾರಾಟಗಾರರು ರೈತರ ಸೇವೆಯಲ್ಲಿ ಕಾರ್ಯ ಪ್ರವೃತ್ತರಾಗಬೇಕು. ಈ ತರಬೇತಿಯಲ್ಲಿ ಅವಶ್ಯವಿರುವ ಸಂಪನ್ಮೂಲ ವ್ಯಕ್ತಿಗಳು ಹಾಗೂ ಹೆಚ್ಚಿನ ಕಲಿಕೆಗೆ ಬೇಕಾಗುವ ಎಲ್ಲ ಸೌಲಭ್ಯಗಳನ್ನು ಕೃಷಿ ವಿಜ್ಞಾನ ಕೇಂದ್ರದ ಮೂಲಕ ಒದಗಿಸಲಾಗುವುದು ಎಂದರು.
ಎಸ್. ಕೆ. ಮುದ್ಲಾಪುರ, ಎನ್. ಎಚ್. ಭಂಡಿ, ಡಾ. ವಿನಾಯಕ ನಿರಂಜನ ಹಲವರು ಇದ್ದರು.