ಜಿಲ್ಲೆ

ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಹಣ ದುರುಪಯೋಗ

ಪಾಂಡವಪುರ: ಪಾಂಡವಪುರ ಕಸಬಾ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಏಳು ಕೋಟಿ ರೂ.ಗೂ ಅಧಿಕ ಹಣ ದುರುಪಯೋಗಪಡಿಸಿಕೊಂಡಿರುವ ಸಂಘದ ನೌಕರರು ಮತ್ತು ಎಂಡಿಸಿಸಿ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸಂಘದ ಅಧ್ಯಕ್ಷ ಬಿ.ಎನ್.ಯೋಗೇಶ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಹಣ ದುರುಪಯೋಗದಲ್ಲಿ ಸಂಘದ ಈ ಹಿಂದಿನ ಸಿಇಒ ಎಚ್.ಸಂದೇಶ್, ಎಂಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ರಮೇಶ್, ಲೆಕ್ಕಪರಿಶೋಧಕ ಪ್ರವೀಣ್‌ಕುಮಾರ್, ಶಿರಸಿಯ ಎಸ್‌ಜಿಎನ್ ನಿರ್ವಾಹಕ ಮತ್ತು ಎಂಡಿಸಿಸಿ ಬ್ಯಾಂಕ್ ವ್ಯವಸ್ಥಾಪಕರು ಕಾರಣರಾಗಿದ್ದಾರೆ. ಸಹಕಾರ ಸಂಘದ ಹುದ್ದೆಯನ್ನು ದುರ್ಬಳಕೆ ಮಾಡಿಕೊಂಡು, ದಾಖಲೆಗಳನ್ನು ಸೃಷ್ಟಿಸಿ ಸಹಕಾರ ಸಂಘಕ್ಕೆ ದ್ರೋಹ, ಹಣದ ವಂಚನೆ ಸೇರಿದಂತೆ ಹಲವು ಕೃತ್ಯಗಳನ್ನು ಎಸಗಿದ್ದಾರೆ. ಇದರಿಂದ ಸಾರ್ವಜನಿಕರ ಸುಮಾರು ಏಳು ಕೋಟಿ, ಒಂಬತ್ತು ಲಕ್ಷ ರೂ.ದುರುಪಯೋಗವಾಗಿದೆ. ಸಹಕಾರ ಸಂಘದ ಮೇಲ್ವಿಚಾರಕ ಅಧಿಕಾರಗಳ ನಿರ್ಲಕ್ಷ್ಯದಿಂದ ಸಂಘದಲ್ಲಿ ಆರ್ಥಿಕ ಸಂಕಷ್ಟ ಉಂಟಾಗಿದೆ. ಸಾರ್ವಜನಿಕರ ಹಣ ದುರ್ಬಳಕೆ ಮಾಡಿಕೊಂಡಿರುವ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಂಡು ಸಹಕಾರಿ ಸಂಸ್ಥೆ ಉಳಿಸಿಕೊಡುವಂತೆ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಪಿಗ್ಮಿ ಸಂಗ್ರಹಗಾರರ ಪ್ರತಿಭಟನೆ: ಸಂಘದ ವ್ಯವಹಾರದ ಮೇಲೆ ನಂಬಿಕೆ ಇಟ್ಟು ಸಾರ್ವಜನಿಕರಿಂದ ವಸೂಲಿ ಮಾಡಲಾಗಿದ್ದ ಪಿಗ್ಮಿ ಠೇವಣಿ ಹಣವನ್ನು ಹಿಂದಿರುಗಿಸುವಲ್ಲಿ ಸಂಘದ ಆಡಳಿತ ಮಂಡಳಿ ಮತ್ತು ನೌಕರ ವರ್ಗ ವಿಫಲವಾಗಿದ್ದಾರೆ ಎಂದು ಆರೋಪಿಸಿ ಸಂಘದ ಫಿಗ್ಮಿ ಸಂಗ್ರಹಗಾರರು ಸಂಘದ ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದರು.

ಸಂಘದಲ್ಲಿ ಐವರು ಫಿಗ್ಮಿ ಹಣ ಸಂಗ್ರಹಿಸುವ ಕೆಲಸ ನಿರ್ವಹಿಸುತ್ತಿದ್ದು, ಸಂಘದ ಷೇರುದಾರರು, ವ್ಯಪಾರಸ್ಥರು, ರೈತರಿಂದ ಒಂದೂವರೆ ಕೋಟಿ ರೂ.ಗಿಂತಲೂ ಅಧಿಕ ಫಿಗ್ಮಿ ವಸೂಲಿ ಮಾಡಿ ಸಂಘಕ್ಕೆ ಜಮೆ ಮಾಡಿದ್ದೇವೆ. ಸಂಘದಲ್ಲಿ ಹಣ ದುರ್ಬಳಕೆಯಾಗಿರುವ ವಿಚಾರ ಹೊರಬರುತ್ತಲೇ ಫಿಗ್ಮಿದಾರರು ತಾವು ಕಟ್ಟಿರುವ ಹಣವನ್ನು ವಾಪಸ್ ಮಾಡುವಂತೆ ಪಟ್ಟು ಹಿಡಿದಿದ್ದಾರೆ. ಆದರೆ ಆಡಳಿತ ಮಂಡಳಿಯವರು ಮತ್ತು ನೌಕರರು ಸಾರ್ವಜನಿಕರ ಹಣ ಹಿಂದಿರುಗಿಸದೆ ಸತಾಯಿಸುತ್ತಿದ್ದಾರೆ. ಇದರಿಂದ ಹಣ ಸಂಗ್ರಹ ಮಾಡಿರುವ ನಮಗೆ ತುಂಬಾ ತೊಂದರೆಯಗುತ್ತಿದೆ.

ಫಿಗ್ಮಿದಾರರು ಹಣ ಹಿಂದಿರುಗಿಸುವಂತೆ ನಮ್ಮ ಮೇಲೆ ಒತ್ತಡ ಹಾಕುತ್ತಿದ್ದಾರೆ. ಹಣ ಹಿಂದಿರುಗಿಸಲು ಆಡಳಿತ ಮಂಡಳಿ ನೀಡಿದ್ದ ಗಡುವುಗಳೆಲ್ಲ ಮುಗಿದಿದ್ದು, ಸಹಕಾರಿ ಸಂಘಗಳ ನಿಬಂಧಕರು ಮತ್ತು ಮೇಲ್ಪಟ್ಟ ಅಧಿಕಾರಿಗಳು ಬಂದು ಸಮಸ್ಯೆ ಬಗೆಹರಿಸಬೇಕು. ಅಲ್ಲಿಯವರೆಗೂ ಪ್ರತಿಭಟನೆ ಮುಂದುವರಿಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ನಿಂಗೇಗೌಡ, ಪ್ರಕಾಶ್, ಎಚ್.ಇ.ಅನಿಲ್‌ಕುಮಾರ್, ಎಚ್.ಪಿ.ಕಿರಣ, ರೆಹಮಾನ್ ಷರೀಫ್ ಇದ್ದರು.